ಯುರೋಪ್ : ಯೂರೋಪ್‌ನಾದ್ಯಂತ ಈಗ ಸೂರ್ಯನ ಪ್ರಖರತೆಯದ್ದೇ ಸದ್ದುಗದ್ದಲ ಆರಂಭವಾಗಿದ್ದು, ಅಸಹನೀಯ ಶಾಖದಲೆಗಳು ಜನರ ಪ್ರಾಣವನ್ನೇ ತೆಗೆಯುತ್ತಿವೆ. ತೀವ್ರ ಪರಿಸ್ಥಿತಿಯನ್ನು ಸಹಿಸಲಾಗದೆ ಜೂನ್ 21ರಿಂದ ಇಲ್ಲಿಯವರೆಗೆ 1,300ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ದೃಢಪಡಿಸಿದೆ. ಇಡೀ ಖಂಡದೆಲ್ಲೆಡೆ ಲಕ್ಷಾಂತರ ಜನರು ತಾಪಮಾನಕ್ಕೆ ತತ್ತರಿಸಿಹೋಗಿದ್ದು, ನೂರಾರು ಜನರು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳನ್ನು ಮುಚ್ಚಲಾಗಿದೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಹಿಂದೆ ಒಂದು ಪೀಳಿಗೆಯಲ್ಲಿ ಒಮ್ಮೆ ಮಾತ್ರ ಬರುತ್ತಿದ್ದ ಇಂಥ ಶಾಖದಲೆಯ ವಿದ್ಯಮಾನಗಳು ಈಗ ಬಹುತೇಕ ಪ್ರತಿ ವರ್ಷವೂ ಸಂಭವಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧನಾಮ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸದ್ಯ ಯುರೋಪ್ ಭೂಮಿಯ ಮೇಲೆ ಅತ್ಯಂತ ವೇಗವಾಗಿ ಬೆಚ್ಚಗಾಗುತ್ತಿರುವ ಖಂಡವಾಗಿದ್ದು, ಜಾಗತಿಕ ಸರಾಸರಿಗಿಂತಲೂ ಎರಡು ಪಟ್ಟು ಹೆಚ್ಚು ಬಿಸಿಯಾಗುತ್ತಿದೆ. ಸಾಮಾನ್ಯವಾಗಿ ಯುರೋಪಿನ ಮನೆಗಳು, ಕೆಲಸದ ಸ್ಥಳಗಳು ಮತ್ತು ಶಾಲೆಗಳನ್ನು ಇಂಥ ತೀವ್ರ ತಾಪವನ್ನು ಸಹಿಸಿಕೊಳ್ಳುವ ತಂತ್ರಜ್ಞಾನದಲ್ಲಿ ನಿರ್ಮಿಸಿರುವುದಿಲ್ಲ. ಆದ್ದರಿಂದ ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಆರೋಗ್ಯ ಕಾಪಾಡುವ ಪ್ರಯತ್ನದ ಭಾಗವಾಗಿ 'ಶಾಖ ಆರೋಗ್ಯ ಕ್ರಿಯಾ ಯೋಜನೆಗಳನ್ನು' ಜಾರಿಗೆ ತರುವಂತೆ ಟೆಡ್ರೊಸ್ ಅವರು ಯುರೋಪ್‌ನ ದೇಶಗಳಿಗೆ ಕರೆ ಕೊಟ್ಟಿದ್ದಾರೆ. ಇಂಥ ಕಠಿಣ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸೂಕ್ತ ಸನ್ನದ್ಧತೆ ಹಾಗೂ ಬಲವಾದ ಆರೋಗ್ಯ ವ್ಯವಸ್ಥೆಯ ಪ್ರತಿಕ್ರಿಯೆಗಳು ಬೇಕಾಗಿದ್ದು, ತೀವ್ರ ಶಾಖದ ಆರೋಗ್ಯ ಬೆದರಿಕೆಗಳನ್ನು ಪರಿಹರಿಸಲು ಸದಸ್ಯ ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತಿರುವುದಾಗಿ WHO ತಿಳಿಸಿದೆ. ಇದೇ ವೇಳೆ, ಫ್ರಾನ್ಸ್‌ನಲ್ಲಿಯೂ ಬುಧವಾರದಿಂದ ನಿರೀಕ್ಷೆಗಿಂತಲೂ ಸುಮಾರು 1,000ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಫ್ರೆಂಚ್ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.