ಜಕಾರ್ತಾ : ಜಕಾರ್ತಾದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರತಿಷ್ಠಿತ ಬಿಸಿನೆಸ್ ಸ್ಕೂಲ್ ಆದ 'ಭಾರತೀಯ ನಿರ್ವಹಣಾ ಸಂಸ್ಥೆ ಬೆಂಗಳೂರು' (IIM Bangalore) ಇನ್ಮುಂದೆ ವಿದೇಶದಲ್ಲೂ ತನ್ನ ಹೆಜ್ಜೆಗುರುತನ್ನು ಮೂಡಿಸಲಿದೆ ಎಂಬ ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ. ಇಂಡೋನೇಷ್ಯಾದಲ್ಲಿ ಐಐಎಂ ಬೆಂಗಳೂರಿನ ಹೊಸ ಅಂತರರಾಷ್ಟ್ರೀಯ ಕ್ಯಾಂಪಸ್ ಅನ್ನು ಸ್ಥಾಪಿಸಲಾಗುವುದು ಎಂದು ಅವರು ಅಧಿಕೃತವಾಗಿ ಘೋಷಿಸಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ಐತಿಹಾಸಿಕ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿವೆ ಎಂದು ತಿಳಿಸಿದರು. ಭಾರತದ ಐಐಎಂ ಸಂಸ್ಥೆಗಳ ಪೈಕಿ ವಿದೇಶದಲ್ಲಿ ಆರಂಭವಾಗುತ್ತಿರುವ ಎರಡನೇ ಕ್ಯಾಂಪಸ್ ಇದಾಗಿದ್ದು, ಇದಕ್ಕೂ ಮುನ್ನ ಐಐಎಂ ಅಹಮದಾಬಾದ್ ದುಬೈನಲ್ಲಿ ತನ್ನ ಕ್ಯಾಂಪಸ್ ತೆರೆಯುವುದಾಗಿ ಘೋಷಿಸಿತ್ತು. ಈಗಾಗಲೇ ಐಐಟಿ ಮದ್ರಾಸ್ (ಟಾಂಜಾನಿಯಾ) ಮತ್ತು ಐಐಟಿ ದೆಹಲಿ (ಅಬುಧಾಬಿ) ವಿದೇಶದಲ್ಲಿ ತಮ್ಮ ಶಾಖೆಗಳನ್ನು ಯಶಸ್ವಿಯಾಗಿ ಆರಂಭಿಸಿದ್ದು, ಈಗ ಆ ಸಾಲಿಗೆ ಐಐಎಂ ಬೆಂಗಳೂರು ಕೂಡ ಸೇರ್ಪಡೆಯಾಗಿದೆ.
ಈ ಹೊಸ ಕ್ಯಾಂಪಸ್ ಇಂಡೋನೇಷ್ಯಾದ ಪೂರ್ವ ಜಾವಾದ ಮಲಾಂಗ್‌ನಲ್ಲಿರುವ 'ಸಿಂಘಾಸರಿ ವಿಶೇಷ ಆರ್ಥಿಕ ವಲಯ'ದಲ್ಲಿ (SEZ) ತಲೆಯೆತ್ತಲಿದೆ. ಇದು ಡಿಜಿಟಲ್ ಆರ್ಥಿಕತೆ, ನಾವೀನ್ಯತೆ ಹಾಗೂ ಉನ್ನತ ಶಿಕ್ಷಣಕ್ಕಾಗಿ ಮೀಸಲಾಗಿರುವ ಇಂಡೋನೇಷ್ಯಾದ ಮೊದಲ ವಿಶೇಷ ವಲಯವಾಗಿದೆ. ಈ ನೂತನ ಕ್ಯಾಂಪಸ್‌ನಲ್ಲಿ ಮುಖ್ಯವಾಗಿ ಮ್ಯಾನೇಜ್‌ಮೆಂಟ್, ಡಿಜಿಟಲ್ ಬಿಸಿನೆಸ್, ಕೃತಕ ಬುದ್ಧಿಮತ್ತೆ (AI), ಉದ್ಯಮಶೀಲತೆ ಮತ್ತು ನಾಯಕತ್ವ ಅಭಿವೃದ್ಧಿಯ ಕುರಿತು ಜಾಗತಿಕ ಮಟ್ಟದ ಕೋರ್ಸ್‌ಗಳನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ. ಇದು ಕೇವಲ ಇಂಡೋನೇಷ್ಯಾ ಮಾತ್ರವಲ್ಲದೆ ಒಟ್ಟಾರೆ ಆಸಿಯಾನ್ (ASEAN) ವಲಯದ ಯುವಕರಿಗೆ ಉನ್ನತ ಶಿಕ್ಷಣ ಪಡೆಯಲು ದಾರಿದೀಪವಾಗಲಿದೆ.