image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ವ್ಯಾನ್ಸ್ ಹೇಳಿಕೆ ತಳ್ಳಿಹಾಕಿದ ನೆತನ್ಯಾಹು: ಭಾರತ ಇಸ್ರೇಲ್‌ನ ಅತ್ಯಂತ ಶಕ್ತಿಶಾಲಿ ಮಿತ್ರ ರಾಷ್ಟ್ರ ಎಂದು ಪ್ರಶಂಸೆ

ವ್ಯಾನ್ಸ್ ಹೇಳಿಕೆ ತಳ್ಳಿಹಾಕಿದ ನೆತನ್ಯಾಹು: ಭಾರತ ಇಸ್ರೇಲ್‌ನ ಅತ್ಯಂತ ಶಕ್ತಿಶಾಲಿ ಮಿತ್ರ ರಾಷ್ಟ್ರ ಎಂದು ಪ್ರಶಂಸೆ

ಟೆಲ್ ಅವಿವ್ : ಇಡೀ ವಿಶ್ವದಲ್ಲಿ ಇಸ್ರೇಲ್‌ಗೆ ಇರುವ ಏಕೈಕ ಶಕ್ತಿಶಾಲಿ ಮಿತ್ರ ರಾಷ್ಟ್ರ ಅಮೆರಿಕ ಮಾತ್ರ ಎಂಬ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಹೇಳಿಕೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಜಗತ್ತಿನಲ್ಲಿ ತಮಗೆ ಭಾರತದಂತಹ ಆಪ್ತ ದೇಶಗಳ ಬೆಂಬಲವಿದೆ ಎಂದು ನೆತನ್ಯಾಹು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅಮೆರಿಕದ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, "ನಾನು ಜೆಡಿ ವ್ಯಾನ್ಸ್ ಅವರನ್ನು ಗೌರವಿಸುತ್ತೇನೆ. ಆದರೆ ಅವರು ಹೇಳುವ ಎಲ್ಲ ಮಾತುಗಳನ್ನೂ ಒಪ್ಪಲು ಸಾಧ್ಯವಿಲ್ಲ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್‌ನ ಅತ್ಯುತ್ತಮ ಸ್ನೇಹಿತ ಎಂಬುದರಲ್ಲಿ ಸಂಶಯವಿಲ್ಲ. ಆದರೆ ನಮಗೆ ಭಾರತದಂತಹ ಇತರ ಕೆಲವು ಶಕ್ತಿಶಾಲಿ ಸ್ನೇಹಿತರೂ ಇದ್ದಾರೆ" ಎಂದು ತಿಳಿಸಿದ್ದಾರೆ.

ಭಾರತದಿಂದ ಸಿಗುತ್ತಿರುವ ಅಪಾರ ಬೆಂಬಲವನ್ನು ಶ್ಲಾಘಿಸಿದ ನೆತನ್ಯಾಹು, "ಭಾರತವು 140 ಕೋಟಿ (1.4 ಬಿಲಿಯನ್) ಜನಸಂಖ್ಯೆ ಹೊಂದಿರುವ ಬೃಹತ್ ದೇಶ. ಅಲ್ಲಿಂದ ಇಸ್ರೇಲ್‌ಗೆ ಸಿಗುತ್ತಿರುವ ಬೆಂಬಲ ಅದ್ಭುತವಾದದ್ದು. ನನ್ನ ಫೇಸ್‌ಬುಕ್ ಖಾತೆಯನ್ನು ನೋಡಿದರೆ ಸಾಕು, ಭಾರತದ ಜನರು ನಮ್ಮ ಮೇಲೆ ತೋರುತ್ತಿರುವ ಅಗಾಧವಾದ ಪ್ರೀತಿ ಮತ್ತು ಬೆಂಬಲದ ಪ್ರವಾಹ ಎಲ್ಲರಿಗೂ ಅರ್ಥವಾಗುತ್ತದೆ" ಎಂದು ಹೇಳಿದ್ದಾರೆ.

ಕಳೆದ ತಿಂಗಳು ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮತ್ತು 'ದಿ ನ್ಯೂಯಾರ್ಕ್ ಟೈಮ್ಸ್' ಸಂದರ್ಶನದಲ್ಲಿ ಜೆಡಿ ವ್ಯಾನ್ಸ್ ಅವರು ಇಸ್ರೇಲ್ ಸರ್ಕಾರಕ್ಕೆ ಕಠಿಣ ಸಂದೇಶ ನೀಡಿದ್ದರು. ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಶಾಂತಿ ಮಾತುಕತೆಗಳನ್ನು ಇಸ್ರೇಲ್ ವಿರೋಧಿಸುತ್ತಿರುವುದಕ್ಕೆ ವ್ಯಾನ್ಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇಡೀ ಜಗತ್ತಿನಲ್ಲಿ ಇಸ್ರೇಲ್ ಪರವಾಗಿ ನಿಂತಿರುವ ಏಕೈಕ ನಾಯಕ ಡೊನಾಲ್ಡ್ ಟ್ರಂಪ್ ಮಾತ್ರ. ನಾನು ಇಸ್ರೇಲ್ ಸರ್ಕಾರದ ಜಾಗದಲ್ಲಿದ್ದರೆ, ಜಗತ್ತಿನಲ್ಲಿ ನಮಗಿರುವ ಏಕೈಕ ಪ್ರಬಲ ಮಿತ್ರನ (ಅಮೆರಿಕ) ಮೇಲೆಯೇ ದಾಳಿ ಮಾಡುತ್ತಿರಲಿಲ್ಲ. ಕೇವಲ ಮಿಲಿಟರಿ ಶಕ್ತಿಯಿಂದಲೇ ನಿಮ್ಮ ಎಲ್ಲಾ ರಾಷ್ಟ್ರ ಭದ್ರತೆಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವ್ಯಾನ್ಸ್ ಇಸ್ರೇಲ್ ಧೋರಣೆಯನ್ನು ಟೀಕಿಸಿದ್ದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಟೀಕೆಗಳು ಕೇಳಿಬರುತ್ತಿದ್ದರೂ, ಇಸ್ರೇಲ್‌ಗೆ ತಂತ್ರಜ್ಞಾನ ಮತ್ತು ಮಿಲಿಟರಿ ರಂಗದಲ್ಲಿ ವಿಶ್ವದ ಹಲವು ರಾಷ್ಟ್ರಗಳ ಬೆಂಬಲವಿದೆ ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ವಿಶ್ವದ ಹಲವು ದೇಶಗಳ ನಾಯಕರು ತಮಗೆ ವೈಯಕ್ತಿಕವಾಗಿ ಕರೆ ಮಾಡುತ್ತಾರೆ ಎಂದು ಬಹಿರಂಗಪಡಿಸಿದ ಅವರು, "ರಾಜಕೀಯ ಕಾರಣಗಳಿಂದ ಸಾರ್ವಜನಿಕವಾಗಿ ಬೆಂಬಲಿಸಲು ಕೆಲವು ದೇಶಗಳಿಗೆ ಸಮಸ್ಯೆಯಿರಬಹುದು. ಆದರೆ ಅವರು ನಮ್ಮ ಮಿಲಿಟರಿ ತಂತ್ರಗಳು, ಕೃತಕ ಬುದ್ಧಿಮತ್ತೆ (AI) ಮತ್ತು ಸೈಬರ್ ಭದ್ರತೆಯ ಪರಿಣತಿಯನ್ನು ತಮಗೂ ಕಲಿಸಿಕೊಡುವಂತೆ ಒಪ್ಪಂದಗಳಿಗೆ ವಿನಂತಿಸುತ್ತಿದ್ದಾರೆ. ಸೈಬರ್ ತಂತ್ರಜ್ಞಾನದಲ್ಲಿ ಇಸ್ರೇಲ್ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ" ಎಂದು ನೆತನ್ಯಾಹು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ