image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಹತ್ಯೆಗೆ ಇಸ್ರೇಲ್‌ನ ಮೊಸಾದ್ ಸಂಚು ರೂಪಿಸಿತ್ತು : ಪೇಪೆ ಎಸ್ಕೋಬಾರ್

ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಹತ್ಯೆಗೆ ಇಸ್ರೇಲ್‌ನ ಮೊಸಾದ್ ಸಂಚು ರೂಪಿಸಿತ್ತು : ಪೇಪೆ ಎಸ್ಕೋಬಾರ್

ದುಬೈ : ​ಮಧ್ಯಪ್ರಾಚ್ಯದಲ್ಲಿ ಜಾಗತಿಕ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಅಮೆರಿಕಾ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಏರ್ಪಡಿಸಲು ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿದೆ. ಜೂನ್ 21ರಂದು ಸ್ವಿಟ್ಜರ್‌ಲ್ಯಾಂಡ್‌ನ ಬರ್ಗೆನ್‌ಸ್ಟಾಕ್ ರೆಸಾರ್ಟ್‌ನಲ್ಲಿ ನಡೆದ ಈ ಮೊದಲ ಸುತ್ತಿನ ಔಪಚಾರಿಕ ಶಾಂತಿ ಸಭೆಯಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್‌ ಮುನೀರ್‌ ಹಾಗೂ ಪ್ರಧಾನಿ ಶೆಹಬಾಜ್ ಷರೀಫ್ ಸೇರಿದಂತೆ ಉನ್ನತ ಮಟ್ಟದ ಪಾಕ್ ನಿಯೋಗ ಭಾಗವಹಿಸಿತ್ತು. ಈ ಭೇಟಿಯನ್ನೇ ಗುರಿಯಾಗಿಸಿಕೊಂಡು ಇಸ್ರೇಲ್‌ನ ಗುಪ್ತಚರ ಸಂಸ್ಥೆ 'ಮೊಸಾದ್', ಪಾಕ್ ಸೇನಾ ಮುಖ್ಯಸ್ಥ ಮುನೀರ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿತ್ತು ಎಂದು ಬ್ರೆಜಿಲ್‌ನ ಜನಪ್ರಿಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ ಪೇಪೆ ಎಸ್ಕೋಬಾರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

​ರಾಜಕೀಯ ನಿರೂಪಕ ಮಾರಿಯೋ ನವ್ಫಾಲ್ ಆಯೋಜಿಸಿದ್ದ ಜಾಗತಿಕ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಪೇಪೆ ಎಸ್ಕೋಬಾರ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನೇರ ಆದೇಶದ ಮೇರೆಗೆ ಮೊಸಾದ್ ಈ ಹತ್ಯೆ ಸಂಚನ್ನು ರೂಪಿಸಿತ್ತು ಎಂದು ತಿಳಿಸಿದ್ದಾರೆ. ಈ ಕುರಿತು ಪಾಕಿಸ್ತಾನದ ಸೇನೆಗೆ ಅತ್ಯಂತ ವಿಶ್ವಾಸಾರ್ಹ ಉನ್ನತ ಮೂಲಗಳಿಂದ ಮುಂಚಿತವಾಗಿಯೇ ಮಾಹಿತಿ ಸಿಕ್ಕಿತ್ತು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಪಾಕಿಸ್ತಾನ, ಒಮಾನ್ ದೇಶದ ರಾಜತಾಂತ್ರಿಕ ಚಾನೆಲ್‌ಗಳ ಮೂಲಕ ಇಸ್ರೇಲ್‌ಗೆ ಕಠಿಣ ಸಂದೇಶ ರವಾನಿಸಿತ್ತು. "ನೀವು ಒಂದು ವೇಳೆ ನಮ್ಮ ನಿಯೋಗವನ್ನು ಮುಟ್ಟಿದರೆ, ನಾವು ನಿಮ್ಮನ್ನು ಜಾಗತಿಕ ನಕ್ಷೆಯಿಂದಲೇ ಅಳಿಸಿಹಾಕುತ್ತೇವೆ" ಎಂದು ಪಾಕ್ ಇಸ್ರೇಲ್‌ಗೆ ತೀಕ್ಷ್ಣ ಎಚ್ಚರಿಕೆ ನೀಡಿತ್ತು ಎಂದು ಎಸ್ಕೋಬಾರ್ ಸಂಚಲನಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.

​ಜಾಗತಿಕ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಈ ಹೇಳಿಕೆಗಳನ್ನು ಪಾಕಿಸ್ತಾನ ಸರ್ಕಾರ ಹಾಗೂ ಭದ್ರತಾ ಸಂಸ್ಥೆಗಳು ಕಟುವಾಗಿ ನಿರಾಕರಿಸಿದ್ದು, ಇದೆಲ್ಲವೂ ಕೇವಲ ಕಟ್ಟುಕಥೆ ಎಂದು ಸ್ಪಷ್ಟಪಡಿಸಿವೆ. ಪಾಕ್ ಸುದ್ದಿಸಂಸ್ಥೆಯ ಮುಖ್ಯಸ್ಥ ಕಮ್ರಾನ್ ಖಾನ್ ಈ ವರದಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಹಿರಿಯ ಭದ್ರತಾ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಇದು "ಸಂಪೂರ್ಣವಾಗಿ ಅಸಂಬದ್ಧ ಮತ್ತು ಆಧಾರರಹಿತ ವರದಿ" ಎಂದು ಬಣ್ಣಿಸಿದ್ದಾರೆ. ಪ್ರಧಾನಿ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಮುನೀರ್ ಅವರ ಸ್ವಿಟ್ಜರ್‌ಲ್ಯಾಂಡ್ ಪ್ರವಾಸವು ಯಾವುದೇ ಅಡೆತಡೆಗಳಿಲ್ಲದೆ ಅತ್ಯಂತ ಸುಗಮವಾಗಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

​ಲುಸೆರ್ನ್‌ನಲ್ಲಿ ನಿಯೋಗ ತಂಗಿದ್ದ ಅವಧಿಯುದ್ದಕ್ಕೂ ಪಾಕಿಸ್ತಾನದ ಭದ್ರತಾ ವ್ಯವಸ್ಥೆಗಳು ಸಂಪೂರ್ಣವಾಗಿ ಸಕ್ರಿಯವಾಗಿದ್ದವು. ಈ ಪ್ರವಾಸದ ಯಾವುದೇ ಹಂತದಲ್ಲೂ ಸ್ವಿಸ್ ಅಥವಾ ಅಮೆರಿಕದ ಭದ್ರತಾ ತಂಡಗಳಿಂದ ಯಾವುದೇ ರೀತಿಯ ಸುರಕ್ಷತೆಯ ಆತಂಕ ಅಥವಾ ಕಳವಳಗಳು ವ್ಯಕ್ತವಾಗಿರಲಿಲ್ಲ. ಆದ್ದರಿಂದ ಈ ಹತ್ಯೆಯ ಸಂಚಿನ ವರದಿಗಳು ವಾಸ್ತವಕ್ಕೆ ದೂರವಾಗಿವೆ ಎಂದು ಪಾಕ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಇನ್ನು ಈ ಗಂಭೀರ ಆರೋಪಗಳ ಕುರಿತು ಇಸ್ರೇಲ್ ಸರ್ಕಾರವಾಗಲಿ ಅಥವಾ ಮೊಸಾದ್ ಸಂಸ್ಥೆಯಾಗಲಿ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಇರಾನ್ ಬಿಕ್ಕಟ್ಟಿನ ಬೆನ್ನಲ್ಲೇ ಇಸ್ರೇಲ್ ಮತ್ತು ಪಾಕಿಸ್ತಾನದ ನಡುವೆ ರಾಜತಾಂತ್ರಿಕ ವಾಗ್ಯುದ್ಧ ತಾರಕಕ್ಕೇರಿರುವ ಸಂದರ್ಭದಲ್ಲೇ ಈ ಜಾಗತಿಕ ಚರ್ಚೆ ಮುಂಚೂಣಿಗೆ ಬಂದಿದೆ.

Category
ಕರಾವಳಿ ತರಂಗಿಣಿ