image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಇರಾನ್ ಜೊತೆಗಿನ ಐತಿಹಾಸಿಕ ಶಾಂತಿ ಒಪ್ಪಂದ: ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಮೆರಿಕದ ನಿಯೋಗ ಮುನ್ನಡೆಸಲಿರುವ ಜೆ.ಡಿ.ವ್ಯಾನ್ಸ್

ಇರಾನ್ ಜೊತೆಗಿನ ಐತಿಹಾಸಿಕ ಶಾಂತಿ ಒಪ್ಪಂದ: ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಮೆರಿಕದ ನಿಯೋಗ ಮುನ್ನಡೆಸಲಿರುವ ಜೆ.ಡಿ.ವ್ಯಾನ್ಸ್

ವಾಷಿಂಗ್ಟನ್ : ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಇರಾನ್ ಜೊತೆಗೆ ನಡೆಯಲಿರುವ ಐತಿಹಾಸಿಕ ಶಾಂತಿ ಒಪ್ಪಂದದ ಸಹಿ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ನೇತೃತ್ವದ ಅಮೆರಿಕದ ನಿಯೋಗ ಭಾಗವಹಿಸಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಮಾಧ್ಯಮ ಒಂದರ ವರದಿ ಮಾಡಿರುವ ಪ್ರಕಾರ, ಟ್ರಂಪ್ ಮತ್ತು ವ್ಯಾನ್ಸ್ ಇಬ್ಬರೂ ಈಗಾಗಲೇ ಇರಾನ್‌ನ ಪ್ರಮುಖ ಸಮಾಲೋಚಕ ಮೊಹಮ್ಮದ್ ಬಘರ್ ಗಾಲಿಬಾಫ್ ಅವರೊಂದಿಗೆ ಒಪ್ಪಂದದ ತಿಳುವಳಿಕೆ ಪತ್ರಕ್ಕೆ ಎಲೆಕ್ಟ್ರಾನಿಕ್ (ಡಿಜಿಟಲ್) ಸಹಿ ಹಾಕಿದ್ದಾರೆ. ಫ್ರಾನ್ಸ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಟ್ರಂಪ್, ಜೂನ್ 19ರಂದು ನಡೆಯಲಿರುವ ಈ ಪ್ರಮುಖ ಸಹಿ ಕಾರ್ಯಕ್ರಮದಲ್ಲಿ ವ್ಯಾನ್ಸ್ ಹಾಜರಿರಲಿದ್ದಾರೆ. ತಾವು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಕುರಿತು ಇನ್ನೂ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಪ್ಪಂದದ ತಿಳುವಳಿಕೆ ಪತ್ರದ ಸಂಪೂರ್ಣ ಅಂಶಗಳನ್ನು ಶೀಘ್ರದಲ್ಲೇ ಅಥವಾ ಶುಕ್ರವಾರದ ಕಾರ್ಯಕ್ರಮದ ಬಳಿಕ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮತ್ತೊಂದೆಡೆ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್, ಭಾನುವಾರವೇ ಈ ಶಾಂತಿ ಒಪ್ಪಂದಕ್ಕೆ ಡಿಜಿಟಲ್ ರೂಪದಲ್ಲಿ ಸಹಿ ಹಾಕಲಾಗಿದ್ದು, ಈ ವಾರದ ಅಂತ್ಯದೊಳಗೆ ಒಪ್ಪಂದದ ಸಂಪೂರ್ಣ ವಿವರಗಳನ್ನು ಸಾರ್ವಜನಿಕಗೊಳಿಸಲಾಗುವುದು ಎಂದಿದ್ದಾರೆ. ಈ ಮಹತ್ವದ ಒಪ್ಪಂದದ ಮಧ್ಯಸ್ಥಿಕೆಯನ್ನು ಪಾಕಿಸ್ತಾನ ಮತ್ತು ಕತಾರ್ ದೇಶಗಳು ವಹಿಸಿದ್ದವು ಎಂದು ಅವರು ಬಹಿರಂಗಪಡಿಸಿದ್ದಾರೆ. ಇರಾನ್‌ನ ಪುನರ್ನಿರ್ಮಾಣಕ್ಕೆ ಹಣಕಾಸಿನ ನೆರವು ನೀಡುವ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ವ್ಯಾನ್ಸ್, ಭವಿಷ್ಯದಲ್ಲಿ ಇರಾನ್‌ನಲ್ಲಿ ಹೂಡಿಕೆ ಮಾಡುವ ಯಾವುದೇ ಹಣವು ಅಮೆರಿಕಕ್ಕಿಂತ ಹೆಚ್ಚಾಗಿ ಗಲ್ಫ್ ಅರಬ್ ರಾಷ್ಟ್ರಗಳಿಂದ ಬರಲಿದೆ. ಇರಾನ್ ಒಂದು ಸಾಮಾನ್ಯ ದೇಶದಂತೆ ವರ್ತಿಸಿ, ಹೂಡಿಕೆದಾರರಿಗೆ ಪೂರಕ ವಾತಾವರಣ ನಿರ್ಮಿಸಿದರೆ ಗಲ್ಫ್ ದೇಶಗಳು ಅಲ್ಲಿ ಹೂಡಿಕೆ ಮಾಡಲು ಮುಂದೆ ಬರಬಹುದು ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಟೆಹ್ರಾನ್‌ಗೆ ನೇರ ಆರ್ಥಿಕ ನೆರವು ನೀಡುವ ಆಲೋಚನೆಯನ್ನು ತಳ್ಳಿಹಾಕಿದ ಅವರು, ಆ ನೆರವಿಗಾಗಿ ಅಮೆರಿಕದಿಂದ ಒಂದು ಬಿಡಿಗಾಸೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವಿಷಯವಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮಾತನಾಡಿ, ಜಿನೀವಾದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅಮೆರಿಕದೊಂದಿಗೆ ಮೊದಲ ಸುತ್ತಿನ ಮಾತುಕತೆಗಳು ಅಧಿಕೃತವಾಗಿ ಆರಂಭವಾಗಲಿವೆ ಎಂದು ತಿಳಿಸಿರುವುದಾಗಿ ಪ್ರೆಸ್ ಟಿವಿ ವರದಿ ಮಾಡಿದೆ. ಎರಡೂ ಕಡೆಯ ನಿಯೋಗಗಳ ಮುಖ್ಯಸ್ಥರ ನಡುವಿನ ಈ ಪ್ರಮುಖ ಸಭೆ ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯುವ ಸಾಧ್ಯತೆಯಿದೆ. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಏರ್ಪಡುತ್ತಿರುವ ಹಿನ್ನೆಲೆಯಲ್ಲಿ, ಜಾಗತಿಕ ಇಂಧನ ಮಾರುಕಟ್ಟೆಗೆ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯು ಇನ್ನು ಮುಂದೆ ಸಂಪೂರ್ಣವಾಗಿ ಮುಕ್ತವಾಗಲಿದೆ. ತೈಲ ಮತ್ತು ಅನಿಲ ಪೂರೈಕೆಯನ್ನು ತ್ವರಿತಗೊಳಿಸಲು ಹಾಗೂ ಭಾರಿ ಟ್ಯಾಂಕರ್‌ಗಳ ಸುಗಮ ಚಲನೆಗೆ ಆದ್ಯತೆ ನೀಡಲಾಗುವುದು ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಅಮೆರಿಕನ್ ಮಾಧ್ಯಮ ವರದಿ ಮಾಡಿದೆ.

Category
ಕರಾವಳಿ ತರಂಗಿಣಿ