image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಮಾಸ್ಕೋ ಮೇಲೆ ಉಕ್ರೇನ್‌ನಿಂದ ಇತಿಹಾಸದಲ್ಲೇ ಅತಿ ದೊಡ್ಡ ಡ್ರೋನ್ ದಾಳಿ: ತೈಲ ಸಂಸ್ಕರಣಾಗಾರ ಧಗಧಗ, ವಿಮಾನ ನಿಲ್ದಾಣಗಳು ಸ್ಥಗಿತ

ಮಾಸ್ಕೋ ಮೇಲೆ ಉಕ್ರೇನ್‌ನಿಂದ ಇತಿಹಾಸದಲ್ಲೇ ಅತಿ ದೊಡ್ಡ ಡ್ರೋನ್ ದಾಳಿ: ತೈಲ ಸಂಸ್ಕರಣಾಗಾರ ಧಗಧಗ, ವಿಮಾನ ನಿಲ್ದಾಣಗಳು ಸ್ಥಗಿತ

ಮಾಸ್ಕೋ : ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಡ್ರೋನ್‌ಗಳು ಮತ್ತೊಮ್ಮೆ ಅತ್ಯಂತ ನಿರ್ಣಾಯಕ ಹಾಗೂ ಪ್ರಮುಖ ಅಸ್ತ್ರವಾಗಿ ಹೊರಹೊಮ್ಮಿವೆ. ಗುರುವಾರ ಉಕ್ರೇನ್ ಪಡೆಗಳು ರಷ್ಯಾದ ರಾಜಧಾನಿ ಮಾಸ್ಕೋವನ್ನು ಗುರಿಯಾಗಿಸಿಕೊಂಡು ಭೀಕರ ದಾಳಿ ನಡೆಸಿವೆ. ಇದನ್ನು ಕಳೆದ ಎರಡು ವರ್ಷಗಳಲ್ಲೇ ನಡೆದ ಅತ್ಯಂತ ದೊಡ್ಡ ಡ್ರೋನ್ ದಾಳಿ ಎಂದು ರಷ್ಯಾ ಬಣ್ಣಿಸಿದೆ. ರಷ್ಯಾದ ರಕ್ಷಣಾ ಸಚಿವಾಲಯದ ಅಧಿಕೃತ ಮಾಹಿತಿಯ ಪ್ರಕಾರ, ದೇಶಾದ್ಯಂತ ಒಟ್ಟು 555 ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಇವುಗಳ ಪೈಕಿ ಬರೋಬ್ಬರಿ 194 ಡ್ರೋನ್‌ಗಳು ರಾಜಧಾನಿ ಮಾಸ್ಕೋ ಕಡೆಗೇ ನುಗ್ಗುತ್ತಿದ್ದವು ಎಂಬುದು ಈ ದಾಳಿಯ ತೀವ್ರತೆಗೆ ಸಾಕ್ಷಿಯಾಗಿದೆ. ಉಕ್ರೇನ್‌ನ ಈ ಹಠಾತ್ ವಾಯುದಾಳಿಯಿಂದಾಗಿ ಮಾಸ್ಕೋದ ಪ್ರಮುಖ ತೈಲ ಸಂಸ್ಕರಣಾಗಾರದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕೋದ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಸಿಎನ್‌ಎನ್ ವರದಿಯ ಪ್ರಕಾರ, ಮಾಸ್ಕೋದ ಆಗ್ನೇಯ ಭಾಗದಲ್ಲಿರುವ ಕಪೋಟ್ನ್ಯಾ ತೈಲ ಸಂಸ್ಕರಣಾಗಾರವನ್ನು ಗುರಿಯಾಗಿಸಿಕೊಂಡು ಉಕ್ರೇನ್ ಈ ದಾಳಿ ಸಂಘಟಿಸಿದೆ. ವಿಶೇಷವೆಂದರೆ, ಕೇವಲ ಎರಡು ದಿನಗಳ ಹಿಂದೆಯೂ ಇದೇ ಸಂಸ್ಕರಣಾಗಾರದ ಮೇಲೆ ದಾಳಿ ನಡೆಸಲಾಗಿತ್ತು. ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ದೃಶ್ಯಗಳಲ್ಲಿ ತೈಲ ಸಂಸ್ಕರಣಾಗಾರದಿಂದ ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಮತ್ತೊಂದು ಭೀಕರ ವಿಡಿಯೋದಲ್ಲಿ ಪ್ರಬಲ ಸ್ಫೋಟದ ತೀವ್ರತೆಗೆ ಬೃಹತ್ ಇಂಧನ ಟ್ಯಾಂಕ್‌ನ ಛಾವಣಿಯೇ ಗಾಳಿಯಲ್ಲಿ ಹಾರಿಹೋಗಿರುವುದು ದಾಖಲಾಗಿದೆ. ಮಾಸ್ಕೋ ಮಾತ್ರವಲ್ಲದೆ, ರಷ್ಯಾದ ರೋಸ್ಟೊವ್ ಪ್ರದೇಶದಲ್ಲಿರುವ ಪ್ರಮುಖ ತೈಲ ಡಿಪೋದ ಮೇಲೂ ಉಕ್ರೇನ್ ಯಶಸ್ವಿ ಡ್ರೋನ್ ದಾಳಿ ನಡೆಸಿದ್ದು, ರಷ್ಯಾದ ಇಂಧನ ಮೂಲಗಳಿಗೆ ಭಾರಿ ಹಾನಿ ಉಂಟಾಗಿದೆ ಎಂದು ವರದಿಯಾಗಿದೆ.

Category
ಕರಾವಳಿ ತರಂಗಿಣಿ