ಇಸ್ಲಾಮಾಬಾದ್: ತಾನು ಸಾಕಿದ ಹಾವೇ ತನಗೆ ಕಚ್ಚಿತು ಎನ್ನುವ ಗಾದೆ ಮಾತು ಪಾಕಿಸ್ತಾನದ ವಿಷಯದಲ್ಲಿ ಮತ್ತೊಮ್ಮೆ ನಿಜವಾಗಿದೆ. ಇಸ್ರೇಲ್ ದೇಶಕ್ಕೆ ಅಧಿಕೃತವಾಗಿ ರಾಜತಾಂತ್ರಿಕ ಮನ್ನಣೆ ನೀಡುವ ಯಾವುದೇ ಪ್ರಯತ್ನಗಳನ್ನು ಮಾಡಿದರೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಇಬ್ಬರನ್ನೂ ಹತ್ಯೆ ಮಾಡಿ, ಸರ್ವನಾಶ ಮಾಡುವುದಾಗಿ ನಿಷೇಧಿತ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತೋಯ್ಬಾ (LeT) ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಕುರಿತು ಆತ ಬಿಡುಗಡೆ ಮಾಡಿರುವ ವಿಡಿಯೋ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಗತ್ತಿನ ಹಲವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳನ್ನು 'ಅಬ್ರಹಾಂ ಒಪ್ಪಂದದ' ಅಡಿಯಲ್ಲಿ ಇಸ್ರೇಲ್ ಜೊತೆ ಉತ್ತಮ ಬಾಂಧವ್ಯ ಹೊಂದುವಂತೆ ಪ್ರೇರೇಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕೂಡ ಇಸ್ರೇಲ್ ಅನ್ನು ಒಂದು ಸಾರ್ವಭೌಮ ದೇಶ ಎಂದು ಒಪ್ಪಿಕೊಳ್ಳಬಹುದು ಎಂಬ ಚರ್ಚೆಗಳು ಪಾಕ್ ರಾಜಕೀಯ ವಲಯದಲ್ಲಿ ಆರಂಭವಾಗಿವೆ. ಇದನ್ನೇ ಮುಂದಿಟ್ಟುಕೊಂಡು ಲಷ್ಕರ್ ಉಗ್ರ ಸೈಫುಲ್ಲಾ ವಿಡಿಯೋ ಬಿಡುಗಡೆ ಮಾಡಿ ಬೆದರಿಕೆ ಹಾಕಿದ್ದಾನೆ. ಪಾಕಿಸ್ತಾನ ಸರ್ಕಾರ ಹಾಗೂ ಪಾಕ್ ಸೇನೆಯು ಇಸ್ರೇಲ್ ಜೊತೆ ಯಾವುದೇ ರೀತಿಯ ಶಾಂತಿ ಒಪ್ಪಂದ ಅಥವಾ ರಾಜತಾಂತ್ರಿಕ ಮಾತುಕತೆಗೆ ಮುಂದಾದರೆ, ಅವರನ್ನು ಹತ್ಯೆ ಮಾಡಲಾಗುವುದು ಎಂದು ಉಗ್ರ ಕಸೂರಿ ಖಡಕ್ ಎಚ್ಚರಿಕೆ ನೀಡಿದ್ದಾನೆ.
ಈದ್ ಉಲ್ ಅಧಾ ಪ್ರಾರ್ಥನೆಯ ನಂತರ ಲಷ್ಕರ್ ಉಗ್ರ ಸೈಫುಲ್ಲಾ ಕಸೂರಿ ಪಾಕಿಸ್ತಾನದ ನಾಯಕರನ್ನು ಉದ್ದೇಶಿಸಿ ಇಸ್ರೇಲ್‌ನೊಂದಿಗಿನ ಸಂಬಂಧದ ಕುರಿತು ಪ್ರಚೋದನಕಾರಿ ಭಾಷಣ ಮಾಡಿದ್ದಾನೆ. ಇಸ್ರೇಲ್ ಅನ್ನು ಒಪ್ಪಿಕೊಳ್ಳುವುದು ಇಸ್ಲಾಂ ಧರ್ಮಕ್ಕೆ ಹಾಗೂ ಪ್ಯಾಲೆಸ್ತೀನ್‌ಗೆ ಮಾಡುವ ದ್ರೋಹ ಎಂದು ಬಿಂಬಿಸಿ, ಉಗ್ರಗಾಮಿ ಸಂಘಟನೆಯು ಪಾಕ್ ಜನತೆಯನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಲು ಯತ್ನಿಸುತ್ತಿದೆ. ಇಸ್ರೇಲ್ ಅನ್ನು ಬೆಂಬಲಿಸುವ ಅಥವಾ ಗುರುತಿಸುವ ಯಾವುದೇ ಪಾಕಿಸ್ತಾನಿ ನಾಯಕರನ್ನು ಕೊಲ್ಲಲಾಗುವುದು ಎಂದು ಸಾರ್ವಜನಿಕವಾಗಿ ಎಚ್ಚರಿಕೆ ನೀಡಿ, ಜಿಹಾದ್ ಮತ್ತು ರಕ್ತಸಾಕ್ಷಿತ್ವದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಉಗ್ರರು ಯತ್ನಿಸುತ್ತಿದ್ದಾರೆ. ತಾನೇ ಸಾಕಿದ ಲಷ್ಕರ್-ಎ-ತೊಯ್ಬಾದಂತಹ ಭಯೋತ್ಪಾದಕ ಸಂಘಟನೆಗಳು ಇಂದು ಪಾಕಿಸ್ತಾನದ ಪ್ರಧಾನಿ ಮತ್ತು ಅವರದೇ ದೇಶದ ಶಕ್ತಿಶಾಲಿ ಸೇನಾ ಮುಖ್ಯಸ್ಥನ ವಿರುದ್ಧ ತಿರುಗಿಬಿದ್ದಿರುವುದು ಪಾಕ್ ಸರ್ಕಾರದ ಭದ್ರತಾ ಲೋಪ ಮತ್ತು ಆಂತರಿಕ ಬಿಕ್ಕಟ್ಟನ್ನು ಜಗತ್ತಿನೆದುರು ಬಹಿರಂಗಪಡಿಸಿದೆ.