ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಮುಖ ಸುದ್ದಿ ಸಂಸ್ಥೆಯೊಂದರ ಸಂದರ್ಶನದ ವೇಳೆ ಮಹಿಳಾ ನಿರೂಪಕಿಯೊಂದಿಗೆ ತೀವ್ರ ವಾಗ್ವಾದ ನಡೆಸಿ, ಕೋಪದಿಂದ ಮಧ್ಯದಲ್ಲೇ ಹೊರನಡೆದಿರುವ ಘಟನೆ ನಡೆದಿದೆ. NBC ನ್ಯೂಸ್‌ನ ಪ್ರಸಿದ್ಧ ಕಾರ್ಯಕ್ರಮ ‘ಮೀಟ್ ದಿ ಪ್ರೆಸ್’ (Meet the Press) ಗಾಗಿ ನಿರೂಪಕಿ ಕ್ರಿಸ್ಟನ್ ವೆಲ್ಕರ್ ನಡೆಸುತ್ತಿದ್ದ ಸಂದರ್ಶನವನ್ನು ಟ್ರಂಪ್ ಹಠಾತ್ತನೆ ಕೊನೆಗೊಳಿಸಿದ್ದಾರೆ.
ವಿಸ್ಕಾನ್ಸಿನ್‌ನಲ್ಲಿ ನಡೆದ ಈ ಮುಖಾಮುಖಿ ಸಂದರ್ಶನದಲ್ಲಿ, 2020 ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಾಗೂ ಇತ್ತೀಚಿನ ಕ್ಯಾಲಿಫೋರ್ನಿಯಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ತಮ್ಮ ಹಳೆಯ ಆರೋಪಗಳನ್ನು ಟ್ರಂಪ್ ಮತ್ತೊಮ್ಮೆ ಸಮರ್ಥಿಸಿಕೊಂಡರು. ಈ ವೇಳೆ ನಿರೂಪಕಿ ಕ್ರಿಸ್ಟನ್ ವೆಲ್ಕರ್ ಅವರು ಚುನಾವಣಾ ವಂಚನೆಯ ಹೇಳಿಕೆಗಳನ್ನು ತಿರಸ್ಕರಿಸಿ, ನಿಮ್ಮ ಆರೋಪಗಳಿಗೆ ಸೂಕ್ತ ಪುರಾವೆಗಳನ್ನು ಒದಗಿಸುವಂತೆ ಪದೇ ಪದೇ ಒತ್ತಾಯಿಸಿದರು. ಇದರಿಂದ ಟ್ರಂಪ್ ತೀವ್ರ ಹತಾಶೆ ಮತ್ತು ಆಕ್ರೋಶಕ್ಕೆ ಒಳಗಾದರು.
ನಿರೂಪಕಿ ತನ್ನ ನೆಟ್‌ವರ್ಕ್‌ನ ನಿಷ್ಪಕ್ಷಪಾತತೆಯನ್ನು ಸಮರ್ಥಿಸಿಕೊಂಡಾಗ ಮತ್ತಷ್ಟು ಸಿಟ್ಟಾದ ಟ್ರಂಪ್, ಅಮೆರಿಕದ ಪ್ರಮುಖ ಮಾಧ್ಯಮಗಳಾದ NBC, CBS, ABC ಮತ್ತು CNN ಗಳನ್ನು “ಏಕಪಕ್ಷೀಯ ಮತ್ತು ವಕ್ರ ನೆಟ್‌ವರ್ಕ್‌ಗಳು” (Crooked Networks) ಎಂದು ಬಹಿರಂಗವಾಗಿ ಆರೋಪಿಸಿದರು. ಅಷ್ಟೇ ಅಲ್ಲದೆ, ನಿರೂಪಕಿಯನ್ನು ಉದ್ದೇಶಿಸಿ "ನೀವು ಒಂದೋ ವಕ್ರಬುದ್ಧಿಯವರಾಗಿರಬೇಕು ಇಲ್ಲವೇ ಮೂರ್ಖರಾಗಿರಬೇಕು" ಎಂದು ಹರಿಹಾಯ್ದರು.
ವಾಗ್ದಾಳಿ ತಾರಕಕ್ಕೇರಿದಾಗ ಸಂದರ್ಶನವನ್ನು ಅರ್ಧಕ್ಕೆ ಮೊಟಕುಗೊಳಿಸಲು ನಿರ್ಧರಿಸಿದ ಟ್ರಂಪ್, ತಮ್ಮ ಮೈಕ್ರೊಫೋನ್ ಅನ್ನು ತೆಗೆದು ನೆಲಕ್ಕೆ ಎಸೆದರು. ಹೊರಡುವ ಮುನ್ನ ನಿರೂಪಕಿಗೆ, “ನನಗೆ ಸಾಕಾಗಿದೆ ಎಂದು ಹೇಳೋಣ. ಧನ್ಯವಾದಗಳು, ಡಾರ್ಲಿಂಗ್. ಒಳ್ಳೆಯ ಸಮಯವನ್ನು ಕಳೆಯಿರಿ” ಎಂದು ವ್ಯಂಗ್ಯವಾಗಿ ಹೇಳಿ ಜಾಗ ಖಾಲಿ ಮಾಡಿದರು. ಚರ್ಚೆಯನ್ನು ಮುಂದುವರಿಸುವಂತೆ ವೆಲ್ಕರ್ ವಿನಂತಿಸಿದರೂ ಟ್ರಂಪ್ ಅದಕ್ಕೆ ಕಿವಿಗೊಡದೆ ಅಲ್ಲಿಂದ ತೆರಳಿದರು. ಈ ಉದ್ವಿಗ್ನ ಘಟನೆಯ ನಂತರವೂ ಮಾಧ್ಯಮದವರೊಂದಿಗೆ ಮಾತನಾಡಿರುವ ನಿರೂಪಕಿ ಕ್ರಿಸ್ಟನ್ ವೆಲ್ಕರ್, ತಾವೂ ಮತ್ತೆ ಟ್ರಂಪ್ ಅವರೊಂದಿಗೆ ಮಾತನಾಡಿದ್ದು, ಮುಂದಿನ ದಿನಗಳಲ್ಲಿ ಮತ್ತೊಂದು ಸಂದರ್ಶನಕ್ಕಾಗಿ ಹಿಂತಿರುಗಲು ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಘಟನೆಯ ವಿಡಿಯೋ ಸದ್ಯ ಜಾಗತಿಕವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.