image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಲೆಬನಾನ್ ದಾಳಿ ವಿಚಾರ: ನೆತನ್ಯಾಹು ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ

ಲೆಬನಾನ್ ದಾಳಿ ವಿಚಾರ: ನೆತನ್ಯಾಹು ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ

ವಾಷಿಂಗ್ಟನ್ : ಲೆಬನಾನ್‌ ವಿರುದ್ಧ ಇಸ್ರೇಲ್ ನಡೆಸುತ್ತಿರುವ ನಿರಂತರ ಮಿಲಿಟರಿ ದಾಳಿಗಳ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ (ಜೂನ್‌ 02) ಉಭಯ ನಾಯಕರ ನಡುವೆ ನಡೆದ ದೂರವಾಣಿ ಸಂಭಾಷಣೆ ವೇಳೆ ಟ್ರಂಪ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಆಕ್ಸಿಯೋಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆಕ್ಸಿಯೋಸ್‌ ವರದಿಯ ಪ್ರಕಾರ, ಇಬ್ಬರು ಅಮೆರಿಕದ ಉನ್ನತ ಅಧಿಕಾರಿಗಳು ಮತ್ತು ಈ ಕರೆಯ ಕುರಿತು ಮಾಹಿತಿ ಹೊಂದಿರುವ ಮೂರನೇ ಮೂಲವೊಂದು ಟ್ರಂಪ್ ಅವರ ಆಕ್ರೋಶದ ಮಾತುಗಳನ್ನು ಖಚಿತಪಡಿಸಿದೆ. ಇಸ್ರೇಲ್‌ನ ಈ ಆಕ್ರಮಣಕಾರಿ ದಾಳಿಗಳ ಪರಿಣಾಮವಾಗಿ, ಜಾಗತಿಕವಾಗಿ ಅಮೆರಿಕದ ವಿರುದ್ಧ ಅಸಮಾಧಾನ ಮತ್ತು ದ್ವೇಷ ಹೆಚ್ಚಾಗಲು ಕಾರಣವಾಗಿದೆ ಎಂದು ಟ್ರಂಪ್‌ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಟ್ರಂಪ್ ಅವರ ಕಟು ಹೇಳಿಕೆಗಳನ್ನು ಆಕ್ಸಿಯೋಸ್‌ಗೆ ಸಂಕ್ಷಿಪ್ತವಾಗಿ ವಿವರಿಸಿರುವ ಅಮೆರಿಕದ ಅಧಿಕಾರಿಯೊಬ್ಬರು, "ನೀನು ಹುಚ್ಚ, ನಾನು ಇಲ್ಲದಿದ್ದರೆ ನೀನು ಜೈಲಿನಲ್ಲಿ ಇರುತ್ತಿದ್ದೆ. ನಾನು ನಿನ್ನನ್ನು ರಕ್ಷಿಸುತ್ತಿದ್ದೇನೆ. ಆದರೆ ಈಗ ಎಲ್ಲರೂ ನಿಮ್ಮನ್ನು ದ್ವೇಷಿಸುತ್ತಿದ್ದಾರೆ. ನಿನ್ನ ಇಂತಹ ನಿರ್ಧಾರಗಳಿಂದಾಗಿ ಇಡೀ ಜಗತ್ತು ಇಸ್ರೇಲ್ ಅನ್ನು ದ್ವೇಷಿಸುವಂತಾಗಿದೆ" ಎಂದು ಟ್ರಂಪ್‌ ಅವರು ನೆತನ್ಯಾಹು ವಿರುದ್ಧ ಗುಡುಗಿರುವುದಾಗಿ ತಿಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರಕ್ಕೆ ಮರಳಿದ ನಂತರ, ಉಭಯ ನಾಯಕರ ನಡುವೆ ನಡೆದ ಅತ್ಯಂತ ಬಿರುಸಿನ ಮತ್ತು ಉದ್ವಿಗ್ನ ಮಾತುಕತೆಗಳಲ್ಲಿ ಇದು ಒಂದಾಗಿದೆ ಎಂದು ಹೇಳಲಾಗಿದೆ. ಹೆಜ್ಬೊಲ್ಲಾ ಸಂಘಟನೆಯನ್ನು ಗುರಿಯಾಗಿಸಿಕೊಂಡು ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಗಳ ಕುರಿತು ಅಮೆರಿಕದ ಜತೆಗಿನ ರಾಜತಾಂತ್ರಿಕ ಮಾತುಕತೆಗಳನ್ನು ನಿಲ್ಲಿಸುವುದಾಗಿ ಇಸ್ರೇಲ್‌ ಬೆದರಿಕೆ ಹಾಕಿದ ಬೆನ್ನಲ್ಲೇ ಈ ದೂರವಾಣಿ ಸಂಘರ್ಷ ನಡೆದಿದೆ ಎಂದು ವರದಿಗಳು ತಿಳಿಸಿವೆ. ಇಸ್ರೇಲ್‌ನ ಈ ಹಠಮಾರಿ ಧೋರಣೆಯಿಂದಾಗಿ ಇರಾನ್ ಜೊತೆಗಿನ ಅಮೆರಿಕದ ಶಾಂತಿ ಮಾತುಕತೆಗಳಿಗೆ ಧಕ್ಕೆಯಾಗಬಹುದು ಎಂಬ ಆತಂಕವೂ ಟ್ರಂಪ್ ಅವರ ಕೋಪಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಈ ಕರೆಯ ಬೆನ್ನಲ್ಲೇ ಲೆಬನಾನ್ ರಾಜಧಾನಿ ಬೈರೂತ್ ಮೇಲಿನ ಪ್ರಮುಖ ದಾಳಿಯ ಯೋಜನೆಯಿಂದ ಇಸ್ರೇಲ್ ಸದ್ಯಕ್ಕೆ ಹಿಂದೆ ಸರಿದಿದೆ ಎಂದು ಮೂಲಗಳು ತಿಳಿಸಿವೆ.

Category
ಕರಾವಳಿ ತರಂಗಿಣಿ