ಫಿಲಿಪ್ಪಿನ್ಸ್ : ಸೋಮವಾರ ಸಂಭವಿಸಿದ 7.8 ತೀವ್ರತೆಯ ಪ್ರಬಲ ಭೂಕಂಪವು ಭಾರಿ ವಿನಾಶವನ್ನು ಸೃಷ್ಟಿಸಿದ್ದು, ಕನಿಷ್ಠ 37 ಮಂದಿ ಸಾವನ್ನಪ್ಪಿದ್ದಾರೆ. ದುರಂತ ಸಂಭವಿಸಿದ ಮರುದಿನವಾದ ಇಂದು ದಕ್ಷಿಣ ಫಿಲಿಪೈನ್ಸ್‌ನಲ್ಲಿ ರಕ್ಷಣಾ ಸಿಬ್ಬಂದಿ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಯಾರಾದರೂ ಸಿಲುಕಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸದ್ಯ ಅಧಿಕೃತ ದಾಖಲೆಗಳ ಪ್ರಕಾರ ಕೇವಲ ನಾಲ್ಕು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಕುಸಿದ ಮತ್ತು ತೀವ್ರವಾಗಿ ಹಾನಿಗೊಳಗಾದ ಕಟ್ಟಡಗಳಲ್ಲಿ ಯಾರಾದರೂ ಬದುಕುಳಿದಿದ್ದಾರೆಯೇ ಅಥವಾ ಸಾವುನೋವುಗಳು ಸಂಭವಿಸಿವೆಯೇ ಎಂಬುದನ್ನು ಸಂಪೂರ್ಣವಾಗಿ ಪರಿಶೀಲಿಸಬೇಕಾಗಿದೆ ಎಂದು ನಾಗರಿಕ ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ. ಫಿಲಿಪ್ಪಿನ್ಸ್‌ನ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದ್ವೀಪವಾದ ಮಿಂಡಾನಾವೊದಲ್ಲಿ ಈ ಭೂಕಂಪದ ಕೇಂದ್ರಬಿಂದು ಇತ್ತು. ಪ್ರಸ್ತುತ ದುರಂತದಲ್ಲಿ ಸುಮಾರು 500 ಜನರು ಗಾಯಗೊಂಡಿದ್ದು, 20,000ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇವರಲ್ಲಿ ಹೆಚ್ಚಿನವರು ತುರ್ತು ಆಶ್ರಯ ತಾಣಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಭೂಕಂಪನದ ಬೆನ್ನಲ್ಲೇ ಸುನಾಮಿಯ ಭಯ ಎದುರಾಗಿದ್ದರಿಂದ ಅನೇಕ ಜನರು ತಮ್ಮ ಮನೆಗಳನ್ನು ತೊರೆದು ಓಡಿಹೋಗಿದ್ದಾರೆ. ಕರಾವಳಿ ಪ್ರದೇಶಗಳಲ್ಲಿ ಸುಮಾರು 1.4 ಮೀಟರ್ ಎತ್ತರದ ಸಾಗರದ ಅಲೆಗಳು ಕಂಡುಬಂದಿದ್ದು, ಕರಾವಳಿ ಹಳ್ಳಿಯೊಂದರಲ್ಲಿ ಆರು ಗುಡಿಸಲುಗಳು ಹಾನಿಗೊಳಗಾಗಿವೆ. ಇದರ ಸಣ್ಣ ಅಲೆಗಳು ಇಂಡೋನೇಷ್ಯಾ, ಪಲಾವ್ ಮತ್ತು ದಕ್ಷಿಣ ಜಪಾನ್‌ನ ತೀರಕ್ಕೂ ಅಪ್ಪಳಿಸಿವೆ.
ದೇಶದ ರಾಜಧಾನಿ ಟ್ಯೂನ ಮತ್ತು ಕರಾವಳಿ ನಗರವಾದ ಜನರಲ್ ಸ್ಯಾಂಟೋಸ್‌ನಲ್ಲಿ ಕಟ್ಟಡಗಳು ಧರಾಶಾಹಿಯಾದ ಪರಿಣಾಮ ಕನಿಷ್ಠ 13 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಸರಂಗೈ ಪ್ರಾಂತ್ಯದಲ್ಲಿ ಸಂಭವಿಸಿದ ಕಟ್ಟಡ ಮತ್ತು ಭೂಕುಸಿತಕ್ಕೆ 18 ಮಂದಿ ಬಲಿಯಾಗಿದ್ದಾರೆ. ಉಳಿದ ಸಾವುಗಳು ದಕ್ಷಿಣ ಪ್ರಾಂತ್ಯವಾದ ದಕ್ಷಿಣ ಕೊಟಾಬಾಟೊ, ದಾವೊ ಆಕ್ಸಿಡೆಂಟಲ್ ಮತ್ತು ಬಲೂಟ್ ದ್ವೀಪದಲ್ಲಿ ಸಂಭವಿಸಿವೆ ಎಂದು ವಿಪತ್ತು ಪ್ರತಿಕ್ರಿಯೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಮೌಲ್ಯಮಾಪನದ ಪ್ರಕಾರ, ವಿವಿಧ ಪ್ರಾಂತ್ಯಗಳಲ್ಲಿ ಸುಮಾರು 2,000 ಮನೆಗಳು ಹಾಗೂ 117 ಸರ್ಕಾರಿ ಕಟ್ಟಡಗಳು ಮತ್ತು ಸೌಲಭ್ಯಗಳು ಹಾನಿಗೊಳಗಾಗಿವೆ. ಸದ್ಯ ಸರ್ಕಾರವು ಹಾನಿಯ ಸಂಪೂರ್ಣ ಮೌಲ್ಯಮಾಪನ ನಡೆಸುತ್ತಿದ್ದು, ಜನರಲ್ ಸ್ಯಾಂಟೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದರಿಂದಾಗಿ 63 ದೇಶೀಯ ವಿಮಾನಗಳ ಸಂಚಾರ ರದ್ದಾಗಿದೆ. ದುರದೃಷ್ಟವಶಾತ್, ಬೇಸಿಗೆ ರಜೆಯ ಬಳಿಕ ಶಾಲೆಗಳು ಆರಂಭವಾದ ಮೊದಲ ದಿನವೇ ಈ ದುರಂತ ಸಂಭವಿಸಿದೆ. ಭೂಕಂಪದಿಂದಾಗಿ ಸುಮಾರು 6,000 ಸಾರ್ವಜನಿಕ ಶಾಲೆಗಳು ತೊಂದರೆಗೊಳಗಾಗಿದ್ದು, ಶಾಲಾರಂಭದ ಮೊದಲ ದಿನವೇ ಅವುಗಳನ್ನು ಬಂದ್ ಮಾಡಲಾಗಿದೆ. ಭೂಕಂಪದ ತೀವ್ರತೆಗೆ ಅನೇಕ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಮಕ್ಕಳ ಮೊದಲ ದಿನದ ಶಾಲೆಯ ಸಂಭ್ರಮ ಆತಂಕವಾಗಿ ಮಾರ್ಪಟ್ಟಿದೆ. ಹಲವು ಶಾಲಾ ಕಟ್ಟಡಗಳು ಕುಸಿದಿದ್ದು, ಇನ್ನು ಕೆಲವು ಕಟ್ಟಡಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಸುರಕ್ಷತೆಯ ದೃಷ್ಟಿಯಿಂದ ಈ ಶಾಲೆಗಳನ್ನು ತಕ್ಷಣಕ್ಕೆ ತೆರೆಯುವುದಿಲ್ಲ ಹಾಗೂ ಕಟ್ಟಡಗಳ ಸುರಕ್ಷತೆಯನ್ನು ಖಚಿತಪಡಿಸಿಕೊಂಡ ಬಳಿಕವೇ ಪುನಾರಂಭಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಭೂಕಂಪವು ಸಾರಂಗನಿ ಪ್ರಾಂತ್ಯದ ಮಾಸಿಮ್ ಪಟ್ಟಣದ ನೈಋತ್ಯಕ್ಕೆ ಸುಮಾರು 32 ಕಿ.ಮೀ ದೂರದಲ್ಲಿ, ಸಮುದ್ರದ 33 ಕಿ.ಮೀ ಆಳದಲ್ಲಿ ಕೇಂದ್ರೀಕೃತವಾಗಿತ್ತು. ಕೊಟಾಬಾಟೊ ಕಂದಕದಲ್ಲಿನ ಭೌಗೋಳಿಕ ಚಲನೆಯಿಂದಾಗಿ ಈ ವಿಪತ್ತು ಸಂಭವಿಸಿದೆ ಎಂದು ಫಿಲಿಪ್ಪಿನ್ಸ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆಯ ನಿರ್ದೇಶಕ ಟೆರೆಸಿಟೊ ಬಾಕೊಲ್ಕೊಲ್ ತಿಳಿಸಿದ್ದಾರೆ. ಇದು 1976ರ ಬಳಿಕ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪವಾಗಿದೆ. ಅಂದು 1976ರ ಆಗಸ್ಟ್ 17ರಂದು ಸಂಭವಿಸಿದ್ದ 8.1 ತೀವ್ರತೆಯ ಭೂಕಂಪ ಮತ್ತು ಅದರ ಬೆನ್ನಲ್ಲೇ ಎದ್ದ 8 ರಿಂದ 10 ಮೀಟರ್ ಎತ್ತರದ ಭೀಕರ ಸುನಾಮಿ ಅಲೆಗಳಿಂದಾಗಿ ಸುಮಾರು 8,000 ಜನರು ಸಾವನ್ನಪ್ಪಿದ್ದರು. ಅದಾದ ನಂತರ 1990 ರಲ್ಲಿ ಸಂಭವಿಸಿದ 7.8 ತೀವ್ರತೆಯ ಮತ್ತೊಂದು ಭೂಕಂಪವು ಉತ್ತರ ಪ್ರಾಂತ್ಯಗಳಲ್ಲಿ ವ್ಯಾಪಕ ಹಾನಿ ಉಂಟುಮಾಡಿ 1,000ಕ್ಕೂ ಹೆಚ್ಚು ಜನರನ್ನು ಬಲಿಪಡೆದಿತ್ತು. ಫಿಲಿಪ್ಪಿನ್ಸ್ ದೇಶವು ಭೌಗೋಳಿಕವಾಗಿ ಪೆಸಿಫಿಕ್ "ರಿಂಗ್ ಆಫ್ ಫೈರ್" ವಲಯದಲ್ಲಿ ನೆಲೆಗೊಂಡಿರುವುದರಿಂದ, ಇಲ್ಲಿ ಆಗಾಗ್ಗೆ ಪ್ರಬಲ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳು ಸಂಭವಿಸುತ್ತಿರುತ್ತವೆ. ಇದರೊಂದಿಗೆ ಈ ದ್ವೀಪಸಮೂಹವು ಪ್ರತಿ ವರ್ಷ ಸುಮಾರು 20 ಟೈಫೂನ್ ಮತ್ತು ಉಷ್ಣವಲಯದ ಬಿರುಗಾಳಿಗಳಿಗೂ ತುತ್ತಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಫಿಲಿಪ್ಪಿನ್ಸ್ ವಿಶ್ವದಲ್ಲೇ ಅತ್ಯಂತ ಹೆಚ್ಚು ನೈಸರ್ಗಿಕ ವಿಪತ್ತು ಪೀಡಿತ ದೇಶಗಳಲ್ಲಿ ಒಂದಾಗಿದೆ.