image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿ: ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೆನಡಾ ತೀವ್ರ ಆಸಕ್ತಿ

ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿ: ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೆನಡಾ ತೀವ್ರ ಆಸಕ್ತಿ

ಕೆನಡ : ಭಾರತವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಮುನ್ನಗ್ಗುತ್ತಿದ್ದು, ಈ ನಿರ್ಣಾಯಕ ಸಮಯದಲ್ಲಿ ಕೆನಡಾದ ವ್ಯವಹಾರಗಳು ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದದ (FTA) ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಕೆನಡಾದ ಅಂತರರಾಷ್ಟ್ರೀಯ ವ್ಯಾಪಾರ ಸಚಿವ ಮಣೀಂದರ್ ಸಿಧು ಹೇಳಿದ್ದಾರೆ. ಈ ಕುರಿತು ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಭಾರತದೊಂದಿಗೆ ವ್ಯಾಪಾರ ಸಂಬಂಧವನ್ನು ಬಲಪಡಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ರಫ್ತು ಎಂದರೆ ಜಗತ್ತು ಖರೀದಿಸಲು ಬಯಸುವ ಸರಕು ಮತ್ತು ಸೇವೆಗಳನ್ನು ಹೆಚ್ಚಾಗಿ ಉತ್ಪಾದಿಸುವುದಾಗಿದೆ. ಈ ನಿಟ್ಟಿನಲ್ಲಿ ಕೆನಡಿಯನ್ನರು ಹೆಚ್ಚು ಉತ್ಪಾದನೆ ಮಾಡುತ್ತಿದ್ದಾರೆ. ಅದಕ್ಕಾಗಿಯೇ ನಾವು ಭಾರತ ಸೇರಿದಂತೆ ಕೆನಡಾದ ವ್ಯವಹಾರಗಳಿಗೆ ಹೊಸ ಜಾಗತಿಕ ಮಾರುಕಟ್ಟೆಗಳನ್ನು ತೆರೆಯುವತ್ತ ಹೆಚ್ಚಿನ ಗಮನಹರಿಸಿದ್ದೇವೆ ಎಂದು ಕೆನಡಾ ವಾಣಿಜ್ಯ ಸಚಿವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ. ಇದು ಏರೋಸ್ಪೇಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI), ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಇಂಧನ, ಕೃಷಿ, ಆಹಾರ ಸಂಸ್ಕರಣೆ ಹಾಗೂ ಮುಂದುವರಿದ ಉತ್ಪಾದನೆ ಸೇರಿದಂತೆ ಕೆನಡಾ ಮುಂಚೂಣಿಯಲ್ಲಿರುವ ಪ್ರಮುಖ ವಲಯಗಳಲ್ಲಿ ಕೆನಡಾದ ರಫ್ತುದಾರರಿಗೆ ಹೊಸ ಮತ್ತು ಬೃಹತ್ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಜಾಗತಿಕ ವಿದ್ಯಮಾನಗಳನ್ನು ಉಲ್ಲೇಖಿಸಿದ ಸಿಧು ಅವರು, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿರುವ ಹಿನ್ನೆಲೆಯಲ್ಲಿ ಈಗಾಗಲೇ ಯುನೈಟೆಡ್ ಕಿಂಗ್‌ಡಮ್ (UK) ಭಾರತದೊಂದಿಗೆ ಮುಕ್ತ ವ್ಯಾಪಾರ ಮಾತುಕತೆಗಳನ್ನು ನಡೆಸಿ ಒಪ್ಪಂದಕ್ಕೆ ಸಹಿ ಹಾಕಿದೆ. ಯುರೋಪಿಯನ್ ಒಕ್ಕೂಟ ಹಾಗೂ ನ್ಯೂಜಿಲೆಂಡ್ ದೇಶಗಳು ಸಹ ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿವೆ. ಹೀಗಾಗಿ ನಮ್ಮ ವ್ಯವಹಾರಗಳು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಭಾರತದೊಂದಿಗಿನ ಒಪ್ಪಂದಕ್ಕೆ ಸಂಬಂಧಿಸಿದಂತೆ ಎಲ್ಲಾ ವಿಷಯಗಳ ಬಗ್ಗೆ ಅತ್ಯುತ್ತಮ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಿದರು.

2023ರಲ್ಲಿ ಕೆಲವು ಕಾರಣಗಳಿಂದಾಗಿ ವ್ಯಾಪಾರ ಮಾತುಕತೆಗಳು ಸ್ಥಗಿತಗೊಂಡಿದ್ದವು. ಆದರೆ ಪ್ರಸ್ತುತ ಎರಡೂ ದೇಶಗಳ ನಡುವೆ ಸಾಸ್ಕಾಚೆವಾನ್ ಪ್ರಾಂತ್ಯದ ರಾಜಧಾನಿ ರೆಜಿನಾದಲ್ಲಿ ವ್ಯಾಪಾರ ಶೃಂಗಸಭೆ ನಡೆಯುತ್ತಿದೆ. ಇಲ್ಲಿ ವ್ಯಾಪಾರ ಒಪ್ಪಂದದ ಕುರಿತು ನಡೆಯುತ್ತಿರುವ ಮಾತುಕತೆಗಳ ಬಗ್ಗೆ ಕೆನಡಾ ಮತ್ತು ಭಾರತೀಯ ಅಧಿಕಾರಿಗಳು ತೀವ್ರ ಆಶಾವಾದ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪಶ್ಚಿಮ ಕೆನಡಾ - ಭಾರತ ನಾಯಕರ ಶೃಂಗಸಭೆಯಲ್ಲಿ ಸಾಸ್ಕಾಚೆವಾನ್ ಪ್ರಧಾನ ಮಂತ್ರಿ ಸ್ಕಾಟ್ ಮೋ, ಭಾರತದಲ್ಲಿನ ಕೆನಡಾದ ಹೈಕಮಿಷನರ್ ಕ್ರಿಸ್ ಕೂಟರ್ ಮತ್ತು ಕೆನಡಾದಲ್ಲಿನ ಭಾರತದ ಹೈಕಮಿಷನರ್ ದಿನೇಶ್ ಪಟ್ನಾಯಕ್ ಭಾಗವಹಿಸಿದ್ದರು. ಈ ಪ್ರಮುಖ ಸಭೆಯಲ್ಲಿ ನಾಯಕರು ಪ್ರಸ್ತಾವಿತ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA) ಕುರಿತು ದ್ವಿಪಕ್ಷೀಯ ಸಂಬಂಧಗಳು ಮತ್ತು ಮುಂದಿನ ಹಂತದ ಮಾತುಕತೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ್ದಾರೆ.

Category
ಕರಾವಳಿ ತರಂಗಿಣಿ