ಇಸ್ಲಮಾಬಾದ್ : ಪಾಕಿಸ್ತಾನದ ವಿರುದ್ಧ ತಾಲಿಬಾನ್ ಸಂಘಟನೆಯು ಭಾರತದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದೆ ಎಂದು ಪಾಕ್ ಪ್ರಧಾನಿ ಇತ್ತೀಚೆಗಷ್ಟೇ ವಾಗ್ದಾಳಿ ನಡೆಸಿದ್ದರು. ಈ ಬೆನ್ನಲ್ಲೇ ಈಗ ಪಾಕಿಸ್ತಾನ ಹಾಗೂ ಅಮೆರಿಕಕ್ಕೆ ಮತ್ತೊಂದು ಭಾರಿ ಹಿನ್ನಡೆಯಾಗಿದೆ. ದಕ್ಷಿಣ ಏಷ್ಯಾದಲ್ಲಿ ತನ್ನ ಕಾರ್ಯತಂತ್ರದ ಉಪಸ್ಥಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ರಷ್ಯಾ ಈಗ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದೊಂದಿಗೆ ಮಹತ್ವದ ಮಿಲಿಟರಿ ಮತ್ತು ತಾಂತ್ರಿಕ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ಮಾಸ್ಕೋದಲ್ಲಿ ನಡೆದ ಅಂತರರಾಷ್ಟ್ರೀಯ ಭದ್ರತಾ ವೇದಿಕೆಯಲ್ಲಿ ಈ ಒಪ್ಪಂದವನ್ನು ಅನುಮೋದಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ತಾಲಿಬಾನ್‌ನ ರಕ್ಷಣಾ ಸಚಿವ ಮೊಹಮ್ಮದ್ ಯಾಕೂಬ್ ಸ್ವತಃ ಹಾಜರಿದ್ದರು.
ಜುಲೈ 2025 ರಲ್ಲಿ ರಷ್ಯಾ ಅಧಿಕೃತವಾಗಿ ತಾಲಿಬಾನ್ ಸರ್ಕಾರವನ್ನು ಗುರುತಿಸಿದ ನಂತರ, ಉಭಯ ದೇಶಗಳ ನಡುವೆ ನಡೆದಿರುವ ಅತ್ಯಂತ ಉನ್ನತ ಮಟ್ಟದ ರಕ್ಷಣಾ ಸಹಕಾರ ಒಪ್ಪಂದ ಇದಾಗಿದೆ. ಎರಡೂ ಕಡೆಯವರು ಈ ಒಪ್ಪಂದದ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸದಿದ್ದರೂ, ರಷ್ಯಾ ಇನ್ನು ಮುಂದೆ ಅಫ್ಘಾನಿಸ್ತಾನಕ್ಕೆ ಮಿಗ್ ಅಥವಾ ಸುಖೋಯ್ ನಂತಹ ಅತ್ಯಾಧುನಿಕ ಫೈಟರ್ ಜೆಟ್‌ಗಳು ಹಾಗೂ S-400 ಅಥವಾ ಪ್ಯಾಂಟ್ಸಿರ್ ನಂತಹ ವಾಯು ರಕ್ಷಣಾ ವ್ಯವಸ್ಥೆಗಳನ್ನು ಒದಗಿಸಬಹುದೇ ಎಂಬ ತೀವ್ರ ಊಹಾಪೋಹಗಳು ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿವೆ. ತಾಲಿಬಾನ್ ಬಳಿ ಪ್ರಸ್ತುತ ಬಲಿಷ್ಠ ವಾಯುಪಡೆ ಇಲ್ಲದಿರುವುದನ್ನು ಬಳಸಿಕೊಂಡು ಪಾಕಿಸ್ತಾನವು ಗಡಿ ದಾಟಿ ಪದೇ ಪದೇ ಅಫ್ಘಾನ್ ಮಣ್ಣಿನ ಮೇಲೆ ವಾಯುದಾಳಿ ನಡೆಸುತ್ತಿತ್ತು. ಆದರೆ ಈಗ ರಷ್ಯಾದ ರಕ್ಷಣಾ ನೆರವು ದೊರೆತರೆ ಪಾಕಿಸ್ತಾನದ ವಾಯುಪಡೆಗೆ ತಾಲಿಬಾನ್ ಪ್ರಬಲ ಪ್ರತಿರೋಧ ಒಡ್ಡಬಲ್ಲದು ಎನ್ನಲಾಗುತ್ತಿದೆ.
ಹಿಂದೆ ಯುಎಸ್‌ಎಸ್‌ಆರ್ (ರಷ್ಯಾ) ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿದಾಗ ಇದೇ ತಾಲಿಬಾನ್ ಅದರ ವಿರುದ್ಧ ಹೋರಾಡಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಹಳೆಯ ವೈರತ್ವ ಮರೆತು ಎರಡೂ ದೇಶಗಳು ಒಂದಾಗಿರುವುದು ಜಾಗತಿಕ ರಾಜಕಾರಣದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಈ ರಷ್ಯಾ-ತಾಲಿಬಾನ್ ಸ್ನೇಹವು ಪಾಕಿಸ್ತಾನದ ಉದ್ವಿಗ್ನತೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿ ಹಾಗೂ ಟಿಟಿಪಿ (ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ) ಉಗ್ರಗಾಮಿಗಳಿಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವಿನ ಸಂಬಂಧ ತೀರಾ ಹದಗೆಟ್ಟಿದೆ. ಪಾಕಿಸ್ತಾನದೊಳಗೆ ದಾಳಿ ನಡೆಸಲು ಟಿಟಿಪಿ ಉಗ್ರರು ಅಫ್ಘಾನ್ ಮಣ್ಣನ್ನು ಬಳಸುತ್ತಿದ್ದಾರೆ ಎಂದು ಪಾಕಿಸ್ತಾನ ಆರೋಪಿಸುತ್ತಿದ್ದರೆ, ತಾಲಿಬಾನ್ ಇದನ್ನು ನಿರಂತರವಾಗಿ ನಿರಾಕರಿಸುತ್ತಾ ಬಂದಿದೆ. ಈ ಮಧ್ಯೆ, ತಾಲಿಬಾನ್ ಮಿಲಿಟರಿ ಶಕ್ತಿ ಸಾಲದು ಎಂದು ತಿಳಿದಿದ್ದ ಪಾಕಿಸ್ತಾನ ಗಡಿಯಲ್ಲಿ ಅಪ್ರತಿಮ ದಾಳಿಗಳನ್ನು ನಡೆಸಿ ಒತ್ತಡ ಹೇರುತ್ತಿತ್ತು.
ರಷ್ಯಾ ಈಗ ತಾಲಿಬಾನ್‌ಗೆ ಶಸ್ತ್ರಾಸ್ತ್ರ ಒದಗಿಸುವುದು, ಮಿಲಿಟರಿ ಉಪಕರಣಗಳ ದುರಸ್ತಿ ಮತ್ತು ತರಬೇತಿಯನ್ನು ನೀಡಲು ಮುಂದಾದರೆ, ಅದು ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್ ಸರ್ಕಾರವನ್ನು ಮತ್ತಷ್ಟು ಬಲಪಡಿಸಲಿದೆ. ಇದು ಪಾಕಿಸ್ತಾನವು ಅಫ್ಘಾನಿಸ್ತಾನದ ಮೇಲೆ ಹೊಂದಿದ್ದ ಸಾಂಪ್ರದಾಯಿಕ ಹತೋಟಿ ಮತ್ತು ಒತ್ತಡ ಹೇರುವ ಸಾಮರ್ಥ್ಯವನ್ನು ಸಂಪೂರ್ಣವಾಗಿ ದುರ್ಬಲಗೊಳಿಸಲಿದೆ. ಅಫ್ಘಾನ್-ಸೋವಿಯತ್ ಯುದ್ಧದ ಸಮಯದಲ್ಲಿ ಅಮೆರಿಕದ ಸೂಚನೆಯ ಮೇರೆಗೆ ಪಾಕಿಸ್ತಾನವೇ ತಾಲಿಬಾನ್‌ಗೆ ತರಬೇತಿ ನೀಡಿತ್ತು ಎಂಬುದು ಇಲ್ಲಿ ಗಮನಾರ್ಹ. ಭಾರತದ 'ಅಬ್ಸರ್ವರ್ ರಿಸರ್ಚ್ ಫೌಂಡೇಶನ್' ಥಿಂಕ್ ಟ್ಯಾಂಕ್‌ನ ತಜ್ಞ ಅಲೆಕ್ಸಿ ಜಖರೋವ್ ಅವರ ಪ್ರಕಾರ, ಪ್ರಸ್ತುತ ಉತ್ತರ ಅಫ್ಘಾನಿಸ್ತಾನದಲ್ಲಿ ಎದುರಾಗಿರುವ ಅಸ್ಥಿರತೆ ಮತ್ತು ಪಾಕಿಸ್ತಾನ ಗಡಿಯ ಭದ್ರತಾ ಸವಾಲುಗಳನ್ನು ಎದುರಿಸಲು ರಷ್ಯಾದ ಈ ಮಿಲಿಟರಿ ನೆರವು ತಾಲಿಬಾನ್ ಪಾಲಿಗೆ ಅತ್ಯಂತ ಪ್ರಮುಖ ಶಕ್ತಿಯಾಗಲಿದೆ.