ಅಮೆರಿಕ : ಅಮೆರಿಕದ ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿರುವ ಪ್ರಸಿದ್ಧ ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿ ರೋಲರ್ ಕೋಸ್ಟರ್ ರೈಡ್ ತಾಂತ್ರಿಕ ದೋಷದಿಂದಾಗಿ ಮಧ್ಯದಲ್ಲೇ ಸ್ಥಗಿತಗೊಂಡು, ಅದರಲ್ಲಿ ಪ್ರಯಾಣಿಸುತ್ತಿದ್ದ 15 ಮಕ್ಕಳು ಹಾಗೂ ಒಬ್ಬ ವಯಸ್ಕ ವ್ಯಕ್ತಿ ಸುಮಾರು 3 ರಿಂದ 4 ಗಂಟೆಗಳ ಕಾಲ ಆಕಾಶದಲ್ಲೇ ಸಿಲುಕಿಕೊಂಡಿದ್ದ ಆಘಾತಕಾರಿ ಘಟನೆ ನಡೆದಿದೆ. ಆರಂಭದಲ್ಲಿ ಅತ್ಯಂತ ಸಾಹಸಭರಿತವಾಗಿ ಸಾಗುತ್ತಿದ್ದ ರೈಡ್, ಹಠಾತ್ತನೆ ನಿಧಾನಗೊಂಡು ಎತ್ತರದ ಸ್ಥಳವೊಂದರಲ್ಲಿ ಸಂಪೂರ್ಣವಾಗಿ ನಿಂತುಬಿಟ್ಟಿದೆ. ಇದರಿಂದಾಗಿ ರೈಡ್‌ನಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು.
ಯಂತ್ರವನ್ನು ಮರಳಿ ಚಾಲನೆ ಮಾಡಲು ಪಾರ್ಕ್ ಸಿಬ್ಬಂದಿ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾದಾಗ, ತಕ್ಷಣವೇ ನ್ಯೂಯಾರ್ಕ್‌ನ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಲಾಯಿತು. ರೈಡ್‌ನಲ್ಲಿ ಸಿಲುಕಿದ್ದವರು ಸಣ್ಣ ಮಕ್ಕಳಾಗಿದ್ದರಿಂದ ಪಾರ್ಕ್ ಸಿಬ್ಬಂದಿ ಅವರಿಗೆ ನಿರಂತರವಾಗಿ ಧೈರ್ಯ ತುಂಬುತ್ತಾ ಪರಿಸ್ಥಿತಿಯನ್ನು ನಿಭಾಯಿಸಿದರು. ಅಂತಿಮವಾಗಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸುಮಾರು ನಾಲ್ಕು ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ರೋಲರ್ ಕೋಸ್ಟರ್‌ನಲ್ಲಿದ್ದ ಎಲ್ಲಾ 15 ಮಕ್ಕಳು ಮತ್ತು ಒಬ್ಬ ವಯಸ್ಕನನ್ನು ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯ ದೃಶ್ಯಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗುತ್ತಿವೆ.