image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಪಾಕ್ ವಿರುದ್ಧ ಪಿಒಕೆ ನಿವಾಸಿಗಳ ಬಂಡಾಯ: ಭಾರತದ ಸಹಾಯಕ್ಕೆ ಮುಕ್ತ ಮನವಿ!

ಪಾಕ್ ವಿರುದ್ಧ ಪಿಒಕೆ ನಿವಾಸಿಗಳ ಬಂಡಾಯ: ಭಾರತದ ಸಹಾಯಕ್ಕೆ ಮುಕ್ತ ಮನವಿ!

ಪಿ. ಒ. ಕೆ : ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಪಾಕಿಸ್ತಾನ ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ ತೀವ್ರಗೊಂಡಿದ್ದು, ಇಡೀ ಪ್ರದೇಶವೇ ಭೀಕರ ಪ್ರತಿಭಟನೆ ಹಾಗೂ ಪಾಕ್ ಸೇನೆಯ ದಮನಕಾರಿ ನೀತಿಯಿಂದಾಗಿ ಹೊತ್ತಿ ಉರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಜಂಟಿ ಅವಾಮಿ ಆಕ್ಷನ್ ಕಮಿಟಿ (JAAC) ಮುಖ್ಯಸ್ಥ ಸರ್ದಾರ್ ಅಮಾನ್ ಖಾನ್ ಈಗ ನೇರವಾಗಿ ಭಾರತದ ಸಹಾಯವನ್ನು ಕೋರಿದ್ದಾರೆ. ಇಸ್ಲಾಮಾಬಾದ್ ಸರ್ಕಾರವು ಇಡೀ ಪ್ರದೇಶಕ್ಕೆ ಆರ್ಥಿಕ ದಿಗ್ಬಂಧನ ಹೇರಿರುವುದರಿಂದ, ತಕ್ಷಣವೇ ಭಾರತವು ತಮಗೆ ಮಾನವೀಯ ನೆರವು ನೀಡಬೇಕು ಮತ್ತು ಗಡಿಯನ್ನು ತೆರೆಯಬೇಕು ಎಂದು ಅವರು ಮುಕ್ತವಾಗಿ ಮನವಿ ಮಾಡಿದ್ದಾರೆ.

ಪ್ರಸ್ತುತ ಪಿಒಕೆಯಲ್ಲಿ ರೇಷನ್, ಆಹಾರ ಮತ್ತು ತುರ್ತು ಔಷಧಿಗಳ ತೀವ್ರ ಅಭಾವ ಸೃಷ್ಟಿಯಾಗಿದ್ದು, ಸ್ಥಳೀಯ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ಪಾಕಿಸ್ತಾನದ ಭದ್ರತಾ ಪಡೆಗಳು ಮಾರಕ ಕಾರ್ಯಾಚರಣೆ ನಡೆಸುತ್ತಿದ್ದು, ಆಹಾರ ಮತ್ತು ತುರ್ತು ಔಷಧಿಗಳ ಸರಬರಾಜನ್ನು ಸಂಪೂರ್ಣವಾಗಿ ನಿಲ್ಲಿಸಿವೆ. ಇದರಿಂದಾಗಿ ಅಲ್ಲಿ ತೀವ್ರ ಮಾನವೀಯ ಬಿಕ್ಕಟ್ಟು ಎದುರಾಗಿದ್ದು, ಪರಿಸ್ಥಿತಿ ಇನ್ನು ಹದಗೆಟ್ಟರೆ ನಾಗರಿಕರಿಗೆ ಭಾರತಕ್ಕೆ ವಲಸೆ ಹೋಗಲು ಮುಕ್ತ ಅವಕಾಶ ಇರಬೇಕು ಎಂದು ಅಮಾನ್ ಖಾನ್ ಪ್ರತಿಪಾದಿಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ರಾವಲಕೋಟ್‌ನ ಈದ್ಗಾ ಮೈದಾನದಲ್ಲಿ ನಡೆದ ಬೃಹತ್ ರಾಲಿಯನ್ನುದ್ದೇಶಿಸಿ ಮಾತನಾಡಿದ ಅಮಾನ್ ಖಾನ್, "ನಾವು ನಿಯಂತ್ರಣ ರೇಖೆಯ (LoC) ಕಡೆಗೆ ಮುನ್ನಡೆಯಬೇಕೇ?" ಎಂದು ಸಾರ್ವಜನಿಕರನ್ನು ಪ್ರಶ್ನಿಸಿದಾಗ, ನೆರೆದಿದ್ದ ಸಹಸ್ರಾರು ಜನರ ಗುಂಪು "ಹೌದು, ಗಡಿಯ ಕಡೆಗೆ ನಡೆಯೋಣ" ಎಂದು ಒಕ್ಕೊರಲಿನಿಂದ ಕೂಗಿದೆ. ಒಂದು ವೇಳೆ ಪಾಕ್ ಸರ್ಕಾರ ನಮ್ಮ ಬೇಡಿಕೆಗಳಿಗೆ ಬುಲೆಟ್‌ಗಳ ಮೂಲಕ ಉತ್ತರಿಸಿದರೆ, ನಮಗೂ ಬೇರೆ ದಾರಿಗಳಿವೆ ಎಂದು ಎಚ್ಚರಿಸಿರುವ ಅವರು, ಪೂಂಚ್ ಮತ್ತು ದೋಡಾ ಸೆಕ್ಟರ್‌ಗಳಲ್ಲಿ ಎಲ್‌ಒಸಿ ಗಡಿಯನ್ನು ಮುಕ್ತಗೊಳಿಸುವಂತೆ ಭಾರತಕ್ಕೆ ಮನವಿ ಮಾಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಪಿಒಕೆಯಲ್ಲಿ ಪಾಕ್ ಆಡಳಿತದ ವಿರುದ್ಧ ಜನಾಂದೋಲನ ನಡೆಯುತ್ತಿದ್ದು, ಈದ್ಗಾ ಮೈದಾನದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ "ಪಿಒಕೆ ಪಾಕಿಸ್ತಾನದ ಭಾಗವಲ್ಲ" ಮತ್ತು "ನಮಗೆ ಆಜಾದಿ (ಸ್ವಾತಂತ್ರ್ಯ) ಬೇಕು" ಎಂಬ ಘೋಷಣೆಗಳು ಮೊಳಗಿವೆ. ಆರಂಭದಲ್ಲಿ ಕೇವಲ ಅಗತ್ಯ ಸೌಲಭ್ಯಗಳು ಮತ್ತು ಆರ್ಥಿಕ ಸುಧಾರಣೆಗಳಿಗಾಗಿ ಆರಂಭವಾದ ಈ ಸ್ಥಳೀಯ ಹೋರಾಟ, ಈಗ ಪಾಕಿಸ್ತಾನದ ರಾಜಕೀಯ ನಿಯಂತ್ರಣದಿಂದ ಮುಕ್ತಿ ಪಡೆಯುವ ಮುಕ್ತ ಸ್ವಾತಂತ್ರ್ಯದ ಹೋರಾಟವಾಗಿ ಮಾರ್ಪಟ್ಟಿದೆ.

ಜೂನ್ 5 ರಂದು ಪಾಕಿಸ್ತಾನ ಸರ್ಕಾರವು ನಾಗರಿಕರ ಹಕ್ಕುಗಳಿಗಾಗಿ ಹೋರಾಡುತ್ತಿದ್ದ 'ಜಂಟಿ ಅವಾಮಿ ಆಕ್ಷನ್ ಕಮಿಟಿ'ಯನ್ನು (JAAC) ನಿಷೇಧಿತ "ಭಯೋತ್ಪಾದಕ" ಸಂಘಟನೆ ಎಂದು ಘೋಷಿಸಿದ ನಂತರ ಇಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಿದೆ. ದಶಕಗಳಿಂದ ಇಸ್ಲಾಮಾಬಾದ್‌ನ ಮುಖ್ಯವಾಹಿನಿ ಪಕ್ಷಗಳು ಪಿಒಕೆಯಲ್ಲಿ ಸ್ಥಳೀಯ ರಾಜಕೀಯ ಪಕ್ಷಗಳ ಅಸ್ತಿತ್ವವನ್ನೇ ಅಳಿಸಿಹಾಕುತ್ತಾ ಬಂದಿವೆ. ಪಾಕಿಸ್ತಾನದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ, ಅದೇ ಪಕ್ಷ ಪಿಒಕೆ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್‌ನಲ್ಲೂ ನಕಲಿ ಚುನಾವಣೆಗಳ ಮೂಲಕ ಅಧಿಕಾರ ಹಿಡಿಯುತ್ತಿತ್ತು. ಆದರೆ ಈಗ ಪಾಕ್ ಸೇನೆಯ ಬಲಪ್ರಯೋಗಕ್ಕೂ ಹೆದರದೆ ಸ್ಥಳೀಯ ಜನತೆ ಬೀದಿಗಿಳಿದು ಭಾರತದ ಸಹಾಯಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

Category
ಕರಾವಳಿ ತರಂಗಿಣಿ