ಅಮೇರಿಕ : ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಪಾಕಿಸ್ತಾನ ವಹಿಸುತ್ತಿರುವ ಮಧ್ಯವರ್ತಿ ಪಾತ್ರವು ತೀವ್ರ ಸಮಸ್ಯಾತ್ಮಕವಾಗಿದೆ ಎಂದು ಅಮೆರಿಕದ ರಿಪಬ್ಲಿಕನ್ ಪಕ್ಷದ ಹಿರಿಯ ಸೆನೆಟರ್ ಲಿಂಡ್ಸೆ ಗ್ರಹಾಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ಮತ್ತು ಅರಬ್ ದೇಶಗಳ ನಡುವೆ ರಾಜತಾಂತ್ರಿಕ, ಆರ್ಥಿಕ ಹಾಗೂ ಭದ್ರತಾ ಸಂಬಂಧಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಐತಿಹಾಸಿಕ 'ಅಬ್ರಹಾಂ ಒಪ್ಪಂದ'ಕ್ಕೆ ಇಸ್ಲಾಮಾಬಾದ್ ಸೇರ್ಪಡೆಯಾಗುವುದನ್ನು ತಾನು ಖಂಡಿತವಾಗಿಯೂ ಬೆಂಬಲಿಸುವುದಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಇತ್ತೀಚಿಗೆ ನೀಡಿದ್ದ ಹೇಳಿಕೆಗೆ ಗ್ರಹಾಂ ಈ ರೀತಿಯಾಗಿ ತಿರುಗೇಟು ನೀಡಿದ್ದಾರೆ.
ಪೂರ್ವ ಜೆರುಸಲೆಮ್ ಅನ್ನು ರಾಜಧಾನಿಯನ್ನಾಗಿ ಹೊಂದಿರುವ ಹಾಗೂ 1967ರ ಹಿಂದಿನ ಗಡಿಗಳನ್ನು ಒಳಗೊಂಡ ಸ್ವತಂತ್ರ ಪ್ಯಾಲೆಸ್ಟೀನಿಯನ್ ರಾಜ್ಯವನ್ನು ಅಧಿಕೃತವಾಗಿ ಸ್ಥಾಪಿಸುವವರೆಗೆ ಇಸ್ರೇಲ್ ದೇಶವನ್ನು ಪಾಕಿಸ್ತಾನವು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ ಎಂಬ ತನ್ನ ದೇಶದ ದೀರ್ಘಕಾಲದ ಹಳೆಯ ನಿಲುವನ್ನು ಖ್ವಾಜಾ ಆಸಿಫ್ ಅವರು ಪುನರುಚ್ಚರಿಸಿದ್ದರು. ಪಾಕಿಸ್ತಾನದ ಈ ನಡವಳಿಕೆಯನ್ನು ಕಟುವಾಗಿ ಟೀಕಿಸಿರುವ ದಕ್ಷಿಣ ಕೆರೊಲಿನಾ ಪ್ರಾಂತ್ಯದ ಸೆನೆಟರ್ ಲಿಂಡ್ಸೆ ಗ್ರಹಾಂ, ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸ್ಥಾಪನೆಯ ವಿಷಯದಲ್ಲಿ ಪಾಕಿಸ್ತಾನವು ಮಧ್ಯವರ್ತಿಯಾಗಿ ಕೆಲಸ ಮಾಡುವುದು ಎಷ್ಟು ಸಮಸ್ಯಾತ್ಮಕ ಎಂಬುದು ತಮಗೆ ಬಹಳ ಕಾಲದಿಂದಲೂ ತಿಳಿದಿದೆ ಎಂದು ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ನಲ್ಲಿ ಬರೆದುಕೊಂಡಿದ್ದಾರೆ. ಇಸ್ರೇಲ್ ದೇಶದ ಮೇಲಿರುವ ಪಾಕಿಸ್ತಾನದ ದ್ವೇಷದ ಭಾವನೆ ಇಂದಿನದ್ದಲ್ಲ, ಅದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ನಿರಂತರ ಪ್ರವೃತ್ತಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮೆರಿಕ-ಇರಾನ್ ಯುದ್ಧದ ಸನ್ನಿವೇಶದಲ್ಲಿ ಮಧ್ಯವರ್ತಿಯಾಗಲು ಬಯಸುವ ಪಾಕಿಸ್ತಾನವು, ಮೊದಲು ಅಬ್ರಹಾಂ ಒಪ್ಪಂದಕ್ಕೆ ಸೇರಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಕರೆಯನ್ನು ಪ್ರಾಮಾಣಿಕವಾಗಿ ಬೆಂಬಲಿಸಬೇಕು ಎಂದು ಗ್ರಹಾಂ ಈ ಹಿಂದೆ ಒತ್ತಾಯಿಸಿದ್ದರು. ಇಸ್ರೇಲ್ ಅನ್ನು ತಾವು ಎಂದಿಗೂ ನಂಬುವುದಿಲ್ಲ ಮತ್ತು ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂಬ ಪಾಕಿಸ್ತಾನ ರಕ್ಷಣಾ ಸಚಿವರ ಇತ್ತೀಚಿನ ವರಸೆ ಹಳೆಯ ತಂತ್ರದ ಭಾಗವಾಗಿರಬಹುದು. ಆದರೆ, ಅವರ ಮನಸ್ಸಿನಲ್ಲಿರುವ ಇಸ್ರೇಲ್ ವಿರೋಧಿ ದ್ವೇಷದ ಭಾವನೆ ಮಾತ್ರ ಈಗಲೂ ಅಷ್ಟೇ ತೀವ್ರ ಮತ್ತು ಫ್ರೆಶ್ ಆಗಿದೆ ಎಂಬುದು ನನ್ನ ಆತಂಕವಾಗಿದೆ ಎಂದು ಸೆನೆಟರ್ ಗ್ರಹಾಂ ಅಭಿಪ್ರಾಯಪಟ್ಟಿದ್ದಾರೆ.