ಫ್ರಾನ್ಸ್ : ಜಿ7 ಶೃಂಗಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿರುವ ಪ್ರಧಾನಿ Narendra Modi ಅವರು ವಿವಿಧ ರಾಷ್ಟ್ರಗಳ ಗಣ್ಯರ ಜೊತೆ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ಇದರೊಟ್ಟಿಗೆ ಗುರುವಾರ ಪ್ಯಾರಿಸ್‌ನಲ್ಲಿ ಪ್ರಮುಖ ಉದ್ಯಮಿಗಳನ್ನು ಭೇಟಿಯಾಗಿ ಭಾರತದಲ್ಲಿ ಹೂಡಿಕೆ ಮತ್ತು ವಿಸ್ತರಣಾ ಯೋಜನೆಗಳ ಕುರಿತು ಮಹತ್ವದ ಚರ್ಚೆ ನಡೆಸಿದರು. ಶಿಪ್ಪಿಂಗ್, ಲಾಜಿಸ್ಟಿಕ್ಸ್, ರೈಲ್ವೆ, ನಿರ್ಮಾಣ ಮತ್ತು ಕೃತಕ ಬುದ್ಧಿಮತ್ತೆ (AI) ಸೇರಿದಂತೆ ವಿವಿಧ ವಲಯಗಳಲ್ಲಿ ಸಹಕಾರವನ್ನು ಬಲಪಡಿಸುವ ಕುರಿತು ಫ್ರೆಂಚ್ ಕಂಪನಿಗಳ ಸಿಇಒಗಳೊಂದಿಗೆ ಮಾತುಕತೆ ನಡೆದಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಪ್ಯಾರಿಸ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದವರಲ್ಲಿ ಜಾಗತಿಕ ಶಿಪ್ಪಿಂಗ್ ದೈತ್ಯ ಕಂಪನಿ 'ಸಿಎಂಎ ಸಿಜಿಎಂ' (CMA CGM) ಅಧ್ಯಕ್ಷ ಮತ್ತು ಸಿಇಒ ರೊಡಾಲ್ಫ್ ಸಾಡೆ ಪ್ರಮುಖರಾಗಿದ್ದು, ಕಡಲ ಶಿಪ್ಪಿಂಗ್, ಲಾಜಿಸ್ಟಿಕ್ಸ್ ಮತ್ತು ಜಾಗತಿಕ ಪೂರೈಕೆ ಸರಪಳಿಗಳ ಕುರಿತು ಚರ್ಚೆ ನಡೆಸಿದ್ದಾರೆ. ಪ್ರಧಾನಿ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಾಡೆ, "ಭಾರತದಲ್ಲಿ ನಾವು ಜಾರಿಗೊಳಿಸಬಹುದಾದ ಅಭಿವೃದ್ಧಿ ಯೋಜನೆಗಳ ಕುರಿತು ಜಾಗತಿಕ ಮಟ್ಟದ ಚರ್ಚೆಗಳನ್ನು ನಡೆಸಿದೆವು. ಹಡಗು ನಿರ್ಮಾಣ, ಹಡಗು ಮರುಬಳಕೆ, ಆಳ ಸಮುದ್ರದ ಬಂದರುಗಳು ಹಾಗೂ ಕಂಟೈನರ್ ನಿರ್ಮಾಣದ ಕುರಿತು ನಾವು ಮಾತುಕತೆ ನಡೆಸಿದ್ದೇವೆ. ಜಾಗತಿಕ ಪೂರೈಕೆಯಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಲಿದೆ. ನಾವು ಈಗ ಭಾರತದಲ್ಲೇ ಕಂಟೈನರ್ ಹಡಗುಗಳನ್ನು ನಿರ್ಮಿಸುವ ಸ್ಥಿತಿಯಲ್ಲಿದ್ದೇವೆ ಎಂಬುದು ಖಂಡಿತವಾಗಿಯೂ ಒಂದು ಉತ್ತಮ ಹೆಜ್ಜೆ. ಭಾರತದ ಭವಿಷ್ಯ ಈಗಲೇ ಆರಂಭವಾಗಿದೆ" ಎಂದು ಪ್ರಶಂಸಿದ್ದಾರೆ. ಸಿಎಂಎ ಸಿಜಿಎಂ ಸಂಸ್ಥೆಯು ಭಾರತದಲ್ಲಿನ ಪ್ರಸ್ತುತ ಹೂಡಿಕೆಗಳು, ವಿಸ್ತರಣಾ ಯೋಜನೆಗಳು, ಕೌಶಲ್ಯಾಭಿವೃದ್ಧಿ ಮತ್ತು ಪೂರೈಕೆ ಸರಪಳಿಯಲ್ಲಿ ನಾವೀನ್ಯತೆಗೆ ಕಾರಣವಾಗುವ ಉಪಕ್ರಮಗಳನ್ನು ಹಂಚಿಕೊಂಡಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇದೇ ವೇಳೆ ಪ್ರಧಾನಿ ಮೋದಿ ಅವರು, ಸೈಂಟ್-ಗೋಬೈನ್ (Saint-Gobain) ಅಧ್ಯಕ್ಷ ಮತ್ತು ಸಿಇಒ ಬೆನೈಟ್ ಬಾಜಿನ್ ಅವರನ್ನೂ ಭೇಟಿಯಾಗಿ, ಸುಸ್ಥಿರತೆಗೆ ವಿಶೇಷ ಒತ್ತು ನೀಡುವುದರೊಂದಿಗೆ ಸಾಮಗ್ರಿ ಹಾಗೂ ನಿರ್ಮಾಣ ವಲಯದಲ್ಲಿನ ಅವಕಾಶಗಳ ಕುರಿತು ಚರ್ಚಿಸಿದರು. ಬಳಿಕ ಆಲ್ಸ್ಟೋಮ್ (Alstom) ಸಿಇಒ ಮಾರ್ಟಿನ್ ಸಿಯಾನ್ ಅವರನ್ನು ಭೇಟಿಯಾಗಿ, ಸಾರಿಗೆ ಮತ್ತು ರೈಲ್ವೆ ಆಧುನೀಕರಣದ ಅವಕಾಶಗಳ ಕುರಿತು ಸಮಾಲೋಚನೆ ನಡೆಸಿದರು. ಮುಂದುವರಿದು, ಮಿಸ್ಟ್ರಲ್ ಎಐ (Mistral AI) ಸಹ-ಸಂಸ್ಥಾಪಕ ಮತ್ತು ಸಿಇಒ ಆರ್ಥರ್ ಮೆನ್ಶ್ ಅವರನ್ನೂ ಭೇಟಿಯಾಗಿ ಭಾರತದಲ್ಲಿ ವೇಗವಾಗಿ ಹೆಚ್ಚುತ್ತಿರುವ AI ಅವಕಾಶಗಳು ಮತ್ತು ಜವಾಬ್ದಾರಿಯುತ ಎಐ ಆಡಳಿತದ ಬಗ್ಗೆ ವಿವರಿಸಿದರು.
ಈ ಪ್ರಮುಖ ಉದ್ಯಮಿಗಳ ಭೇಟಿಯ ನಂತರ, ಪ್ರಧಾನಿ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರೊಂದಿಗೆ ಯುರೋಪ್‌ನ ಪ್ರಮುಖ ತಂತ್ರಜ್ಞಾನ ಮತ್ತು ನಾವೀನ್ಯತೆ ಕಾರ್ಯಕ್ರಮವಾದ 'ವಿವಾಟೆಕ್ 2026' (VivaTech 2026) ನಲ್ಲಿ ಭಾಗವಹಿಸಲಿದ್ದಾರೆ ಹಾಗೂ ಅಲ್ಲಿ ನೆರೆದಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ.