image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಕ್ಯೂಬಾ ಅಧ್ಯಕ್ಷ ಮಿಗುಯೆಲ್ ಡಿಯಾಜ್ ಹಾಗೂ ಕುಟುಂಬದ ಮೇಲೆ ಅಮೆರಿಕ ಭಾರಿ ನಿರ್ಬಂಧ

ಕ್ಯೂಬಾ ಅಧ್ಯಕ್ಷ ಮಿಗುಯೆಲ್ ಡಿಯಾಜ್ ಹಾಗೂ ಕುಟುಂಬದ ಮೇಲೆ ಅಮೆರಿಕ ಭಾರಿ ನಿರ್ಬಂಧ

ವಾಷಿಂಗ್ಟನ್​: ಕ್ಯೂಬಾದ ಅಧ್ಯಕ್ಷ ಮಿಗುಯೆಲ್ ಡಿಯಾಜ್-ಕ್ಯಾನೆಲ್, ಅವರ ಪತ್ನಿ ಹಾಗೂ ಇತರ ಮೂವರು ಪ್ರಮುಖ ವ್ಯಕ್ತಿಗಳ ಮೇಲೆ ಅಮೆರಿಕ ಗುರುವಾರ ಹೊಸದಾಗಿ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ದ್ವೀಪರಾಷ್ಟ್ರದ ನಾಯಕತ್ವದ ಮೇಲೆ ತೀವ್ರ ಒತ್ತಡ ಹೇರಲು ಡೊನಾಲ್ಡ್ ಟ್ರಂಪ್​ ಆಡಳಿತ ತೆಗೆದುಕೊಂಡ ಇತ್ತೀಚಿನ ಕ್ರಮಗಳಲ್ಲಿ ಇದು ಒಂದಾಗಿದ್ದು, ಈ ಕ್ರಮಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತಕ್ಷಣವೇ ತೀವ್ರ ಖಂಡನೆ ವ್ಯಕ್ತವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಯೂಬಾ ವಿರುದ್ಧದ ನಿರ್ಬಂಧಗಳನ್ನು ವಿಸ್ತರಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ ಬೆನ್ನಲ್ಲೇ ಈ ದಂಡನೆಗಳನ್ನು ಜಾರಿಗೊಳಿಸಲಾಗಿದೆ. ಈ ಹೊಸ ಆದೇಶದ ಪ್ರಕಾರ, ಕ್ಯೂಬಾ ಅಧ್ಯಕ್ಷರು ಮತ್ತು ಅವರ ಕುಟುಂಬದ ಸದಸ್ಯರು ಅಮೆರಿಕದಲ್ಲಿ ಹೊಂದಿರುವ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗುತ್ತದೆ. ಆದರೆ, ಈ ನಾಯಕರು ಅಮೆರಿಕದ ಹಣಕಾಸು ವ್ಯವಸ್ಥೆಯೊಂದಿಗೆ ಎಷ್ಟರಮಟ್ಟಿಗೆ ವ್ಯವಹಾರಗಳನ್ನು ಹೊಂದಿದ್ದಾರೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

​ಈ ಪಟ್ಟಿಯಲ್ಲಿ ಕ್ಯೂಬಾದ ಅಧ್ಯಕ್ಷ ಮಿಗುಯೆಲ್ ಡಿಯಾಜ್-ಕ್ಯಾನೆಲ್ ಹಾಗೂ ಅವರ ಪತ್ನಿ ಮಾತ್ರವಲ್ಲದೇ, ಕ್ಯೂಬಾದ ಮಾಜಿ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ ಮತ್ತು ವಿಲ್ಮಾ ಎಸ್ಪಿನ್ ಅವರ ಏಕೈಕ ಪುತ್ರ ಅಲೆಜಾಂಡ್ರೊ ಕ್ಯಾಸ್ಟ್ರೋ ಎಸ್ಪಿನ್ ಅವರ ಮೇಲೆಯೂ ಅಮೆರಿಕ ಹರಿಹಾಯ್ದಿದೆ. ಇವರು ಕ್ಯೂಬಾದ ರಕ್ಷಣಾ ಮತ್ತು ರಾಷ್ಟ್ರೀಯ ಭದ್ರತಾ ಆಯೋಗದ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೆ, ಮಾರ್ಚ್ 2016 ರಲ್ಲಿ ಹವಾನಾದಲ್ಲಿ ನಡೆದ ಐತಿಹಾಸಿಕ ಸಭೆಯಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ರೌಲ್ ಕ್ಯಾಸ್ಟ್ರೋ ಸ್ವಾಗತಿಸಿದಾಗ ಇವರು ಹಾಜರಿದ್ದರು. ಇವರೊಂದಿಗೆ ಕ್ಯಾಸ್ಟ್ರೋ ಎಸ್ಪಿನ್ ಅವರ ಮಗ ರೌಲ್ ಅಲೆಜಾಂಡ್ರೊ ಕ್ಯಾಸ್ಟ್ರೋ ಕ್ಯಾಲಿಸ್ ಕೂಡ ಅಮೆರಿಕದ ಇತ್ತೀಚಿನ ಕಪ್ಪು ಪಟ್ಟಿಗೆ ಸೇರಿದ್ದಾರೆ. ಇದಕ್ಕೂ ಮುನ್ನ ಜನವರಿಯಲ್ಲಿ ವೆನೆಜುವೆಲಾದ ನಾಯಕ ನಿಕೋಲಸ್ ಮಡುರೊ ಅವರನ್ನು ಪದಚ್ಯುತಗೊಳಿಸಿದ ನಂತರ, ಕ್ಯೂಬಾದಲ್ಲಿ ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಕ್ಯೂಬಾಗೆ ಇಂಧನ ಸಾಗಣೆ ಸ್ಥಗಿತಗೊಳಿಸುವ ಇಂಧನ ದಿಗ್ಬಂಧನಕ್ಕೂ ಅಮೆರಿಕ ಆದೇಶಿಸಿತ್ತು. ಈ ದಿಗ್ಬಂಧನದಿಂದಾಗಿ ಕ್ಯೂಬಾ ದ್ವೀಪದಾದ್ಯಂತ ತೀವ್ರ ವಿದ್ಯುತ್ ಕಡಿತ, ಆಹಾರ ಕೊರತೆ ಮತ್ತು ಭೀಕರ ಆರ್ಥಿಕ ಕುಸಿತ ಉಂಟಾಗಿದೆ. ಕಳೆದ ತಿಂಗಳು ರೌಲ್ ಕ್ಯಾಸ್ಟ್ರೋ ವಿರುದ್ಧ ಅಮೆರಿಕ ಕ್ರಿಮಿನಲ್ ಆರೋಪಗಳನ್ನು ಘೋಷಿಸಿದ ನಂತರ ಈ ರಾಜತಾಂತ್ರಿಕ ಬಿಕ್ಕಟ್ಟು ಮತ್ತು ಬೆದರಿಕೆಗಳು ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿವೆ.

Category
ಕರಾವಳಿ ತರಂಗಿಣಿ