ಪಾಕಿಸ್ತಾನ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಪಾಕಿಸ್ತಾನ ಪ್ರೇರಿತ ಉಗ್ರರ ಕೃತ್ಯದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಸಂಘರ್ಷ ತಾರಕಕ್ಕೇರಿದೆ. ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಭಾರತ ಸರ್ಕಾರವು ಶತ್ರು ದೇಶದ ಜೊತೆಗಿದ್ದ ದಶಕಗಳ ಇತಿಹಾಸದ 'ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ'ವನ್ನು ತಡೆಹಿಡಿದು, ಪಾಕಿಸ್ತಾನಕ್ಕೆ ನೀರು ಹರಿಯದಂತೆ ಕಠಿಣ ಕ್ರಮ ಕೈಗೊಂಡಿತ್ತು. ಭಾರತದ ಈ ದಿಟ್ಟ ಹೆಜ್ಜೆಯನ್ನು ಪ್ರಶ್ನಿಸಿ ಪಾಕಿಸ್ತಾನವು ವಿಶ್ವಸಂಸ್ಥೆ ಸೇರಿದಂತೆ ಹಲವು ಜಾಗತಿಕ ವೇದಿಕೆಗಳಲ್ಲಿ "ಸಿಂಧೂ ನದಿ ನೀರು ನಮಗೆ ಸೇರಬೇಕು" ಎಂದು ಗೊಳಾಡಿತ್ತು. ಇದಕ್ಕೆ ಭಾರತವು "ಭಯೋತ್ಪಾದನೆಯ ರಕ್ತ ಮತ್ತು ನದಿಯ ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ" ಎಂಬ ತನ್ನ ಖಡಕ್ ಸಿದ್ಧಾಂತವನ್ನು ಜಗತ್ತಿನೆದುರು ಮಂಡಿಸಿ ಪಾಕಿಸ್ತಾನದ ಬಾಯಿ ಮುಚ್ಚಿಸಿತ್ತು.
ಪ್ರಸ್ತುತ ಈ ವಿವಾದದ ಕಿಡಿ ಮತ್ತೆ ಹೊತ್ತಿಕೊಂಡಿದ್ದು, ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಭಾರತದ ವಿರುದ್ಧ ಮತ್ತೊಮ್ಮೆ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಭಾರತಕ್ಕೆ ಬಹಿರಂಗ ಸವಾಲು ಹಾಕಿರುವ ಬಿಲಾವಲ್, "ನಾವು ಸಿಂಧೂ ನದಿಯನ್ನು ಪಡೆದೇ ತೀರುತ್ತೇವೆ, ಪಾಕಿಸ್ತಾನ ತನ್ನ ಹಕ್ಕಿನ ಹೋರಾಟವನ್ನು ಎಂದಿಗೂ ಕೈಬಿಡುವುದಿಲ್ಲ" ಎಂದು ಗುಡುಗಿದ್ದಾರೆ. ಸಿಂಧೂ ನದಿ ನೀರು ಉಭಯ ದೇಶಗಳಲ್ಲೂ ಹರಿಯುತ್ತಿರುವುದರಿಂದ ಭಾರತಕ್ಕೆ ಇರುವಷ್ಟೇ ಸಮಾನ ಹಕ್ಕು ಪಾಕಿಸ್ತಾನಕ್ಕೂ ಇದೆ ಎಂದು ಅವರು ವಾದಿಸಿದ್ದಾರೆ.
ಭಾರತವು ಏಕಪಕ್ಷೀಯವಾಗಿ ಒಪ್ಪಂದವನ್ನು ಮುರಿದಿರುವುದನ್ನು ಶೆಹಬಾಜ್ ಶರೀಫ್ ಸರ್ಕಾರವಾಗಲಿ ಅಥವಾ ಇಸ್ಲಾಮಾಬಾದ್ ಆಗಲಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಬಿಲಾವಲ್ ಭುಟ್ಟೋ ಹೇಳಿದ್ದಾರೆ. 1960 ರಲ್ಲೇ ಸಿಂಧೂ ನದಿ ನೀರು ಹಂಚಿಕೆ ಕುರಿತು ಉಭಯ ದೇಶಗಳ ನಡುವೆ ಐತಿಹಾಸಿಕ ಒಪ್ಪಂದವಾಗಿದ್ದರೂ, ಕಳೆದ ಎರಡು ವರ್ಷಗಳ ಹಿಂದೆ ಭಾರತ ಇದನ್ನು ಉಲ್ಲಂಘಿಸಿದೆ ಎಂದು ಆರೋಪಿಸಿರುವ ಅವರು, ಪಾಕಿಸ್ತಾನ ತನ್ನ ಅಸ್ಮಿತೆಯ ರಕ್ಷಣೆಗಾಗಿ ಹೋರಾಟ ಮುಂದುವರೆಸಲಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಭಾರತದ ವಿರುದ್ಧ ಸಶಸ್ತ್ರ ಹೋರಾಟಕ್ಕೂ ಸಿದ್ಧ ಎಂದು ಪರೋಕ್ಷ ಯುದ್ಧದ ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನದ ಈ ಬೇಜವಾಬ್ದಾರಿ ಆರೋಪ ಮತ್ತು ಬೆದರಿಕೆಗೆ ಭಾರತವು ಜಾಗತಿಕ ವೇದಿಕೆಯಲ್ಲೇ ತಕ್ಕ ಉತ್ತರ ನೀಡಿದೆ. ಪಾಕಿಸ್ತಾನವು ಭಯೋತ್ಪಾದಕರಿಗೆ ಸದಾ ಆಶ್ರಯ ಮತ್ತು ಪೋಷಣೆ ನೀಡುತ್ತಾ ಬಂದಿರುವ ದೇಶ ಎಂದು ತರಾಟೆಗೆ ತೆಗೆದುಕೊಂಡಿರುವ ಭಾರತ, ಎಲ್ಲಿಯವರೆಗೆ ಇಸ್ಲಾಮಾಬಾದ್ ಗಡಿಯಾಚೆಗಿನ ಉಗ್ರಗಾಮಿತ್ವಕ್ಕೆ ಹಣಕಾಸು ಮತ್ತು ಶಸ್ತ್ರಾಸ್ತ್ರ ನೆರವು ನೀಡುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ನೀರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. 1960 ರಲ್ಲಿ ಅಂದಿನ ನಾಯಕರು ಮಾಡಿಕೊಂಡಿದ್ದ ಒಪ್ಪಂದವನ್ನು ಪ್ರಸ್ತುತ ಬದಲಾಗಿರುವ ಭೌಗೋಳಿಕ ಮತ್ತು ರಾಜಕೀಯ ಸ್ಥಿತಿಯಲ್ಲಿ ಹಾಗೆಯೇ ಪಾಲಿಸಲು ಸಾಧ್ಯವಿಲ್ಲ. ಪಾಕಿಸ್ತಾನವು ಮೊದಲು ತನ್ನ ವಿದೇಶಾಂಗ ನೀತಿಯನ್ನು ಬದಲಾಯಿಸಿಕೊಂಡು, ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಹತ್ತಿಕ್ಕಿದರೆ ಮಾತ್ರ ಭಾರತವು ಸಿಂಧೂ ನದಿ ಒಪ್ಪಂದದ ಪಾಲನೆ ಕುರಿತು ಯೋಚಿಸುತ್ತದೆ ಎಂದು ನವದೆಹಲಿ ಸ್ಪಷ್ಟಪಡಿಸಿದೆ.