image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಇರಾನ್-ಅಮೆರಿಕ ಸಂಘರ್ಷ: ಕದನ ವಿರಾಮದ ನಡುವೆಯೂ ಮತ್ತೆ ಭುಗಿಲೆದ್ದ ಯುದ್ಧದ ಕಿಡಿ, ಕುವೈತ್, ಬಹ್ರೇನ್ ಮೇಲೆ ಡ್ರೋನ್ ದಾಳಿ

ಇರಾನ್-ಅಮೆರಿಕ ಸಂಘರ್ಷ: ಕದನ ವಿರಾಮದ ನಡುವೆಯೂ ಮತ್ತೆ ಭುಗಿಲೆದ್ದ ಯುದ್ಧದ ಕಿಡಿ, ಕುವೈತ್, ಬಹ್ರೇನ್ ಮೇಲೆ ಡ್ರೋನ್ ದಾಳಿ

ದುಬೈ : ಯುದ್ಧ ನಿಲ್ಲಿಸುವ ಸಂಬಂಧ ಅಮೆರಿಕ ಮತ್ತು ಇರಾನ್ ಶಾಂತಿ ಒಪ್ಪಂದದ ಮಾತುಕತೆಗಳ ಭಾಗವಾಗಿ ತಿಳಿವಳಿಕಾ ಪತ್ರಕ್ಕೆ ಸಹಿ ಹಾಕಿದ್ದ ಹೊರತಾಗಿಯೂ, ಎರಡೂ ರಾಷ್ಟ್ರಗಳ ನಡುವೆ ಮತ್ತೆ ಸಂಘರ್ಷ ಆರಂಭವಾಗಿದೆ. ವಾಣಿಜ್ಯ ಹಡಗಿನ ಮೇಲೆ ಇರಾನ್ ನಡೆಸಿದ ದಾಳಿಯನ್ನು ಕದನ ವಿರಾಮ ಉಲ್ಲಂಘನೆ ಎಂದು ಆರೋಪಿಸಿ ಅಮೆರಿಕ ಸೇನೆ ಪ್ರತೀಕಾರದ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್, ಅಮೆರಿಕದ ಸೇನಾ ನೆಲೆಗಳು ಇರುವ ಕುವೈತ್ ಮತ್ತು ಬಹ್ರೇನ್ ದೇಶಗಳ ಮೇಲೆ ಡ್ರೋನ್ ದಾಳಿ ನಡೆಸುವ ಮೂಲಕ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ. ಅಮೆರಿಕದ ವೈಮಾನಿಕ ದಾಳಿ ನಡೆದ ನಂತರ ಇರಾನ್ ತಮ್ಮ ರಾಷ್ಟ್ರಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿಗಳಿಂದ ದಾಳಿ ಮಾಡಿರುವುದು ನಿಜ ಎಂದು ಬಹ್ರೇನ್ ಮತ್ತು ಕುವೈತ್ ಭಾನುವಾರ ಅಧಿಕೃತವಾಗಿ ತಿಳಿಸಿವೆ. ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ತಮ್ಮ ದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿರುವುದನ್ನು ಉಭಯ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆಯಾದರೂ, ತಮಗಾದ ಹಾನಿಯ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯನ್ನು ಸದ್ಯಕ್ಕೆ ಹಂಚಿಕೊಂಡಿಲ್ಲ.

ಈ ಮರು ಸಂಘರ್ಷಕ್ಕೆ ಹಾರ್ಮುಜ್ ಜಲಮಾರ್ಗದಲ್ಲಿ ನಡೆದ ಘಟನೆ ಪ್ರಮುಖ ಕಾರಣವಾಗಿದೆ. ಹಾರ್ಮುಜ್ ಜಲಮಾರ್ಗವನ್ನು ದಾಟುತ್ತಿದ್ದ ಸಿಂಗಾಪುರ ಧ್ವಜ ಹೊಂದಿದ್ದ ವಾಣಿಜ್ಯ ಹಡಗೊಂದರ ಮೇಲೆ ಇರಾನ್ ಶುಕ್ರವಾರ 4 ಡ್ರೋನ್ಗಳನ್ನು ಬಳಸಿ ದಾಳಿ ಮಾಡಿತ್ತು. ಈ ವೇಳೆ ಹಡಗಿಗೆ ಸಣ್ಣ ಮಟ್ಟದ ಹಾನಿಯಾಗಿದ್ದರೂ, ಅದರಲ್ಲಿದ್ದ ಸಿಬ್ಬಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರು. ಇದನ್ನು ಕದನ ವಿರಾಮ ಉಲ್ಲಂಘನೆ ಎಂದು ಪರಿಗಣಿಸಿದ ಅಮೆರಿಕ ಸೇನೆ, ಇರಾನ್ ಯುದ್ಧ ಶಾಂತಿ ಪಾಲಿಸುತ್ತಿಲ್ಲ ಎಂದು ಆರೋಪಿಸಿ ಹಾರ್ಮುಜ್ ಸಮೀಪದಲ್ಲೇ ಇರುವ ಇರಾನ್‌ನ ಡ್ರೋನ್ ಮತ್ತು ಕ್ಷಿಪಣಿ ಸಂಗ್ರಹಾಗಾರಗಳ ಮೇಲೆ ಪ್ರಬಲ ದಾಳಿ ನಡೆಸಿತ್ತು. ವಾಣಿಜ್ಯ ಹಡಗಿನ ಮೇಲಿನ ಇರಾನ್‌ನ ಅನಪೇಕ್ಷಿತ ದಾಳಿಗೆ ನಾವು ಅತ್ಯಂತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದೇವೆ ಎಂದು ಅಮೆರಿಕ ಸೇನೆ ಸ್ಪಷ್ಟಪಡಿಸಿದೆ. ಶಾಂತಿ ಮಾತುಕತೆಗಳು ಪ್ರಗತಿಯಲ್ಲಿರುವಾಗಲೇ ನಡೆದಿರುವ ಈ ಸರಣಿ ದಾಳಿಗಳು ಮಧ್ಯಪ್ರಾಚ್ಯದಲ್ಲಿ ಮತ್ತೆ ತೀವ್ರ ಉದ್ವಿಗ್ನತೆ ಸೃಷ್ಟಿಯಾಗುವ ಆತಂಕ ಮೂಡಿಸಿವೆ. ಯುದ್ಧ ಸ್ಥಗಿತಗೊಳಿಸುವ ಸಂಬಂಧ ಮುಂದಿನ 60 ದಿನಗಳಲ್ಲಿ ನಡೆಸಬೇಕಾದ ಒಪ್ಪಂದಗಳ ಚೌಕಟ್ಟಿನ ಬಗ್ಗೆ ಇತ್ತೀಚೆಗಷ್ಟೇ ಅಮೆರಿಕ ಮತ್ತು ಇರಾನ್ ಸಹಮತ ವ್ಯಕ್ತಪಡಿಸಿ, ಸ್ವಿಟ್ಜರ್ಲ್ಯಾಂಡ್‌ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಭಾಗಿಯಾಗಿದ್ದವು. ಆದರೆ ಈಗ ನಡೆದಿರುವ ಮರು ಸಂಘರ್ಷವು ಈ ಶಾಂತಿ ಪ್ರಕ್ರಿಯೆಗೆ ದೊಡ್ಡ ಹಿನ್ನಡೆ ಉಂಟುಮಾಡುವ ಮುನ್ಸೂಚನೆ ನೀಡಿದೆ.

Category
ಕರಾವಳಿ ತರಂಗಿಣಿ