image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಜಪಾನ್‌ನಲ್ಲಿ ಪಾಕಿಸ್ತಾನಿ ಮಸೀದಿ ವಿವಾದ: ಸ್ಥಳೀಯ ನಿಯಮ ಉಲ್ಲಂಘನೆ ಹಿನ್ನೆಲೆ ದೂರ ಸರಿದ ರಾಯಭಾರ ಕಚೇರಿ

ಜಪಾನ್‌ನಲ್ಲಿ ಪಾಕಿಸ್ತಾನಿ ಮಸೀದಿ ವಿವಾದ: ಸ್ಥಳೀಯ ನಿಯಮ ಉಲ್ಲಂಘನೆ ಹಿನ್ನೆಲೆ ದೂರ ಸರಿದ ರಾಯಭಾರ ಕಚೇರಿ

ಟೋಕಿಯೋ : ಜಪಾನ್‌ನ ಸೈತಾಮಾ ಪ್ರಾಂತ್ಯದ ಕವಾಗೋ ನಗರದಲ್ಲಿ ಪಾಕಿಸ್ತಾನಿ ಸಮುದಾಯವು ನಿರ್ಮಿಸಿರುವ ಮಸೀದಿಯೊಂದು ಸ್ಥಳೀಯ ನಗರಾಭಿವೃದ್ಧಿ ನಿಯಮಗಳನ್ನು ಉಲ್ಲಂಘಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಟೋಕಿಯೊದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯು ಕವಾಗೋ ಮಸೀದಿ ಯೋಜನೆಯಿಂದ ಅಧಿಕೃತವಾಗಿ ದೂರ ಉಳಿದಿದ್ದು, ಜಪಾನ್‌ನಲ್ಲಿರುವ ತನ್ನ ದೇಶದ ನಾಗರಿಕರು ಸ್ಥಳೀಯ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕಡಕ್ ಸೂಚನೆ ನೀಡಿದೆ.

ಕವಾಗೋದಲ್ಲಿರುವ ಈ ಮಸೀದಿಯನ್ನು ಸುಮಾರು 4,500 ಚದರ ಮೀಟರ್‌ನ ಭೂಮಿಯಲ್ಲಿ ನಿರ್ಮಿಸಲಾಗಿದೆ. ಆದರೆ, ಈ ಜಾಗವು 'ನಗರೀಕರಣ ನಿಯಂತ್ರಣ ಪ್ರದೇಶ'ದೊಳಗೆ (Urbanization Control Area) ಬರುವುದರಿಂದ, ಸ್ಥಳೀಯ ಪುರಸಭೆಯ ವಿಶೇಷ ಅನುಮತಿ ಇಲ್ಲದೆ ಇಲ್ಲಿ ಯಾವುದೇ ರೀತಿಯ ಕಟ್ಟಡ ನಿರ್ಮಿಸುವಂತಿಲ್ಲ. ಕವಾಗೋ ನಗರ ಅಧಿಕಾರಿಗಳ ಪ್ರಕಾರ, ಈ ಮಸೀದಿಯನ್ನು ಅಗತ್ಯವಿರುವ ಯಾವುದೇ ಕಾನೂನುಬದ್ಧ ಪರವಾನಗಿಗಳನ್ನು ಪಡೆಯದೆಯೇ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ.

ಈ ವರ್ಷದ ಏಪ್ರಿಲ್ 3 ರಂದು ನಡೆದ ಮಸೀದಿಯ ಉದ್ಘಾಟನಾ ಸಮಾರಂಭದಲ್ಲಿ ಜಪಾನ್‌ಗೆ ಪಾಕಿಸ್ತಾನದ ರಾಯಭಾರಿಯಾದ ಅಬ್ದುಲ್ ಹಮೀದ್ ಅವರು ಭಾಗವಹಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಯಭಾರ ಕಚೇರಿ, ಅಗತ್ಯವಿರುವ ಎಲ್ಲಾ ಸರ್ಕಾರಿ ಪರವಾನಗಿಗಳನ್ನು ಪಡೆಯಲಾಗಿದೆ ಎಂದು ಸಂಘಟಕರು ನಂಬಿಸಿದ್ದರಿಂದಲೇ ರಾಯಭಾರಿ ಉದ್ಘಾಟನೆಗೆ ಹೋಗಿದ್ದರು ಎಂದು ತಿಳಿಸಿದೆ. ಜೊತೆಗೆ, ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸುವ ಯಾವುದೇ ಯೋಜನೆಗಳನ್ನು ರಾಯಭಾರ ಕಚೇರಿ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಜಪಾನ್‌ನಲ್ಲಿ ವಾಸಿಸುವ ಪಾಕಿಸ್ತಾನಿ ಸಮುದಾಯವು ಮಸೀದಿ ನಿರ್ಮಾಣ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಜಪಾನಿನ ಕಾನೂನುಗಳನ್ನು ಸಂಪೂರ್ಣವಾಗಿ ಗೌರವಿಸಬೇಕು, ಅಗತ್ಯ ಪರವಾನಗಿ ಇಲ್ಲದೆ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳಬಾರದು ಮತ್ತು ಜಪಾನ್ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ರಾಯಭಾರ ಕಚೇರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಜಪಾನ್‌ನಲ್ಲಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಯಾಶಿಯೋ ಮಸೀದಿಯ ಪ್ರತಿನಿಧಿ ಶಕೀಲ್ ಶೇಖ್ ಮೊಹಮ್ಮದ್ ಕೂಡ ಕವಾಗೋ ಮಸೀದಿ ಯೋಜನೆಯ ಬೇಜವಾಬ್ದಾರಿತನವನ್ನು ತೀವ್ರವಾಗಿ ಟೀಕಿಸಿದ್ದಾರೆ. ಸ್ಥಳೀಯ ನಿಯಮಗಳನ್ನು ಪಾಲಿಸಿ, ಅಲ್ಲಿನ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದುವುದರಿಂದ ಮಾತ್ರ ಪೂಜಾ ಸ್ಥಳಗಳಿಗೆ ನಿಜವಾದ ಗೌರವ ಸಿಗುತ್ತದೆ ಎಂದು ಅವರು ಹೇಳಿದ್ದಾರೆ. 2000 ಇಸವಿಯಿಂದ ಜಪಾನ್‌ನಲ್ಲಿರುವ ಯಾಶಿಯೋ ಮಸೀದಿಯು ಸ್ಥಳೀಯ ನೆರೆಹೊರೆಯವರೊಂದಿಗೆ ಹಬ್ಬಗಳನ್ನು ಆಚರಿಸುತ್ತಾ, ಸ್ವಚ್ಛತಾ ಆಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಜಪಾನಿ ಸಮಾಜದೊಂದಿಗೆ ಅತ್ಯುತ್ತಮ ಸೌಹಾರ್ದಯುತ ಸಂಬಂಧವನ್ನು ಕಾಯ್ದುಕೊಂಡು ಬಂದಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.

Category
ಕರಾವಳಿ ತರಂಗಿಣಿ