image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಸೌದಿಯಲ್ಲಿ ಅರಾಮ್ಕೋ ಹೆಲಿಕಾಪ್ಟರ್ ಪತನ: 14 ಮಂದಿ ಸಾವು

ಸೌದಿಯಲ್ಲಿ ಅರಾಮ್ಕೋ ಹೆಲಿಕಾಪ್ಟರ್ ಪತನ: 14 ಮಂದಿ ಸಾವು

ಸೌದಿ ಅರೇಬಿಯಾ : ವಿಶ್ವದ ಅತಿ ದೊಡ್ಡ ತೈಲ ಕಂಪನಿಗಳಲ್ಲಿ ಒಂದಾದ ಸೌದಿ ಅರೇಬಿಯಾದ ಸರ್ಕಾರಿ ಒಡೆತನದ ಅರಾಮ್ಕೋ ಕಂಪನಿಗೆ ಸೇರಿದ ಹೆಲಿಕಾಪ್ಟರ್ ಭಾನುವಾರ ಬೆಳಿಗ್ಗೆ ರಾಸ್ ತನುರಾದಲ್ಲಿ ಪತನಗೊಂಡಿದೆ. ಹೆಲಿಕಾಪ್ಟರ್ ಹಾರಾಟ ನಡೆಸಿದ ಕೆಲವೇ ಕ್ಷಣಗಳಲ್ಲಿ ಈ ದುರಂತ ಸಂಭವಿಸಿದ್ದು, ಅದರಲ್ಲಿದ್ದ ಎಲ್ಲಾ 14 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರೆಲ್ಲರೂ ಸೌದಿ ಅರೇಬಿಯಾದ ನಾಗರಿಕರಾಗಿದ್ದು, ತೈಲ ಘಟಕದ ಪ್ರಮುಖರು ಈ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಈ ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣ ಏನೆಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದಾಗ್ಯೂ, ರಾಸ್ ತನುರಾದಲ್ಲಿರುವ ಅರಾಮ್ಕೋ ತೈಲ ಘಟಕದ ಮೇಲೆ ಇತ್ತೀಚೆಗೆ ಮಾರ್ಚ್ ತಿಂಗಳಲ್ಲಿ ಡ್ರೋನ್ ದಾಳಿಯ ಪ್ರಯತ್ನಗಳು ನಡೆದಿದ್ದವು. ಅಷ್ಟೇ ಅಲ್ಲದೆ, 2019 ಮತ್ತು 2021 ರಲ್ಲೂ ಈ ಘಟಕದ ಮೇಲೆ ಡ್ರೋನ್ ಹಾಗೂ ಮಿಸೈಲ್ ದಾಳಿಗಳು ನಡೆದಿದ್ದರಿಂದ ಭಾರಿ ಹಾನಿಯಾಗಿ ಉತ್ಪಾದನೆಯನ್ನು ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ, ಸದ್ಯ ನಡೆದಿರುವ ಹೆಲಿಕಾಪ್ಟರ್ ದುರಂತವು ತೀವ್ರ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಉದ್ದೇಶಪೂರ್ವಕವಾಗಿ ಗುರಿ ಇಟ್ಟು ದಾಳಿ ಮಾಡಲಾಗಿದೆಯೇ ಎಂಬ ಆಯಾಮದಲ್ಲೂ ತನಿಖೆ ಆರಂಭವಾಗಿದೆ.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸೌದಿ ಅರೇಬಿಯಾದ ಪೆಟ್ರೋಲಿಯಂ ಸಚಿವಾಲಯವು, ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಆಳವಾದ ಸಾಂತ್ವನವನ್ನು ವ್ಯಕ್ತಪಡಿಸಿದೆ. ಈ ಸೂಕ್ಷ್ಮ ಪ್ರದೇಶದಲ್ಲಿ ಇಂತಹದೊಂದು ಘಟನೆ ನಡೆದಿರುವುದು ಸೌದಿ ಹಾಗೂ ಇಡೀ ಗಲ್ಫ್ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ. ಸದ್ಯ ಸೌದಿ ಸರ್ಕಾರವು ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಭದ್ರತಾ ಸಂಸ್ಥೆಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಜಂಟಿಯಾಗಿ ಸೂಕ್ತ ತನಿಖೆ ನಡೆಸಿ ಶೀಘ್ರದಲ್ಲೇ ನೈಜ ಕಾರಣವನ್ನು ಬಹಿರಂಗಪಡಿಸುವುದಾಗಿ ಸಚಿವಾಲಯ ತಿಳಿಸಿದೆ.

Category
ಕರಾವಳಿ ತರಂಗಿಣಿ