image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಪಿಎಂ ಮೋದಿಗೆ ಸೆಶೆಲ್ಸ್ ದೇಶದ ಅತ್ಯುನ್ನತ ‘ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್’ ಗೌರವ

ಪಿಎಂ ಮೋದಿಗೆ ಸೆಶೆಲ್ಸ್ ದೇಶದ ಅತ್ಯುನ್ನತ ‘ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್’ ಗೌರವ

ವಿಕ್ಟೊರಿಯಾ : ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ನಾಯಕತ್ವಕ್ಕಾಗಿ ಸೆಶೆಲ್ಸ್ ದೇಶದ ಅತ್ಯುನ್ನತ ವಿಶಿಷ್ಟ ಗೌರವವಾದ 'ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್' ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಪ್ರದಾನ ಮಾಡಲಾಯಿತು. ಸೆಶೆಲ್ಸ್ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹರ್ಮಿನೀ ಅವರು ಪ್ರಧಾನಿ ಮೋದಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ವಿದೇಶಿ ರಾಷ್ಟ್ರವೊಂದರಿಂದ ಪ್ರಧಾನಿ ಮೋದಿಯವರು ಸ್ವೀಕರಿಸುತ್ತಿರುವ 34ನೇ ಅಂತಾರಾಷ್ಟ್ರೀಯ ಗೌರವ ಇದಾಗಿದೆ. ಸೆಶೆಲ್ಸ್ ಗಣರಾಜ್ಯದ ಇತಿಹಾಸದಲ್ಲಿಯೇ ಅಂತಾರಾಷ್ಟ್ರೀಯ ಗಣ್ಯರೊಬ್ಬರಿಗೆ ಈ ವಿಶಿಷ್ಟ ಪ್ರಶಸ್ತಿಯನ್ನು ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ಇದು ಭಾರತ ಮತ್ತು ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಜಾಗತಿಕ ಮಟ್ಟದಲ್ಲಿ ಸಿಕ್ಕ ಭಾರಿ ಮನ್ನಣೆಯಾಗಿದೆ. ಸೆಶೆಲ್ಸ್ ಕರಾವಳಿ ಕಾವಲು ಪಡೆಯ ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಭಾರತದಲ್ಲೇ ತಯಾರಿಸಲಾದ ವೇಗದ ಗಸ್ತು ನೌಕೆಯನ್ನು ಆ ದೇಶದ ಕರಾವಳಿ ಕಾವಲು ಪಡೆಗೆ ಹಸ್ತಾಂತರಿಸುವ ಮೂಲಕ ಆ ದೇಶದ ಕಡಲ ಭದ್ರತಾ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.

ಈ ಗೌರವ ಸ್ವೀಕರಿಸಿದ ನಂತರ ಸೆಶೆಲ್ಸ್ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 'ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್' ಪ್ರಶಸ್ತಿಯನ್ನು ಪಡೆಯುವುದು ತಮಗೆ ಮತ್ತು ಭಾರತದ 140 ಕೋಟಿ ಜನರಿಗೆ ಅಪಾರ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. "ನಾನು ಈ ಗೌರವವನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ ಮತ್ತು ಹವಾಮಾನ ವೈಪರೀತ್ಯದ ಸವಾಲಿನ ವಿರುದ್ಧ ಹೋರಾಡುತ್ತಿರುವ ಹಾಗೂ ಪರಿಸರ ಸಂರಕ್ಷಣೆಯನ್ನು ಭವಿಷ್ಯದ ಪೀಳಿಗೆಯ ಕಡೆಯ ಜವಾಬ್ದಾರಿ ಎಂದು ಪರಿಗಣಿಸುವ ಎಲ್ಲಾ ರಾಷ್ಟ್ರಗಳಿಗೆ ಇದನ್ನು ಸಮರ್ಪಿಸುತ್ತೇನೆ," ಎಂದು ಪ್ರಧಾನಿ ಮೋದಿ ತಿಳಿಸಿದರು.

ಮೂರು ದಿನಗಳ ಪ್ರವಾಸಕ್ಕಾಗಿ ಶನಿವಾರ ಸೆಶೆಲ್ಸ್‌ಗೆ ತೆರಳಿದ ಪ್ರಧಾನಿ ಮೋದಿಯವರನ್ನು ಸ್ಟೇಟ್ ಹೌಸ್‌ನಲ್ಲಿ ಅಧ್ಯಕ್ಷ ಹರ್ಮಿನೀ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಉಭಯ ನಾಯಕರು ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿ, ದ್ವಿಪಕ್ಷೀಯ ಸಹಕಾರದ ಸಂಪೂರ್ಣ ವ್ಯಾಪ್ತಿಯನ್ನು ಪರಾಮರ್ಶಿಸುವುದರ ಜೊತೆಗೆ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಅನಿಸಿಕೆಗಳನ್ನು ವಿನಿಮಯ ಮಾಡಿಕೊಂಡರು. ಅಧ್ಯಕ್ಷ ಹರ್ಮಿನೀ ಅವರ ಆಹ್ವಾನದ ಮೇರೆಗೆ ಸೆಶೆಲ್ಸ್‌ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಸೋಮವಾರ ನಡೆಯಲಿರುವ ಸೆಶೆಲ್ಸ್ ರಾಷ್ಟ್ರೀಯ ದಿನಾಚರಣೆಯ ಸುವರ್ಣ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಈ ಪ್ರವಾಸದ ಅವಧಿಯಲ್ಲಿ ಅವರು ಸೆಶೆಲ್ಸ್‌ನ ರಾಷ್ಟ್ರೀಯ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಹಾಗೂ ಅಲ್ಲಿನ ಭಾರತೀಯ ಸಮುದಾಯದವರೊಂದಿಗೆ ಸಂವಾದ ನಡೆಸಲಿದ್ದಾರೆ.

Category
ಕರಾವಳಿ ತರಂಗಿಣಿ