ಅಮೇರಿಕ : ಇರಾನ್ ಜೊತೆಗಿನ ಶಾಂತಿ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನದ ಬಗ್ಗೆ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಆಡಿರುವ ಮಾತುಗಳು ಈಗ ಅವರದ್ದೇ ಆದ ರಿಪಬ್ಲಿಕನ್ ಪಕ್ಷದ ನಾಯಕರಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ಅಮೆರಿಕ ರಾಜಕೀಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಯುತ್ತಿರುವ ಇರಾನ್ ಶಾಂತಿ ಮಾತುಕತೆಯಲ್ಲಿ ಪಾಕಿಸ್ತಾನ ಮತ್ತು ಕತಾರ್ ದೇಶಗಳು ಮಧ್ಯಸ್ಥಿಕೆ ವಹಿಸುತ್ತಿವೆ. ಈ ವೇಳೆ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಪಾಕಿಸ್ತಾನವನ್ನು ಹೊಗಳಿ ಮಾತನಾಡಿದ್ದಲ್ಲದೆ, ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರ ಬಗ್ಗೆ ತಮಾಷೆಯಾಗಿ ಮಾತನಾಡಿದ್ದರು. "ನನ್ನ ಜೀವನದಲ್ಲಿ ಇಬ್ಬರು ಪ್ರಮುಖ ವ್ಯಕ್ತಿಗಳಿದ್ದಾರೆ. ಒಬ್ಬರು ಭಾರತೀಯರು, ಮತ್ತೊಬ್ಬರು ಪಾಕಿಸ್ತಾನಿ. ಭಾರತೀಯ ವ್ಯಕ್ತಿ ನನ್ನ ಹೆಂಡತಿ ಉಷಾ ಚಿಲುಕುರಿ ವ್ಯಾನ್ಸ್ ಮತ್ತು ಪಾಕಿಸ್ತಾನಿ ವ್ಯಕ್ತಿ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್" ಎಂದು ವ್ಯಾನ್ಸ್ ಹೇಳಿದ್ದರು. ಅಲ್ಲದೆ ಕಳೆದ ಮೂರು ತಿಂಗಳುಗಳಲ್ಲಿ ತಾನು ಬೇರೆಲ್ಲರಿಗಿಂತ ಹೆಚ್ಚಾಗಿ ಪಾಕ್ ಸೇನಾ ಮುಖ್ಯಸ್ಥರ ಜೊತೆ ಮಾತನಾಡಿದ್ದೇನೆ ಎಂದು ಅತಿಯಾದ ಆತ್ಮೀಯತೆ ವ್ಯಕ್ತಪಡಿಸಿದ್ದರು.
ವ್ಯಾನ್ಸ್ ಅವರ ಈ ಹೇಳಿಕೆಗೆ ರಿಪಬ್ಲಿಕನ್ ಪಕ್ಷದ ಹಿರಿಯ ಶಾಸಕರು ಕಟುವಾಗಿ ಆಕ್ಷೇಪ ವ್ಯಕ್ತಪಡಿಸಿದ್ದು, ಪಾಕಿಸ್ತಾನ ಮತ್ತು ಕತಾರ್ ದೇಶಗಳು ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಇತಿಹಾಸವನ್ನು ಬಿಚ್ಚಿಟ್ಟಿದ್ದಾರೆ. ಅಮೆರಿಕದ ಪ್ರಭಾವಿ ಶಾಸಕ ರಿಕ್ ಸ್ಕಾಟ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕಿಡಿಕಾರಿದ್ದು, "ನಮ್ಮ ನಿಜವಾದ ಸ್ನೇಹಿತರು ಯಾರು ಎಂಬುದು ನಮಗೆ ತಿಳಿದಿರಬೇಕು. ಕತಾರ್ ಮತ್ತು ಪಾಕಿಸ್ತಾನ ದೇಶಗಳಿಗೆ ಭಯೋತ್ಪಾದಕರಿಗೆ ಆಶ್ರಯ ನೀಡಿದ ಇತಿಹಾಸವಿದೆ. ಅವರು ಶಾಂತಿ ಸ್ಥಾಪಿಸುವುದಕ್ಕಿಂತ ಇರಾನ್‌ನ ಭಯೋತ್ಪಾದಕ ಅಭಿಯಾನವನ್ನು ಬೆಂಬಲಿಸುತ್ತಿದ್ದಾರೆ" ಎಂದು ಆಕ್ರೋಶ ಹೊರಹಾಕಿದ್ದಾರೆ. ಅಮೆರಿಕದ ಮಾಜಿ ನೌಕಾಪಡೆ ಅಧಿಕಾರಿಯೂ ಆಗಿರುವ ಕಾಂಗ್ರೆಸ್ ಸದಸ್ಯ ಟಿಮ್ ಶೀಹಿ ಫಾಕ್ಸ್ ನ್ಯೂಸ್ ಸಂದರ್ಶನದಲ್ಲಿ ಖಡಕ್ ತಿರುಗೇಟು ನೀಡಿದ್ದು, "ವಿಶ್ವದ ನಂಬರ್ 1 ಉಗ್ರ ಒಸಾಮಾ ಬಿನ್ ಲಾಡೆನ್‌ನನ್ನು ಸುಮಾರು ಒಂದು ದಶಕ ಕಾಲ ಬಚ್ಚಿಟ್ಟುಕೊಂಡಿದ್ದೇ ಪಾಕಿಸ್ತಾನ. ಅದರ ಗುಪ್ತಚರ ಸಂಸ್ಥೆ ಐಎಸ್‌ಐ ನಮ್ಮ ವಿರುದ್ಧದ ದಂಗೆಕೋರರಿಗೆ ಹಣ ನೀಡಿದೆ. ಇಂತಹ ದೇಶಗಳು ನಿಷ್ಪಕ್ಷಪಾತ ಮಧ್ಯಸ್ಥಿಕೆದಾರರು ಎನಿಸಿಕೊಳ್ಳಲು ಹೇಗೆ ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ. ಮಾತುಕತೆಯ ಮೇಜಿನಲ್ಲಿ ಪಾಕಿಸ್ತಾನದ ಬದಲು ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ನಿಜವಾದ ಮಿತ್ರರಾಷ್ಟ್ರಗಳಾಗಿರುವ ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಇಸ್ರೇಲ್ ಮತ್ತು ಸೌದಿ ಅರೇಬಿಯಾವನ್ನು ಸೇರಿಸಿಕೊಳ್ಳಬೇಕು ಹಾಗೂ ಅಮೆರಿಕವು ಇಸ್ರೇಲ್ ಮತ್ತು ಯುಎಇ ಜೊತೆ ದೃಢವಾಗಿ ನಿಲ್ಲಬೇಕು ಎಂದು ಟಿಮ್ ಶೀಹಿ ಇದೇ ವೇಳೆ ಒತ್ತಾಯಿಸಿದ್ದಾರೆ.