ಅಮೇರಿಕಾ : ಯುದ್ಧ ಸಂಧಾನದ ಮಾತುಕತೆಗಳಲ್ಲಿ ಇರಾನ್ ತನ್ನ ದೇಶದ ಮರು ನಿರ್ಮಾಣಕ್ಕಾಗಿ ಭಾರಿ ಮೊತ್ತದ ಹಣವನ್ನು ಕೇಳಿದ್ದು, ಇದಕ್ಕಾಗಿ ಅಮೆರಿಕದ ರಕ್ಷಣಾ ಇಲಾಖೆಯು 80 ಬಿಲಿಯನ್ ಡಾಲರ್ (ಅಂದಾಜು 6.7 ಲಕ್ಷ ಕೋಟಿ ರೂಪಾಯಿ) ನೀಡುವಂತೆ ಸಂಸತ್ತಿಗೆ ಮನವಿ ಮಾಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭಿಸಿರುವ ಯುದ್ಧದಿಂದ ಈಗಾಗಲೇ ಕೋಟ್ಯಂತರ ರೂಪಾಯಿ ವ್ಯಯವಾಗಿರುವ ನಡುವೆ, ಈ ಯುದ್ಧ ಪರಿಹಾರ ಮೊತ್ತಕ್ಕೆ ಕಾನೂನು ಪಂಡಿತರು ಮತ್ತು ಸಂಸದರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ವೈಟ್ ಹೌಸ್‌ನ ಮ್ಯಾನೇಜ್‌ಮೆಂಟ್ ಮತ್ತು ಬಜೆಟ್ ಕಚೇರಿಯು ಪರಿಹಾರ ಮೊತ್ತಕ್ಕಾಗಿ ಕಾಂಗ್ರೆಸ್‌ಗೆ (ಸಂಸತ್ತು) ಈ ಬಗ್ಗೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿಲ್ಲವಾದರೂ, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಇರಾನ್ ಪರಿಹಾರದ ಮೊತ್ತ ಕೋರುತ್ತಿರುವ ಬಗ್ಗೆ ಉನ್ನತ ಉಪ ರಕ್ಷಣಾ ಕಾರ್ಯದರ್ಶಿಯೊಬ್ಬರು ಕಳೆದ ವಾರವೇ ಸೆನೆಟರ್‌ಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಯುದ್ಧ ಪರಿಹಾರವಾಗಿ ಇರಾನ್ ಬಿಲಿಯನ್ ಡಾಲರ್ ಹಣವನ್ನು ಕೋರುತ್ತಿರುವುದು ರಾಜಕೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದೆ. ಯುದ್ಧವನ್ನು ಕೊನೆಗೊಳಿಸಲು ಇರಾನ್ ಜೊತೆ ಟ್ರಂಪ್ ಮಾಡಿಕೊಂಡ ಒಪ್ಪಂದದ ಬಗ್ಗೆಯೂ ಕಾನೂನು ಪಂಡಿತರು ಅನುಮಾನ ವ್ಯಕ್ತಪಡಿಸುತ್ತಿದ್ದು, ಮುಂದಿನ ನಡೆಗಳ ಬಗ್ಗೆ ಜಾಗರೂಕರಾಗಿದ್ದಾರೆ. ಉಪ ರಕ್ಷಣಾ ಕಾರ್ಯದರ್ಶಿ ಸ್ಟೀಫನ್ ಫೀನ್‌ಬರ್ಗ್ ಅವರು ಕಳೆದ ವಾರ ಹಲವಾರು ಸೆನೆಟರ್‌ಗಳೊಂದಿಗೆ ಈ ಕುರಿತು ದೂರವಾಣಿ ಮೂಲಕ ಮಾತನಾಡಿದ್ದಾರೆ. 80 ಬಿಲಿಯನ್ ಡಾಲರ್ ಹಣವನ್ನು ಮ್ಯಾನೇಜ್‌ಮೆಂಟ್ ಮತ್ತು ಬಜೆಟ್ ಕಚೇರಿಗೆ ಕಳುಹಿಸಲಾಗಿದೆ ಎಂದು ಅವರು ಸಂಸತ್ ಸಮಿತಿಗಳಿಗೆ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಪೆಂಟಗನ್ ತಕ್ಷಣ ಲಭ್ಯವಾಗಿಲ್ಲ.
ಇರಾನ್ಗೆ ಯುದ್ಧ ಪರಿಹಾರದ ಜೊತೆಗೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವರ್ಷ ರಕ್ಷಣಾ ಕ್ಷೇತ್ರಕ್ಕೆ ದಾಖಲೆಯ 1.5 ಟ್ರಿಲಿಯನ್ ಡಾಲರ್ ಮೊತ್ತವನ್ನು ನೀಡುವಂತೆ ಸಂಸತ್ ಮುಂದೆ ಮನವಿ ಮಾಡಿದ್ದಾರೆ. ಇದರ ಅನುಮೋದನೆಗಾಗಿ ರಿಪಬ್ಲಿಕ್ ಮತ್ತು ಡೆಮಾಕ್ರೆಟಿಕ್ ಪಕ್ಷಗಳ ಬೆಂಬಲದ ಅಗತ್ಯವಿರುತ್ತದೆ. ಶೀಘ್ರದಲ್ಲೇ ಅವರು ಮತದಾನದ ಮೂಲಕ ಹೆಚ್ಚುವರಿ $350 ಬಿಲಿಯನ್ ಪಡೆಯಲು ಯೋಜಿಸಿದ್ದಾರೆ. ರಕ್ಷಣಾ ಇಲಾಖೆಯು ಕೋರುತ್ತಿರುವ ಈ ಮೊತ್ತವು, ಕಾರ್ಯದರ್ಶಿ ಹೆಗ್ಸೆತ್ ಕಳೆದ ತಿಂಗಳು ಸಂಸತ್ತಿಗೆ ನೀಡಿದ ಸಾಕ್ಷ್ಯದ ಅವಧಿಯಲ್ಲಿ ಅಂದಾಜಿಸಿದ್ದ $29 ಬಿಲಿಯನ್ ಯುದ್ಧದ ವೆಚ್ಚಕ್ಕಿಂತ ತೀರಾ ಹೆಚ್ಚಾಗಿದೆ. ಆ ಮೊತ್ತದ ಬಹುಪಾಲು ಮದ್ದುಗುಂಡುಗಳನ್ನು ಬದಲಾಯಿಸಲು ಮತ್ತು ಉಪಕರಣಗಳನ್ನು ದುರಸ್ತಿ ಮಾಡಲು ಸಂಬಂಧಿಸಿದ್ದಾಗಿತ್ತು. ಆದರೆ, ನಿಯೋಜಿತ ಪಡೆಗಳನ್ನು ಉಳಿಸಿಕೊಳ್ಳಲು ಕಾರ್ಯಾಚರಣೆಯ ವೆಚ್ಚವನ್ನು ಸಹ ಅದು ಒಳಗೊಂಡಿತ್ತು. ಆ ಅಂದಾಜಿನಲ್ಲಿ ಈ ವಲಯದಲ್ಲಿ ಹಾನಿಗೊಳಗಾದ ಅಮೆರಿಕದ ಮಿಲಿಟರಿ ನೆಲೆಗಳನ್ನು ದುರಸ್ತಿ ಮಾಡುವ ಅಥವಾ ಮರುನಿರ್ಮಾಣ ಮಾಡುವ ವೆಚ್ಚ ಸೇರಿರಲಿಲ್ಲ.