image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಅಮೆರಿಕ-ಇರಾನ್ ಮಹಾ ಸಮರಕ್ಕೆ ಮುಕ್ತಿ : ಹೊರ್ಮುಝ್ ಜಲಸಂಧಿ ಮುಕ್ತಗೊಳಿಸಲು ಒಪ್ಪಂದ ಅಂತಿಮ

ಅಮೆರಿಕ-ಇರಾನ್ ಮಹಾ ಸಮರಕ್ಕೆ ಮುಕ್ತಿ : ಹೊರ್ಮುಝ್ ಜಲಸಂಧಿ ಮುಕ್ತಗೊಳಿಸಲು ಒಪ್ಪಂದ ಅಂತಿಮ

ನವದೆಹಲಿ : ಜಾಗತಿಕ ಆರ್ಥಿಕತೆ ಮತ್ತು ತೈಲ ಮಾರುಕಟ್ಟೆಯನ್ನು ತಲ್ಲಣಗೊಳಿಸಿದ್ದ ಅಮೆರಿಕ ಹಾಗೂ ಇರಾನ್ ನಡುವಿನ ಭೀಕರ ಯುದ್ಧಕ್ಕೆ ಕೊನೆಗೂ ಶಾಶ್ವತ ಬ್ರೇಕ್ ಬೀಳುವ ಕಾಲ ಸನ್ನಿಹಿತವಾಗಿದೆ. ಕಳೆದ 100ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿದ್ದ ಮಿಲಿಟರಿ ಕಾರ್ಯಾಚರಣೆ ಮತ್ತು ರಾಜತಾಂತ್ರಿಕ ಹಗ್ಗಜಗ್ಗಾಟಕ್ಕೆ ತೆರೆಬಿದ್ದಿದ್ದು, ಉಭಯ ದೇಶಗಳ ನಡುವಿನ ಶಾಂತಿ ಒಪ್ಪಂದ ಅಂತಿಮಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಫೆಬ್ರವರಿ 28ರಂದು ಆರಂಭವಾಗಿದ್ದ ಈ ಸಂಘರ್ಷದಿಂದಾಗಿ ಜಾಗತಿಕವಾಗಿ ತೈಲ ಬಿಕ್ಕಟ್ಟಿನ ಆತಂಕ ಎದುರಾಗಿತ್ತು, ಆದರೆ ಈ ಮಹತ್ವದ ಬೆಳವಣಿಗೆಯಿಂದಾಗಿ ಇಡೀ ಜಗತ್ತಿಗೆ ದೊಡ್ಡ ಮುಕ್ತಿ ಸಿಕ್ಕಂತಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 'ಟ್ರೂತ್ ಸೋಷಿಯಲ್' ಖಾತೆಯಲ್ಲಿ ಈ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜೊತೆಗಿನ ಒಪ್ಪಂದವು ಈಗ ಪೂರ್ಣಗೊಂಡಿದೆ ಎಂದು ತಿಳಿಸಿರುವ ಅವರು, ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇಂದಿನಿಂದಲೇ ಜಾರಿಗೆ ಬರುವಂತೆ ಹಾರ್ಮುಜ್ ಜಲಸಂಧಿಯನ್ನು ಟೋಲ್-ಮುಕ್ತವಾಗಿ ತೆರೆಯಲು ಮತ್ತು ಅಮೆರಿಕ ನೌಕಾಪಡೆಯ ದಿಗ್ಬಂಧನವನ್ನು ತಕ್ಷಣವೇ ಹಿಂಪಡೆಯಲು ಸಂಪೂರ್ಣ ಅಧಿಕಾರ ನೀಡಿ ಆದೇಶಿಸಿರುವುದಾಗಿ ಟ್ರಂಪ್ ಬರೆದುಕೊಂಡಿದ್ದಾರೆ. "ವಿಶ್ವದ ಹಡಗುಗಳೇ, ನಿಮ್ಮ ಇಂಜಿನ್‌ಗಳನ್ನು ಸ್ಟಾರ್ಟ್ ಮಾಡಿ. ತೈಲವು ಮುಕ್ತವಾಗಿ ಹರಿಯಲಿ!" ಎಂದು ಅವರು ಕರೆ ನೀಡಿದ್ದಾರೆ. ಇರಾನ್ ಕೂಡ ಈ ಒಪ್ಪಂದವನ್ನು ಖಚಿತಪಡಿಸಿದ್ದು, ಇವತ್ತು ರಾತ್ರಿಯಿಂದಲೇ ಹೊರ್ಮುಝ್ ಜಲಸಂಧಿ ಮುಕ್ತಗೊಳ್ಳಲಿದೆ ಎಂದು ತಿಳಿಸಿದೆ. ಆದಾಗ್ಯೂ, ಈ ಒಪ್ಪಂದದ ಅರ್ಥ ಶತ್ರುವನ್ನು ಪೂರ್ತಿಯಾಗಿ ನಂಬುವುದು ಎಂದಲ್ಲ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದ್ದು, ಅಮೆರಿಕದ ಬದ್ಧತೆಗಳನ್ನು ಸೂಕ್ಷ್ಮವಾಗಿ ಗಮನಿಸುವುದಾಗಿ ಹೇಳಿವೆ. ಮುಂದಿನ 60 ದಿನಗಳ ಕದನ ವಿರಾಮದ ಅವಧಿಯಲ್ಲಿ ಅಂತಿಮ ಒಪ್ಪಂದದ ಮಾತುಕತೆಗಳು ಮುಂದುವರಿಯಲಿವೆ.

ಅಮೆರಿಕ ಮತ್ತು ಇರಾನ್ ನಡುವಿನ ಈ ತೀವ್ರ ಸಂಘರ್ಷವನ್ನು ತಣ್ಣಗಾಗಿಸಲು ಪಾಕಿಸ್ತಾನ ಪ್ರಮುಖ ಮಧ್ಯಸ್ಥಿಕೆ ವಹಿಸಿತ್ತು. ಈ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ವ್ಯಾಪಕ ಮಾತುಕತೆಗಳ ನಂತರ ಉಭಯ ದೇಶಗಳ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿರುವುದಾಗಿ ಪ್ರಕಟಿಸಲು ಸಂತೋಷ ವ್ಯಕ್ತಪಡಿಸಿದ್ದಾರೆ. ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ಮತ್ತು ಶಾಶ್ವತವಾಗಿ ಕೊನೆಗೊಳಿಸಲು ಉಭಯ ದೇಶಗಳು ಒಪ್ಪಿಕೊಂಡಿದ್ದು, ಜೂನ್ 19ರ ಶುಕ್ರವಾರದಂದು ಸ್ವಿಟ್ಚರ್ಲೆಂಡ್‌ನಲ್ಲಿ ಅಧಿಕೃತ ಸಹಿ ಸಮಾರಂಭ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಜುಲೈ ಆರಂಭದಲ್ಲಿ ಇರಾನ್‌ನ ಮಾಜಿ ಸುಪ್ರೀಂ ಲೀಡರ್ ಆಯತೊಲ್ಲಾ ಖಮೇನಿ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಅದಕ್ಕೂ ಮುನ್ನವೇ ಈ ಕದನ ವಿರಾಮ ಜಾರಿಗೆ ಬರುತ್ತಿರುವುದು ಗಮನಾರ್ಹವಾಗಿದೆ.

ಒಂದೆಡೆ ಶಾಂತಿ ಮಾತುಕತೆಗಳು ಅಂತಿಮ ಹಂತ ತಲುಪಿದ್ದಾಗಲೇ, ಇಸ್ರೇಲ್ ಸೇನೆ ಲೆಬನಾನ್ ಮೇಲೆ ಭೀಕರ ದಾಳಿ ನಡೆಸಿತ್ತು. ಇಸ್ರೇಲ್‌ನ ಈ ಕ್ರಮಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಯುದ್ಧ ನಿಲ್ಲುವ ಮುನ್ಸೂಚನೆ ಸಿಕ್ಕಿದ್ದರೂ, ಲೆಬನಾನ್ ಮೇಲಿನ ದಾಳಿಯನ್ನು ಇಸ್ರೇಲ್ ಸಂಪೂರ್ಣವಾಗಿ ನಿಲ್ಲಿಸುತ್ತದೆಯೇ ಮತ್ತು ಇಸ್ರೇಲ್ ಈ ಒಪ್ಪಂದದ ಭಾಗವಾಗಿದೆಯೇ ಇಲ್ಲವೇ ಎಂಬುದು ಜಿನೇವಾದಲ್ಲಿ ನಡೆಯುವ ಸುದ್ದಿಗೋಷ್ಠಿಯ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ.

Category
ಕರಾವಳಿ ತರಂಗಿಣಿ