image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಅಮೆರಿಕ-ಇರಾನ್ ಕದನ ವಿರಾಮ ಅಂತ್ಯ: ಡೊನಾಲ್ಡ್ ಟ್ರಂಪ್

ಅಮೆರಿಕ-ಇರಾನ್ ಕದನ ವಿರಾಮ ಅಂತ್ಯ: ಡೊನಾಲ್ಡ್ ಟ್ರಂಪ್

ಟರ್ಕಿ : ಟರ್ಕಿಯ ಅಂಕಾರಾದಲ್ಲಿ ನಡೆಯುತ್ತಿರುವ ನ್ಯಾಟೋ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮ ಅಧಿಕೃತವಾಗಿ ಮುಕ್ತಾಯಗೊಂಡಿದೆ ಎಂದು ಘೋಷಿಸಿದ್ದಾರೆ. ಜೂನ್ 17 ರಂದು ಉಭಯ ದೇಶಗಳ ನಡುವೆ ಏರ್ಪಟ್ಟಿದ್ದ ಕದನ ವಿರಾಮ ಒಪ್ಪಂದವನ್ನು ಇರಾನ್ ಪದೇ ಪದೆ ಉಲ್ಲಂಘಿಸಿದೆ ಎಂದು ಟ್ರಂಪ್ ಗಂಭೀರವಾಗಿ ಆರೋಪಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ 85ಕ್ಕೂ ಹೆಚ್ಚು ಸೇನಾ ನೆಲೆಗಳ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ದಾಳಿ ನಡೆಸಿರುವುದಾಗಿ ಇರಾನ್ ಪ್ರಕಟಿಸಿದ ಬೆನ್ನಲ್ಲೇ ಟ್ರಂಪ್ ಈ ಆಕ್ರೋಶ ಹೊರಹಾಕಿದ್ದಾರೆ. ಇರಾನ್ ನಾಯಕರನ್ನು ಕಠಿಣ ಪದಗಳಿಂದ ನಿಂದಿಸಿದ ಟ್ರಂಪ್, ಅವರೊಂದಿಗೆ ಶಾಂತಿ ಮಾತುಕತೆ ನಡೆಸುವುದು ವ್ಯರ್ಥ ಮತ್ತು ಸಮಯದ ಅಪವ್ಯಯ ಎಂದಿದ್ದಾರೆ. ಅಲ್ಲದೆ, ಇರಾನ್ ವಿರುದ್ಧ ಅಮೆರಿಕ ಮತ್ತೊಂದು ಸುತ್ತಿನ ಬೃಹತ್ ವೈಮಾನಿಕ ದಾಳಿಗೆ ಸಿದ್ಧತೆ ನಡೆಸುತ್ತಿರುವುದಾಗಿ ಅವರು ಎಚ್ಚರಿಸಿದ್ದಾರೆ.

ಅಮೆರಿಕದ ಯುದ್ಧ ಸಂಧಾನಕಾರರಾದ ಉದ್ಯಮಿ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರೊಂದಿಗೆ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ ಟ್ರಂಪ್, ಇರಾನ್ ಕಲ್ಮಶ ಮತ್ತು ಹಿಂಸಾತ್ಮಕ ಮನಸ್ಥಿತಿಯನ್ನು ಹೊಂದಿದೆ ಎಂದು ಗುಡುಗಿದ್ದಾರೆ. ಈ ದಿಢೀರ್ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಏರಿಕೆ ಕಂಡಿದ್ದು, ಭಾರತ ಸೇರಿದಂತೆ ವಿಶ್ವದಾದ್ಯಂತ ಷೇರು ಮಾರುಕಟ್ಟೆಗಳು ತೀವ್ರ ಕುಸಿತಕ್ಕೆ ಸಾಕ್ಷಿಯಾಗಿವೆ.

Category
ಕರಾವಳಿ ತರಂಗಿಣಿ