image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಚೀನಾದ ಬೃಹತ್ ಅಣೆಕಟ್ಟು ಯೋಜನೆಗೆ ಸ್ವಂತ ವಿಜ್ಞಾನಿಗಳಿಂದಲೇ ಎಚ್ಚರಿಕೆ: ಭಾರತಕ್ಕೆ ಹೆಚ್ಚಿದ ಆತಂಕ

ಚೀನಾದ ಬೃಹತ್ ಅಣೆಕಟ್ಟು ಯೋಜನೆಗೆ ಸ್ವಂತ ವಿಜ್ಞಾನಿಗಳಿಂದಲೇ ಎಚ್ಚರಿಕೆ: ಭಾರತಕ್ಕೆ ಹೆಚ್ಚಿದ ಆತಂಕ

ಟಿಬೆಟ್ : ಟಿಬೆಟ್‌ನಲ್ಲಿ ಬ್ರಹ್ಮಪುತ್ರಾ (ಯಾರ್ಲುಂಗ್ ಟ್ಸಾಂಗ್‌ಪೋ) ನದಿಗೆ ಅಡ್ಡಲಾಗಿ ಚೀನಾ ನಿರ್ಮಿಸುತ್ತಿರುವ ವಿಶ್ವದ ಅತಿ ದೊಡ್ಡ ಜಲವಿದ್ಯುತ್ ಯೋಜನೆಗೆ ಈಗ ಅಲ್ಲಿನ ಸರ್ಕಾರಿ ಬೆಂಬಲಿತ ವಿಜ್ಞಾನಿಗಳಿಂದಲೇ ತೀವ್ರ ಆತಂಕ ವ್ಯಕ್ತವಾಗಿದೆ. ಈ ಅಣೆಕಟ್ಟು ನಿರ್ಮಾಣವಾಗುತ್ತಿರುವ ಜಾಗವು ಅತ್ಯಂತ ದೋಷಪೂರಿತ ಹಾಗೂ ಅಪಾಯಕಾರಿ ವಲಯದಲ್ಲಿದೆ ಎಂದು ಚೀನಾ ಜಿಯೋಲಾಜಿಕಲ್ ಸರ್ವೇ ಮೇಲ್ವಿಚಾರಣೆಯಲ್ಲಿ ನಡೆದ ಸಂಶೋಧನಾ ವರದಿಯೊಂದು ಎಚ್ಚರಿಸಿದೆ. ‘ಸೆಡಿಮೆಂಟರಿ ಜಿಯೋಲಜಿ ಅಂಡ್ ಟೆಥಿಯನ್ ಜಿಯೋಲಜಿ’ ಜರ್ನಲ್‌ನಲ್ಲಿ ಪ್ರಕಟವಾಗಿರುವ ಈ ವರದಿಯ ಪ್ರಕಾರ, ಪ್ರಸ್ತಾವಿತ ಅಣೆಕಟ್ಟಿನ ಜಲಾನಯನ ಪ್ರದೇಶದ ಅಡಿಯಲ್ಲೇ ಹಿಮಯುಗದ ಕಾಲದಿಂದಲೂ ಸಕ್ರಿಯವಾಗಿರುವ ‘ಪೈಜೆನ್ ದೋಷರೇಖೆ’ (Paizhen Fault) ಹಾದುಹೋಗುತ್ತದೆ. ನಿರಂತರ ಟೆಕ್ಟಾನಿಕ್ ಚಟುವಟಿಕೆಗಳಿಂದಾಗಿ ಇಲ್ಲಿನ ಬಂಡೆಗಳು ಬಿರುಕು ಬಿಟ್ಟಿದ್ದು, ಮಣ್ಣಿನ ಹಿಡಿತ ತೀರಾ ಸಡಿಲವಾಗಿದೆ. ಅಣೆಕಟ್ಟಿನಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹವಾದಾಗ ಉಂಟಾಗುವ ಒತ್ತಡದಿಂದಾಗಿ ಜಲಾನಯನ ಪ್ರದೇಶದ ಎರಡೂ ಬದಿಗಳಲ್ಲಿ ಭೀಕರ ಭೂಕುಸಿತಗಳು ಹಾಗೂ ಭೂಕಂಪಗಳು ಸಂಭವಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಇಂಜಿನಿಯರ್‌ಗಳಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ. 2017ರಲ್ಲಿ ಇದೇ ಪ್ರದೇಶದಲ್ಲಿ 6.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದನ್ನು ವರದಿಯಲ್ಲಿ ನೆನಪಿಸಲಾಗಿದೆ.

ಸ್ವತಃ ಚೀನಾದ ಸಂಶೋಧಕರೇ ಈ ದೈತ್ಯ ಯೋಜನೆಯ ಸುರಕ್ಷತೆಯ ಬಗ್ಗೆ ವರದಿ ಬಿಡುಗಡೆ ಮಾಡಿರುವುದು ಈಗ ಜಾಗತಿಕವಾಗಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಭಾರತ ಮತ್ತು ಬಾಂಗ್ಲಾದೇಶದ ಆತಂಕಕ್ಕೆ ಹೊಸ ಧ್ವನಿ ಸಿಕ್ಕಂತಾಗಿದೆ. ಭಾರತದ ಅರುಣಾಚಲ ಪ್ರದೇಶದ ಗಡಿಗೆ ತೀರಾ ಹತ್ತಿರದಲ್ಲಿರುವ ‘ಗ್ರೇಟ್ ಬೆಂಡ್’ (ನದಿಯು ತೀವ್ರ ತಿರುವು ಪಡೆಯುವ ಜಾಗ) ಬಳಿ ಚೀನಾ ಈ ಅಣೆಕಟ್ಟನ್ನು ಕಟ್ಟುತ್ತಿದೆ. ಇಲ್ಲಿಂದಲೇ ಈ ನದಿಯು ಭಾರತಕ್ಕೆ ಪ್ರವೇಶಿಸಿ ಮುಂದೆ ಅಸ್ಸಾಂನಲ್ಲಿ ‘ಬ್ರಹ್ಮಪುತ್ರಾ’ ಆಗಿ ಹರಿಯುತ್ತದೆ. ಭೂಕಂಪ ಪೀಡಿತ ಹಿಮಾಲಯದ ಈ ಸೂಕ್ಷ್ಮ ವಲಯದಲ್ಲಿ ಏನಾದರೂ ಅನಾಹುತ ಸಂಭವಿಸಿ ಅಣೆಕಟ್ಟು ಮುರಿದರೆ ಅಥವಾ ಚೀನಾ ಏಕಾಏಕಿ ನೀರು ಬಿಟ್ಟರೆ ಭಾರತದ ಈಶಾನ್ಯ ರಾಜ್ಯಗಳು ಮತ್ತು ಬಾಂಗ್ಲಾದೇಶದಲ್ಲಿ ಜಲಪ್ರಳಯವೇ ಸೃಷ್ಟಿಯಾಗಬಹುದು. ಹಾಗೆಯೇ ಒಣ ಹವೆ ಇರುವಾಗ ಚೀನಾ ನೀರನ್ನು ಹಿಡಿದಿಟ್ಟುಕೊಂಡರೆ ಕೆಳಗಿನ ದೇಶಗಳ ನೀರಿನ ಭದ್ರತೆಗೆ ಧಕ್ಕೆ ಬರಲಿದೆ. ಸುಮಾರು 15 ಲಕ್ಷ ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು ಚೀನಾದ ಪ್ರಸಿದ್ಧ ‘ತ್ರೀ ಗೋರ್ಜಸ್ ಡ್ಯಾಮ್’ಗಿಂತ ಮೂರು ಪಟ್ಟು ಹೆಚ್ಚು ಅಂದರೆ ವಾರ್ಷಿಕ ಸುಮಾರು 60 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಲಿದ್ದು, 2030ರ ವೇಳೆಗೆ ಪೂರ್ಣಗೊಳ್ಳುವ ಗುರಿ ಹೊಂದಿದೆ. ಆದರೆ ಪ್ರಕೃತಿಯ ನಿಯಮಗಳನ್ನು ಮೀರಿ ಕೈಹಾಕಿರುವ ಈ ದೈತ್ಯ ಸಾಹಸ ಇಡೀ ದಕ್ಷಿಣ ಏಷ್ಯಾದ ಪರಿಸರ ಮತ್ತು ಕೋಟ್ಯಂತರ ಜನರ ಸುರಕ್ಷತೆಯನ್ನು ತೂಗುಗತ್ತಿಗೆ ತಳ್ಳಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ