image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತ ಭಾಗಿ: ಇರಾನ್ ಸರ್ಕಾರದಿಂದ ಧನ್ಯವಾದ

ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತ ಭಾಗಿ: ಇರಾನ್ ಸರ್ಕಾರದಿಂದ ಧನ್ಯವಾದ

ಟೆಹ್ರಾನ್ : ಕಳೆದ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತಿಮ ಸಂಸ್ಕಾರದಲ್ಲಿ ಭಾರತೀಯ ನಿಯೋಗ ಪಾಲ್ಗೊಂಡಿದ್ದಕ್ಕಾಗಿ ಇರಾನ್ ಸರ್ಕಾರವು ಭಾರತಕ್ಕೆ ತನ್ನ ಕೃತಜ್ಞತೆಯನ್ನು ಸಲ್ಲಿಸಿದೆ. ಈ ಕುರಿತು ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿಯು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದು, ಕಠಿಣ ಶೋಕಾಚರಣೆಯ ಸಮಯದಲ್ಲಿ ಭಾರತ ವ್ಯಕ್ತಪಡಿಸಿದ ಒಗ್ಗಟ್ಟು ಮತ್ತು ಸಹಾನುಭೂತಿಯನ್ನು ಇರಾನ್ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದೆ.

ಇತ್ತೀಚೆಗೆ ಟೆಹ್ರಾನ್‌ನಲ್ಲಿ ನಡೆದ ಈ ಅಂತಿಮ ಸಂಸ್ಕಾರದ ವಿಧಿವಿಧಾನಗಳಲ್ಲಿ ಬಿಹಾರದ ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸಯ್ಯದ್ ಅತಾ ಹಸ್ನೇನ್ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪವಿತ್ರ ಮಾರ್ಗರಿಟಾ ಅವರನ್ನೊಳಗೊಂಡ ಉನ್ನತ ಮಟ್ಟದ ಭಾರತೀಯ ನಿಯೋಗವು ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸಿತ್ತು. ಇದರೊಂದಿಗೆ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹಾಗೂ ಭಾರತದ ವಿವಿಧ ಧರ್ಮಗಳ ಪ್ರಮುಖ ಧಾರ್ಮಿಕ ಮುಖಂಡರು ಇರಾನ್‌ನ ದಿವಂಗತ ನಾಯಕನಿಗೆ ಗೌರವ ನಮನ ಸಲ್ಲಿಸಿದ್ದರು. ಈ ನಡೆ ಉಭಯ ದೇಶಗಳ ನಡುವಿನ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಇರಾನ್ ಶ್ಲಾಘಿಸಿದೆ.

ಇರಾನ್‌ನ ಸರ್ಕಾರಿ ಪ್ರಸಾರ ಸಂಸ್ಥೆ 'ಪ್ರೆಸ್ ಟಿವಿ' ವರದಿ ಮಾಡಿರುವ ಪ್ರಕಾರ, ಅಲಿ ಖಮೇನಿ ಅವರ ಅಂತಿಮ ಯಾತ್ರೆಯು ಟೆಹ್ರಾನ್‌ನಲ್ಲಿ ಆರಂಭವಾಗಿದ್ದು, ಇರಾನ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾರ್ವಜನಿಕ ಸಭೆ ಇದಾಗಿದೆ. ಅಂತಿಮ ದರ್ಶನ ಪಡೆಯಲು ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಜನಸ್ತೋಮ ಹರಿದುಬಂದಿದೆ. ಖಮೇನಿ ಅವರ ಪಾರ್ಥಿವ ಶರೀರವನ್ನು ಮಸೀದಿಯ ವಿನ್ಯಾಸದಂತೆ ಸಿದ್ಧಪಡಿಸಲಾದ ವಿಶೇಷ ಟ್ರಕ್‌ನಲ್ಲಿ ಇರಿಸಲಾಗಿದ್ದು, ಮೆರವಣಿಗೆಯು ಸುಮಾರು 10ರಿಂದ 12 ಗಂಟೆಗಳ ಕಾಲ ಮುಂದುವರಿಯುವ ನಿರೀಕ್ಷೆಯಿದೆ. ತೀವ್ರ ಬಿಸಿಲಿನ ತಾಪವಿದ್ದರೂ ಜನರು ಆಶೀರ್ವಾದ ಪಡೆಯಲು ಶವಪೆಟ್ಟಿಗೆಯ ಮೇಲೆ ತಮ್ಮ ಸ್ಕಾರ್ಫ್‌ಗಳನ್ನು ಹಾಕುತ್ತಿದ್ದು, ಭದ್ರತಾ ಸಿಬ್ಬಂದಿ ಜನರ ಮೇಲೆ ನೀರನ್ನು ಸ್ಪ್ರೇ ಮಾಡುವ ಮೂಲಕ ತಾಪ ತಣಿಸುತ್ತಿದ್ದಾರೆ.

Category
ಕರಾವಳಿ ತರಂಗಿಣಿ