ವಾಷಿಂಗ್ಟನ್ : ಪಶ್ಚಿಮ ಏಷ್ಯಾದಲ್ಲಿ ಸೇನಾ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆಗೈಯಲು ಇರಾನ್ ಹೊಂಚು ಹಾಕುತ್ತಿದೆ ಎಂಬ ಇಸ್ರೇಲ್‌ನ ಗುಪ್ತಚರ ಮಾಹಿತಿ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇರಾನ್‌ನ ಹಿಟ್ ಲಿಸ್ಟ್‌ನಲ್ಲಿ ತಾವೇ ಮೊದಲ ಸ್ಥಾನದಲ್ಲಿದ್ದಾಗಿ ಸ್ವತಃ ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ, ಅತ್ಯಂತ ರಹಸ್ಯವಾಗಿಡಬೇಕಾಗಿದ್ದ ಈ ಸೂಕ್ಷ್ಮ ಗುಪ್ತಚರ ವರದಿಯನ್ನು ಇಸ್ರೇಲ್ ಜಗಜ್ಜಾಹೀರು ಮಾಡಿದ್ದರ ಹಿಂದೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬಲಿಷ್ಠ ಯುದ್ಧತಂತ್ರ ಅಡಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ಶಂಕಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇರಾನ್ ವಿರುದ್ಧದ ತನ್ನ ಹೋರಾಟಕ್ಕೆ ಅಮೆರಿಕದ ಮಿಲಿಟರಿ ಬೆಂಬಲವನ್ನು ಉಳಿಸಿಕೊಳ್ಳಲು ಮತ್ತು ಇರಾನ್ ವಿರುದ್ಧ ಕಠಿಣ ನಿಲುವು ತಳೆಯುವಂತೆ ಶ್ವೇತಭವನದ ಮೇಲೆ ಒತ್ತಡ ಹೇರಲು ಇಸ್ರೇಲ್ ಈ ವರದಿಯನ್ನು ಉದ್ದೇಶಪೂರ್ವಕವಾಗಿ ಲೀಕ್ ಮಾಡಿರಬಹುದು ಎಂಬ ಗುಮಾನಿ ಅಮೆರಿಕದ ಸೇನಾ ವಲಯದಲ್ಲಿ ವ್ಯಕ್ತವಾಗಿದೆ.
ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಾಂಪ್ರದಾಯಿಕ ಬಾಂಧವ್ಯದಲ್ಲಿ ಇತ್ತೀಚೆಗೆ ಬಿರುಕು ಮೂಡಿರುವುದಕ್ಕೆ ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ನೆತನ್ಯಾಹು ನಡುವಿನ ವಾಕ್ಸಮರವೇ ಸಾಕ್ಷಿಯಾಗಿದೆ. ಜಗತ್ತಿನಲ್ಲಿ ಅಮೆರಿಕ ಬಿಟ್ಟರೆ ಇಸ್ರೇಲ್‌ಗೆ ಬೇರೆ ಯಾರೂ ಆಪ್ತರಿಲ್ಲ ಎಂಬ ವ್ಯಾನ್ಸ್ ಹೇಳಿಕೆಗೆ ತಿರುಗೇಟು ನೀಡಿದ್ದ ನೆತನ್ಯಾಹು, ಭಾರತದ ಹೆಸರನ್ನು ಪ್ರಸ್ತಾಪಿಸಿ ತಮಗೆ ಜಾಗತಿಕವಾಗಿ ಹಲವು ಮಿತ್ರರಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು. ಈ ನಡುವೆ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮುಖ್ಯಸ್ಥರಾಗಿ ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಅಹ್ಮದ್ ವಾಹಿದಿ ಅವರು ನೇರವಾಗಿ ಟ್ರಂಪ್ ಅವರನ್ನೇ ಗುರಿಯಾಗಿಸಿಕೊಂಡಿದ್ದಾರೆ ಎಂಬ ಇಸ್ರೇಲ್‌ನ ವರದಿ ಸತ್ಯಕ್ಕೆ ಹತ್ತಿರವಾಗಿದ್ದರೂ, ಇಸ್ರೇಲ್ ಇದನ್ನು ಅಮೆರಿಕದ ಮೇಲಿನ ರಾಜತಾಂತ್ರಿಕ ಒತ್ತಡದ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂಬ ವಿಶ್ಲೇಷಣೆಗಳು ತೀವ್ರಗೊಂಡಿವೆ.