image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಅಮೆರಿಕದ ಬೇಸಿಗೆ ಉತ್ಸವದ ವೇಳೆ ಗುಂಡಿನ ದಾಳಿ; 12 ಜನರಿಗೆ ಗಾಯ, ಆರೋಪಿಗಳಿಗಾಗಿ ಹುಡುಕಾಟ

ಅಮೆರಿಕದ ಬೇಸಿಗೆ ಉತ್ಸವದ ವೇಳೆ ಗುಂಡಿನ ದಾಳಿ; 12 ಜನರಿಗೆ ಗಾಯ, ಆರೋಪಿಗಳಿಗಾಗಿ ಹುಡುಕಾಟ

ಅಮೆರಿಕ : ಓಹಿಯೋ ರಾಜ್ಯದ ಟೊಲೆಡೊದಲ್ಲಿ ನಡೆದ ಸಾಂಪ್ರದಾಯಿಕ ಸಮುದಾಯ ಉತ್ಸವವೊಂದರ ಸಂದರ್ಭದಲ್ಲಿ ಭೀಕರ ಗುಂಡಿನ ದಾಳಿ ನಡೆದಿದ್ದು, ಕನಿಷ್ಠ 12 ಜನರು ಗಾಯಗೊಂಡಿದ್ದಾರೆ. ವಾರ್ಷಿಕವಾಗಿ ನಡೆಯುವ 'ಓಲ್ಡ್ ವೆಸ್ಟ್ ಎಂಡ್' ಉತ್ಸವದ ಆವರಣದ ಬಳಿ ಈ ಘಟನೆ ಸಂಭವಿಸಿದ್ದು, ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸದ್ಯ ದಾಳಿ ನಡೆಸಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಘಟನೆಯಲ್ಲಿ ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಇಬ್ಬರು ವ್ಯಕ್ತಿಗಳು ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಪರಸ್ಪರ ಗುಂಡು ಹಾರಿಸಿಕೊಂಡಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಸಾರ್ವಜನಿಕರ ಮೇಲೂ ಗುಂಡೇಟು ಬಿದ್ದಿದೆ ಎಂದು ಟೊಲೆಡೊ ಉಪ ಪೊಲೀಸ್ ಮುಖ್ಯಸ್ಥ ಜೋ ಹೆಫರ್ನಾನ್ ತಿಳಿಸಿದ್ದಾರೆ. ಲೈವ್ ಮ್ಯೂಸಿಕ್ (ನೇರ ಸಂಗೀತ) ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದ ಕಾರಣ ಸ್ಥಳದಲ್ಲಿ ಭಾರಿ ಜನಸಂದಣಿ ಇತ್ತು.

ಈ ಹಠಾತ್ ಹಿಂಸಾಚಾರಕ್ಕೆ ಓಹಿಯೋ ಗವರ್ನರ್ ಮೈಕ್ ಡಿವೈನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. "ಬೇಸಿಗೆಯ ಇಂತಹ ಉತ್ಸವಗಳು ಕುಟುಂಬ ಸಮೇತ ಜನರು ಯಾವುದೇ ಭಯವಿಲ್ಲದೆ ಬಂದು ಸಂತೋಷದಿಂದ ಸಮಯ ಕಳೆಯುವ ಸುರಕ್ಷಿತ ಸ್ಥಳಗಳಾಗಿರಬೇಕು" ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಗುಂಡಿನ ಸದ್ದಿಗೆ ಜನರು ದಿಕ್ಕಾಪಾಲಾಗಿ ಓಡುತ್ತಿರುವುದು ಮತ್ತು ರಕ್ಷಣಾ ಸಿಬ್ಬಂದಿ ಗಾಯಾಳುಗಳಿಗೆ ನೆರವಾಗುತ್ತಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ.

ಸ್ಥಳೀಯ ಪ್ರತ್ಯಕ್ಷದರ್ಶಿ ಕೆವಿನ್ ಬೆರ್ರಿ ಮಾತನಾಡಿ, "ನಾವು ಪಕ್ಕದ ಅರ್ಬೊರೇಟಂನಲ್ಲಿ ಸ್ನೇಹಿತರೊಂದಿಗೆ ಸಂಗೀತ ಕೇಳುತ್ತಿದ್ದಾಗ ಇದ್ದಕ್ಕಿದ್ದಂತೆ ಹಲವು ಸುತ್ತಿನ ಗುಂಡಿನ ಶಬ್ದಗಳು ಕೇಳಿಸಿದವು. ತಕ್ಷಣ ಎಲ್ಲರೂ ನೆಲಕ್ಕೆ ಮಲಗಿದೆವು. ಸ್ವಲ್ಪ ಸಮಯದ ನಂತರ ವ್ಯಕ್ತಿಯೊಬ್ಬ ಬಂದೂಕನ್ನು ನೆಲಕ್ಕೆ ಎಸೆದು ಓಡಿಹೋಗುತ್ತಿರುವುದು ಕಂಡಿತು" ಎಂದು ವಿವರಿಸಿದ್ದಾರೆ. ವೈದ್ಯಕೀಯ ತರಬೇತಿ ಪಡೆದಿರುವ ಬೆರ್ರಿ, ತಕ್ಷಣವೇ ಕಾರ್ಯಪ್ರವೃತ್ತರಾಗಿ ಸ್ಥಳದಲ್ಲಿದ್ದ ಪೊಲೀಸರೊಂದಿಗೆ ಸೇರಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ನೆರವಾಗಿದ್ದಾರೆ. ಅವರ ಪ್ರಕಾರ, ಐದಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡು ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿದ್ದರು.

ಟೊಲೆಡೊದ ಐತಿಹಾಸಿಕ ಜಿಲ್ಲೆಯಲ್ಲಿ ಪ್ರತಿವರ್ಷ ಎರಡು ದಿನಗಳ ಕಾಲ ನಡೆಯುವ ಈ ಓಲ್ಡ್ ವೆಸ್ಟ್ ಎಂಡ್ ಉತ್ಸವವು ಶಾಪಿಂಗ್, ಪ್ರದರ್ಶನಗಳು ಹಾಗೂ ರುಚಿಕರವಾದ ಆಹಾರ ಮಳಿಗೆಗಳಿಗೆ ಹೆಸರುವಾಸಿಯಾಗಿದೆ. ಇದನ್ನು ನಗರದ ಬೇಸಿಗೆಯ ಹಬ್ಬಗಳ ಋತುವಿನ ಆರಂಭ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಭಾರಿ ಆರಂಭದಲ್ಲೇ ನಡೆದಿರುವ ಈ ರಕ್ತಪಾತವು ಇಡೀ ಸಮುದಾಯವನ್ನು ಆಘಾತಕ್ಕೀಡು ಮಾಡಿದೆ.

Category
ಕರಾವಳಿ ತರಂಗಿಣಿ