ಕೋಪನ್ ಹ್ಯಾಗನ್: ಡೆನ್ಮಾರ್ಕ್‌ನಲ್ಲಿ ಹೆಚ್ಚುತ್ತಿರುವ ಇಸ್ಲಾಮೀಕರಣದ ಆತಂಕದ ನಡುವೆ, ಅಲ್ಲಿನ ಸರ್ಕಾರವು ದೇಶಾದ್ಯಂತ ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಇಸ್ಲಾಮಿಕ್ ಪ್ರಾರ್ಥನಾ ಕರೆ ಅಂದರೆ ಅಜಾನ್ ಕೂಗುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಹೊಸ ಯೋಜನೆಯೊಂದನ್ನು ರೂಪಿಸಿದೆ. ಕೆಲವು ತಿಂಗಳ ಹಿಂದಷ್ಟೇ ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದನ್ನು ನಿಷೇಧಿಸಿದ್ದ ಡೆನ್ಮಾರ್ಕ್ ಸರ್ಕಾರ, ಈಗ ಈ ಮಹತ್ವದ ನಿರ್ಧಾರಕ್ಕೆ ಕೈಹಾಕಿದೆ. ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತು ಅವರ ಧಾರ್ಮಿಕ ಆಚರಣೆಗಳು ಸಾರ್ವಜನಿಕ ವಲಯದಲ್ಲಿ ಅತಿಯಾಗಿ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಈ ಬಗ್ಗೆ ಬಹಿರಂಗವಾಗಿ ಮಾತನಾಡಿರುವ ಡೆನ್ಮಾರ್ಕ್‌ನ ವಲಸೆ ವ್ಯವಹಾರಗಳ ಸಚಿವ ಮೊರ್ಟೆನ್ ಬೋಡ್ಸ್ಕೋವ್, ದೇಶದ ಕೆಲವು ಭಾಗಗಳು ಈಗ ನೋಡಲು ಡೆನ್ಮಾರ್ಕ್‌ನಂತೆ ಕಾಣಿಸುತ್ತಿಲ್ಲ, ಬದಲಿಗೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಉಪನಗರಗಳಂತೆ ಭಾಸವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಸಮುದಾಯದ ಧಾರ್ಮಿಕ ಆಚರಣೆಗಳು ಸಾರ್ವಜನಿಕ ಜಾಗವನ್ನು ಅತಿಯಾಗಿ ಆಕ್ರಮಿಸಿಕೊಳ್ಳುತ್ತಿವೆ ಎಂದು ಅಭಿಪ್ರಾಯಪಟ್ಟಿರುವ ಸಚಿವರು, ಡೆನ್ಮಾರ್ಕ್‌ನ ಮನೆಗಳ ಮೇಲ್ಛಾವಣಿಗಳಿಂದ ಇನ್ನು ಮುಂದೆ ಅಜಾನ್ ಧ್ವನಿ ಕೇಳಿಸಬಾರದು ಎಂದು ಕಡಾಖಂಡಿತವಾಗಿ ಹೇಳಿದ್ದಾರೆ. ಪ್ರಸ್ತುತ ಡೆನ್ಮಾರ್ಕ್‌ನಲ್ಲಿ ಮುಸ್ಲಿಮರು ಒಟ್ಟು ಜನಸಂಖ್ಯೆಯ ಶೇಕಡಾ ಐದರಷ್ಟಿದ್ದು, ಅಲ್ಲಿನ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದ್ದಾರೆ. ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ನೇತೃತ್ವದ ಡೆನ್ಮಾರ್ಕ್ ಸರ್ಕಾರವು ಮೊದಲಿನಿಂದಲೂ ವಲಸಿಗರ ವಿಷಯದಲ್ಲಿ ಅತ್ಯಂತ ಕಠಿಣ ಕಾನೂನುಗಳನ್ನು ಜಾರಿಗೆ ತರುತ್ತಲೇ ಬಂದಿದ್ದು, ಈಗಿನ ಅಜಾನ್ ನಿಷೇಧದ ಪ್ರಸ್ತಾಪವು ಅದರದ್ದೇ ಒಂದು ಭಾಗವಾಗಿದೆ.