image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಅಮೆರಿಕಕ್ಕೆ ಇರಾನ್ ಷರತ್ತು: ಜಾಗತಿಕ ಒತ್ತಡದ ನಡುವೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಿದ್ಧತೆ

ಅಮೆರಿಕಕ್ಕೆ ಇರಾನ್ ಷರತ್ತು: ಜಾಗತಿಕ ಒತ್ತಡದ ನಡುವೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಿದ್ಧತೆ

ಇರಾನ್ : ವಿಶ್ವಸಂಸ್ಥೆ ಹಾಗೂ ಜಾಗತಿಕ ಮಾರುಕಟ್ಟೆಯ ತೀವ್ರ ಒತ್ತಡದ ಬೆನ್ನಲ್ಲೇ ಅಮೆರಿಕ ಮತ್ತು ಇರಾನ್ ನಡುವೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಮಹತ್ವದ ಸಿದ್ಧತೆಗಳು ನಡೆದಿವೆ. ಆದರೆ, ಅಂತಿಮ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಇರಾನ್ ಈಗ ಅಮೆರಿಕದ ಮುಂದೆ ಅತ್ಯಂತ ಕಠಿಣ ಷರತ್ತುಗಳನ್ನು ವಿಧಿಸುವ ಮೂಲಕ ರಾಜತಾಂತ್ರಿಕ ದಾಳ ಉರುಳಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜತೆಗಿನ ಮಹಾ ಒಪ್ಪಂದ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೊರ್ಮುಜ್ ಜಲಸಂಧಿಯ ಮೇಲಿನ ನೌಕಾ ದಿಗ್ಬಂಧನವನ್ನು ತೆರವುಗೊಳಿಸಲಾಗುವುದು ಎಂದು ಘೋಷಿಸಿದ ತಕ್ಷಣವೇ ಇರಾನ್ ಈ ಪ್ರತಿಕ್ರಿಯೆ ನೀಡಿದೆ. ಅಮೆರಿಕದೊಂದಿಗಿನ ಪ್ರಾಥಮಿಕ ಶಾಂತಿ ಒಪ್ಪಂದಕ್ಕೆ ನಮ್ಮ ಒಪ್ಪಿಗೆಯಿದೆ. ಆದರೆ, ಅಂತಿಮ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ವಾಷಿಂಗ್ಟನ್ ನಮ್ಮ ಬೇಡಿಕೆಗಳನ್ನು ಈಡೇರಿಸಲೇಬೇಕು ಎಂದು ಇರಾನ್‌ನ ಕಾನೂನು ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಉಪ ವಿದೇಶಾಂಗ ಸಚಿವ ಕಾಜೆಮ್ ಘರೀಬಾಬಾದಿ ಖಡಕ್ ಆಗಿ ಹೇಳಿದ್ದಾರೆ.

ಇರಾನ್‌ನ ಸರ್ಕಾರಿ ಸ್ವಾಮ್ಯದ ಪ್ರೆಸ್ ಟಿವಿ ವರದಿಯ ಪ್ರಕಾರ, ಬರುವ ಶುಕ್ರವಾರದಂದು ಉಭಯ ದೇಶಗಳ ನಡುವೆ ಅಧಿಕೃತ ಸಹಿ ಪ್ರಕ್ರಿಯೆ ನಡೆಯಲಿದೆ. ಅದರ ಬೆನ್ನಲ್ಲೇ ಈ ತಿಳಿವಳಿಕೆ ಪತ್ರದ (MoU) ಸಂಪೂರ್ಣ ಪಠ್ಯವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಅಮೆರಿಕದೊಂದಿಗಿನ ಮಾತುಕತೆಯ ಕರಡು ಪ್ರತಿಯಲ್ಲಿ ಇರಾನ್ ತನ್ನ ಪ್ರಮುಖ ನಿಲುವುಗಳನ್ನು ಯಶಸ್ವಿಯಾಗಿ ಸೇರಿಸಿದೆ ಎಂದು ಕಾಜೆಮ್ ಘರೀಬಾಬಾದಿ ತಿಳಿಸಿದ್ದಾರೆ. ಇದು ಕೇವಲ ರಾಜತಾಂತ್ರಿಕತೆಯಿಂದ ಬಂದ ಯಶಸ್ಸಲ್ಲ, ಬದಲಿಗೆ ನಮ್ಮ ಮಿಲಿಟರಿ ಪ್ರತಿರೋಧ ಹಾಗೂ ದೇಶದ ರಕ್ಷಣೆಗಾಗಿ ರಕ್ತ ಹರಿಸಿದ ಹುತಾತ್ಮರ ಬಲಿದಾನಕ್ಕೆ ಸಿಕ್ಕ ಜಯ ಎಂದು ಅವರು ಬಣ್ಣಿಸಿದ್ದಾರೆ. ನಮ್ಮ ವ್ಯವಸ್ಥೆಯನ್ನು ಧ್ವಂಸಗೊಳಿಸಲು ದುಷ್ಟ ಉದ್ದೇಶಗಳೊಂದಿಗೆ ದಾಳಿ ಮಾಡಿದ್ದ ಶತ್ರು ದೇಶವು ತನ್ನ ಎಲ್ಲಾ ಗುರಿಗಳಲ್ಲೂ ಸಂಪೂರ್ಣವಾಗಿ ಸೋತಿದೆ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಈ ಯುದ್ಧದಲ್ಲಿ ಮಹತ್ತರವಾದ ವಿಜಯಗಳನ್ನು ಸಾಧಿಸಿದೆ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ. ಶುಕ್ರವಾರ ನಡೆಯಲಿರುವ ಅಧಿಕೃತ ಸಹಿ ಪ್ರಕ್ರಿಯೆಯ ಬಳಿಕ ಮುಂದಿನ ಮಾತುಕತೆಗಳ ಸ್ವರೂಪ ಹೇಗಿರಬೇಕು ಎಂಬುದನ್ನು ಉಭಯ ದೇಶಗಳ ನಿಯೋಗಗಳು ನಿರ್ಧರಿಸಲಿವೆ.

ಸಮಗ್ರ ಶಾಂತಿ ಒಪ್ಪಂದಕ್ಕಾಗಿ ನಿಗದಿಪಡಿಸಲಾಗಿರುವ ಮುಂದಿನ 60 ದಿನಗಳ ದೀರ್ಘಾವಧಿಯ ಮಾತುಕತೆಯ ಪ್ರಕ್ರಿಯೆಗೆ ಇರಾನ್ ತಕ್ಷಣವೇ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅದಕ್ಕೂ ಮುನ್ನ ಅಮೆರಿಕ ಸರ್ಕಾರವು ತನ್ನ ಪ್ರಾಥಮಿಕ ಬದ್ಧತೆಗಳನ್ನು ಈಡೇರಿಸಿದೆಯೇ ಇಲ್ಲವೇ ಎಂಬುದನ್ನು ಇರಾನ್ ಕೂಲಂಕಷವಾಗಿ ಪರಿಶೀಲಿಸಲಿದೆ. ಇರಾನ್ ಮುಖ್ಯವಾಗಿ ಅಮೆರಿಕದ ಮುಂದೆ ಈ ಮೂರು ಕಠಿಣ ಷರತ್ತುಗಳನ್ನು ಇಟ್ಟಿದೆ. ಮೊದಲನೆಯದಾಗಿ, ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅದರ ಬೆಂಬಲಿತ ಪಡೆಗಳ ಮೇಲಿನ ಎಲ್ಲಾ ದಾಳಿಗಳನ್ನು ಅಮೆರಿಕ ತಕ್ಷಣವೇ ನಿಲ್ಲಿಸಬೇಕು. ಎರಡನೆಯದಾಗಿ, ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯ ಮೇಲಿನ ಅಮೆರಿಕದ ನೌಕಾ ದಿಗ್ಬಂಧನವನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು. ಮೂರನೆಯದಾಗಿ, ಅಮೆರಿಕ ಮುಟ್ಟುಗೋಲು ಹಾಕಿಕೊಂಡಿರುವ ಇರಾನ್ ದೇಶದ ಕೋಟ್ಯಂತರ ಮೌಲ್ಯದ ಹಣಕಾಸು ಮತ್ತು ಆರ್ಥಿಕ ಆಸ್ತಿಗಳನ್ನು ತಕ್ಷಣವೇ ಮುಕ್ತಗೊಳಿಸಬೇಕು. ಅಮೆರಿಕ ಈ ಮೂರು ಪ್ರಮುಖ ಬದ್ಧತೆಗಳನ್ನು ಈಡೇರಿಸಿದರೆ ಮಾತ್ರ ನಾವು ಮುಂದಿನ 60 ದಿನಗಳ ಉನ್ನತ ಮಟ್ಟದ ಮಾತುಕತೆಗೆ ಒಪ್ಪುತ್ತೇವೆ ಎಂದು ಘರೀಬಾಬಾದಿ ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಜತೆ ಒಪ್ಪಂದದ ಹಂತಕ್ಕೆ ಬಂದಿರುವುದನ್ನು ಇರಾನ್ ಎಲ್ಲೂ ಸಂಭ್ರಮಿಸುತ್ತಿಲ್ಲ, ಬದಲಿಗೆ ಅತ್ಯಂತ ಜಾಗರೂಕತೆಯ ಹೆಜ್ಜೆಯನ್ನಿಟ್ಟಿದೆ. ಈ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗುತ್ತಿದೆ ಎಂದರೆ ನಾವು ಶತ್ರುವನ್ನು ಸಂಪೂರ್ಣವಾಗಿ ನಂಬಿದ್ದೇವೆ ಎಂದು ಅರ್ಥವಲ್ಲ. ಅಮೆರಿಕ ತನ್ನ ವಾಗ್ದಾನಗಳನ್ನು ಹೇಗೆ ಈಡೇರಿಸುತ್ತದೆ ಎಂಬುದನ್ನು ನಾವು ಹದ್ದಿನ ಕಣ್ಣಿನಿಂದ ಕಾವಲು ಕಾಯಲಿದ್ದೇವೆ ಎಂದು ಇರಾನ್ ನಾಯಕರು ಎಚ್ಚರಿಸಿದ್ದಾರೆ. ಅಮೆರಿಕದ ಹಳೆಯ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಇರಾನ್ ಈ ಕಠಿಣ ನಿಲುವು ತಳೆದಿರುವುದು ಸ್ಪಷ್ಟವಾಗಿದೆ.

Category
ಕರಾವಳಿ ತರಂಗಿಣಿ