ಟೆಹರಾನ್ : ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಅಂತಿಮ ವಿಧಿ ವಿಧಾನಗಳು ಆರಂಭವಾಗಿದ್ದು, ರಾಜಧಾನಿ ಟೆಹರಾನ್‌ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಗ್ರ್ಯಾಂಡ್ ಮೊಸಲ್ಲಾ ಸಂಕೀರ್ಣದ ಸುತ್ತ ಭಾರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಇಡೀ ಪ್ರದೇಶವು ಭದ್ರತಾ ಶಿಬಿರದಂತೆ ಗೋಚರವಾಗುತ್ತಿದೆ. ಅಂತಿಮ ದರ್ಶನಕ್ಕಾಗಿ ಸಾವಿರಾರು ಮಂದಿ ಹಲವು ಗಂಟೆಗಳ ಮೊದಲೇ ಸ್ಥಳಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತಿದ್ದರು.
ಖಮೇನಿ ಅವರ ಪಾರ್ಥಿವ ಶರೀರವನ್ನು ಸೋಮವಾರದವರೆಗೆ ಗ್ರ್ಯಾಂಡ್ ಮೊಸಲ್ಲಾ ಸಂಕೀರ್ಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗುತ್ತದೆ. ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದ್ದು, ಕೆಲವರು ಶುಕ್ರವಾರ ಬೆಳಿಗ್ಗಿನಿಂದಲೇ ಬಂದಿದ್ದರು. ಇಂದು ರಾತ್ರಿಯೇ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ತಮಗೆ ತಿಳಿಸಲಾಗಿತ್ತು ಎಂದು ಅಂತಿಮ ವಿದಾಯ ಹೇಳಲು ಬಂದಿದ್ದ ಸಾರ್ವಜನಿಕರು ತಿಳಿಸಿದ್ದಾರೆ.
ಮೊಸಲ್ಲಾ ಸಂಕೀರ್ಣದ ಸಮೀಪ ಸಾವಿರಾರು ಜನ ಸೇರಿದ್ದರು. ಕೆಲವರು ಕಣ್ಣೀರಿಡುತ್ತಿದ್ದರೆ, ಇನ್ನು ಕೆಲವರು ಪಾದಚಾರಿ ಮಾರ್ಗದಲ್ಲೇ ಕುಳಿತು ಶಾಂತವಾಗಿ ತಮ್ಮ ಸರದಿಗಾಗಿ ಕಾಯುತ್ತಿದ್ದರು. ಈ ವೇಳೆ ಧಾರ್ಮಿಕ ಕವನಗಳು, ಶೋಕಗೀತೆಗಳು ಮತ್ತು ಧಾರ್ಮಿಕ ಪಠಣಗಳನ್ನು ಧ್ವನಿವರ್ಧಕಗಳ ಮೂಲಕ ಪ್ರಸಾರ ಮಾಡಲಾಗುತ್ತಿತ್ತು. ಮೊಸಲ್ಲಾ ಸಂಕೀರ್ಣದ ಗೋಡೆಗಳ ಮೇಲೆ ಖಮೇನಿ ಅವರ ಬೃಹತ್ ಭಾವಚಿತ್ರಗಳನ್ನು ಅಳವಡಿಸಲಾಗಿದ್ದು, ಶೋಕದ ಸಂಕೇತವಾಗಿ ಕಪ್ಪು ಧ್ವಜಗಳು ಹಾಗೂ ಹುತಾತ್ಮತ್ವ ಮತ್ತು ಪ್ರತೀಕಾರದ ಸಂಕೇತವಾದ ಕೆಂಪು ಧ್ವಜಗಳನ್ನು ಹಾರಿಸಲಾಗಿದೆ. ಭಾರತೀಯ ಧಾರ್ಮಿಕ ಮುಖಂಡರು ಹಾಗೂ ರಾಜತಾಂತ್ರಿಕ ಪ್ರತಿನಿಧಿಗಳು ಕೂಡ ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಅಂತಿಮ ನಮನ ಸಲ್ಲಿಸಿದ್ದಾರೆ.
ಇಡೀ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಅಂತಿಮ ದರ್ಶನದ ಸ್ಥಳದ ಸಮೀಪ ಹೋಗುವ ಪ್ರತಿಯೊಬ್ಬರಿಗೂ ಕಟ್ಟುನಿಟ್ಟಿನ ಭದ್ರತಾ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಸ್ಥಳದ ಸುತ್ತ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಹನಗಳ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ. ನಿಗದಿತ ಸಮಯಕ್ಕಿಂತ ಹಲವು ಗಂಟೆಗಳ ಮೊದಲೇ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಇದರಿಂದ ಕೆಲ ವಾಹನ ಸವಾರರು ತೊಂದರೆ ಅನುಭವಿಸಿದರು. ದೂರದ ಊರುಗಳಿಂದ ಬಂದಿದ್ದ ಸ್ವಯಂ ಸೇವಕರು ಸಾರ್ವಜನಿಕರಿಗೆ ನೀರು ಮತ್ತು ಆಹಾರ ನೀಡಿ ಸಹಾಯ ಮಾಡುತ್ತಿರುವುದು ಕಂಡುಬಂದಿದೆ.