ಜರ್ಮನಿ : ಜಾಗತಿಕ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಎದುರಿಸುತ್ತಿರುವ ಯುರೋಪಿನ ಅತಿ ದೊಡ್ಡ ವಾಹನ ತಯಾರಕ ಕಂಪನಿ 'ವೋಕ್ಸ್‌ವ್ಯಾಗನ್ ಜಿ' (Volkswagen AG), ತನ್ನ ವೆಚ್ಚ ನಿಯಂತ್ರಣಕ್ಕಾಗಿ ಭಾರಿ ಪ್ರಮಾಣದRestructuring (ಮರುಸಂಘಟನೆ) ಪ್ರಕ್ರಿಯೆಗೆ ಕೈಹಾಕಿದೆ. ಕಂಪನಿಯನ್ನು ಆರ್ಥಿಕವಾಗಿ ಹೆಚ್ಚು ಬಲಪಡಿಸಲು ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಲಿವರ್ ಬ್ಲೂಮ್ ಅವರು ಜಾಗತಿಕವಾಗಿ ಬರೋಬ್ಬರಿ 1,00,000 (ಒಂದು ಲಕ್ಷ) ಉದ್ಯೋಗಗಳನ್ನು ಕಡಿತಗೊಳಿಸಲು ಮತ್ತು ಜರ್ಮನಿಯ 4 ಪ್ರಮುಖ ಉತ್ಪಾದನಾ ಘಟಕಗಳನ್ನು ಮುಚ್ಚಲು ನಿರ್ಧರಿಸಿದ್ದಾರೆ ಎಂದು ಜರ್ಮನ್ ಮಾಧ್ಯಮ 'ಮ್ಯಾನೇಜರ್ ಮ್ಯಾಗಜಿನ್' ವರದಿ ಮಾಡಿದೆ. ಇದು ಈ ದಶಕದ ಅತ್ಯಂತ ದೊಡ್ಡ ಆಟೋಮೊಬೈಲ್ ಬಿಕ್ಕಟ್ಟು ಎನ್ನಲಾಗುತ್ತಿದ್ದು, ಈ ಹಿಂದೆ ಯೋಜಿಸಲಾಗಿದ್ದ ಸಿಬ್ಬಂದಿ ಕಡಿತದ ಪ್ರಮಾಣವನ್ನು ಸಿಇಒ ದ್ವಿಗುಣಗೊಳಿಸಿದ್ದಾರೆ. ಪೋರ್ಷೆ ಮತ್ತು ಆಡಿ ಬ್ರ್ಯಾಂಡ್‌ಗಳ ಮಾಲೀಕತ್ವ ಹೊಂದಿರುವ ಈ ಸಮೂಹದಲ್ಲಿ ಪ್ರಸ್ತುತ ವಿಶ್ವಾದ್ಯಂತ ಸುಮಾರು 6.57 ಲಕ್ಷ ಜನ ಉದ್ಯೋಗದಲ್ಲಿದ್ದು, ಈ ಪೈಕಿ ಶೇ. 15 ಕ್ಕಿಂತ ಹೆಚ್ಚು ಜನ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಕಂಪನಿಯು 2030ರ ವೇಳೆಗೆ ಸುಮಾರು €11 ಬಿಲಿಯನ್ (ಅಂದಾಜು 12.5 ಬಿಲಿಯನ್ ಡಾಲರ್) ಓವರ್‌ಹೆಡ್ ವೆಚ್ಚವನ್ನು ಉಳಿಸುವ ಗುರಿ ಹೊಂದಿದ್ದು, ಇದಕ್ಕಾಗಿ ಜರ್ಮನಿಯ ನೆಕ್ಕರ್‌ಸಲ್ಮ್‌ನಲ್ಲಿರುವ ಆಡಿ ತಾಣ ಹಾಗೂ ಹ್ಯಾನೋವರ್, ಜ್ವಿಕೌ ಮತ್ತು ಎಮ್ಡೆನ್‌ನಲ್ಲಿರುವ ವೋಕ್ಸ್‌ವ್ಯಾಗನ್‌ನ 3 ಪ್ರಮುಖ ಕಾರು ಉತ್ಪಾದನಾ ಘಟಕಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಇದರೊಂದಿಗೆ, ಕಡಿಮೆ ಲಾಭದಾಯಕತೆ ಹೊಂದಿರುವ ಮುಖ್ಯ 'ವೋಕ್ಸ್‌ವ್ಯಾಗನ್' ಬ್ರ್ಯಾಂಡ್ ಅನ್ನು ಇಡೀ ಸಮೂಹದಿಂದ ಪ್ರತ್ಯೇಕಿಸಿ ಕಂಪನಿಯನ್ನು ಹೆಚ್ಚು ಚುರುಕಾಗಿಸಲು (Lean) ಆಲಿವರ್ ಬ್ಲೂಮ್ ಚಿಂತನೆ ನಡೆಸುತ್ತಿದ್ದಾರೆ. ವಿಶ್ವದ ಅತಿ ದೊಡ್ಡ ಆಟೋ ಮಾರುಕಟ್ಟೆಯಾದ ಚೀನಾದಲ್ಲಿ ವೋಕ್ಸ್‌ವ್ಯಾಗನ್ ಮಾರಾಟ ಕುಸಿದಿರುವುದು ಮತ್ತು ಚೀನಾದ ಬಿವೈಡಿ (BYD) ಹಾಗೂ ಯುರೋಪಿನ ಸ್ಟೆಲ್ಲಾಂಟಿಸ್‌ನಂತಹ ದೈತ್ಯ ಇವಿ (ಎಲೆಕ್ಟ್ರಿಕ್ ವಾಹನ) ಕಂಪನಿಗಳಿಂದ ಎದುರಾಗುತ್ತಿರುವ ಪೈಪೋಟಿ ಈ ನಿರ್ಧಾರಕ್ಕೆ ಮುಖ್ಯ ಕಾರಣವಾಗಿದೆ. ಅಮೆರಿಕ ವಿಧಿಸುತ್ತಿರುವ ಹೊಸ ಆಮದು ಸುಂಕಗಳು ಕೂಡ ಜರ್ಮನ್ ಕಾರುಗಳ ಮಾರುಕಟ್ಟೆಗೆ ಹೊಡೆತ ನೀಡಿವೆ. ಈಗಾಗಲೇ ಕಂಪನಿಯು ತನ್ನ ಒಟ್ಟಾರೆ ಉತ್ಪಾದನಾ ಸಾಮರ್ಥ್ಯವನ್ನು ವಾರ್ಷಿಕ 12 ಮಿಲಿಯನ್ ವಾಹನಗಳಿಂದ 9 ಮಿಲಿಯನ್‌ಗೆ ಇಳಿಸಿದೆ.
ಆದರೆ, ಸಿಇಒ ಅವರ ಈ ಕಠಿಣ ಯೋಜನೆಯನ್ನು ಜಾರಿಗೊಳಿಸುವುದು ಸುಲಭವಲ್ಲ. ಕಂಪನಿಯ ಮೇಲ್ವಿಚಾರಣಾ ಮಂಡಳಿಯಲ್ಲಿ (Supervisory Board) ಅರ್ಧದಷ್ಟು ಸ್ಥಾನಗಳನ್ನು ಕಾರ್ಮಿಕ ಪ್ರತಿನಿಧಿಗಳೇ ಹೊಂದಿದ್ದು, ಐಜಿ ಮೆಟಾಲ್ ಒಕ್ಕೂಟ ಹಾಗೂ ಕಾರ್ಮಿಕ ಮಂಡಳಿಯು ಈ ನಿರ್ಧಾರದ ವಿರುದ್ಧ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದೆ. ಹೀಗಾಗಿ ಕಂಪನಿ ಮ್ಯಾನೇಜ್‌ಮೆಂಟ್ ಹಾಗೂ ಕಾರ್ಮಿಕ ಸಂಘಟನೆಗಳ ನಡುವೆ ಮುಂದಿನ ದಿನಗಳಲ್ಲಿ ಭಾರಿ ಸಂಘರ್ಷ ಏರ್ಪಡುವ ಲಕ್ಷಣಗಳು ದಟ್ಟವಾಗಿವೆ.