ಕತಾರ್ : ಉದ್ವಿಗ್ನತೆಯ ಮಧ್ಯೆಯೇ ಅಮೆರಿಕ ಮತ್ತು ಇರಾನ್ ನಡುವೆ ಎರಡನೇ ಸುತ್ತಿನ ಶಾಂತಿ ಮಾತುಕತೆಗಳು ನಡೆದಿದ್ದು, ಸಕಾರಾತ್ಮಕ ಪ್ರಗತಿ ಕಂಡುಬಂದಿದೆ ಎಂದು ಇದರ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ ಮತ್ತು ಕತಾರ್ ಜಂಟಿಯಾಗಿ ತಿಳಿಸಿವೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವ ಸಲುವಾಗಿ ಅಮೆರಿಕ ಮತ್ತು ಇರಾನ್ ಜೂನ್ 18 ರಂದು ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದ್ದವು. ಇದರ ಬೆನ್ನಲ್ಲೇ ಜೂನ್ 21 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ತಾಂತ್ರಿಕ ಮಟ್ಟದ ಮಾತುಕತೆಗಳು ನಡೆದಿದ್ದವು. ಅದರ ಮುಂದುವರಿದ ಭಾಗವಾಗಿ ಇಂದು ದೋಹಾದಲ್ಲಿ ಉಭಯ ದೇಶಗಳ ಪ್ರತಿನಿಧಿಗಳ ನಡುವೆ ಮತ್ತೊಂದು ಮಹತ್ವದ ಶಾಂತಿ ಮಾತುಕತೆ ನಡೆದಿದೆ.
ಮಾತುಕತೆಯ ವೇಳೆ ಕತಾರ್ ಮತ್ತು ಪಾಕಿಸ್ತಾನದ ಮಧ್ಯವರ್ತಿಗಳು ಅಮೆರಿಕ ಹಾಗೂ ಇರಾನಿನ ಪ್ರತಿನಿಧಿಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದರು. ಲೇಕ್ ಲುಸೆರ್ನ್‌ನಲ್ಲಿ ನಡೆದ ಶೃಂಗಸಭೆಯನ್ನು ಆಧರಿಸಿದ ಇಸ್ಲಾಮಾಬಾದ್ ಎಂಒಯುನ ಅಂಶಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಾಗಿದ್ದು, ಮಾತುಕತೆಯಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಸ್ಪಷ್ಟಪಡಿಸಿದೆ. ಮುಂದಿನ ಎರಡು ತಿಂಗಳೊಳಗೆ ಪೂರ್ಣ ಪ್ರಮಾಣದ ಯುದ್ಧ ಸಂಧಾನ ಏರ್ಪಡುವಂತೆ ಮಾಡುವ ಸಲುವಾಗಿ ಈ ಸರಣಿ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಎರಡನೇ ಸುತ್ತಿನ ಸಭೆಯಲ್ಲಿ ಸಕಾರಾತ್ಮಕ ಅಂಶಗಳು ಕಂಡುಬಂದಿದ್ದರೂ, ಮುಂದಿನ ಮಾತುಕತೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಇರಾನಿನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಮುಗಿದ ಬಳಿಕ ಚರ್ಚೆಗಳನ್ನು ಮುಂದುವರಿಸಲು ನಿರ್ಧರಿಸಲಾಗಿದ್ದು, ಶಾಂತಿ ಒಪ್ಪಂದದ ಪ್ರಕ್ರಿಯೆಯನ್ನು ಮುಂದುವರಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ.