image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಹಾರ್ಮುಜ್ ಜಲಸಂಧಿ ಬಳಿ ಇರಾನ್ ಕ್ಷಿಪಣಿ ನೆಲೆಗಳ ಮೇಲೆ ಅಮೆರಿಕ ಸೇನೆಯಿಂದ ಭೀಕರ ವಾಯುದಾಳಿ

ಹಾರ್ಮುಜ್ ಜಲಸಂಧಿ ಬಳಿ ಇರಾನ್ ಕ್ಷಿಪಣಿ ನೆಲೆಗಳ ಮೇಲೆ ಅಮೆರಿಕ ಸೇನೆಯಿಂದ ಭೀಕರ ವಾಯುದಾಳಿ

ಅಮೇರಿಕಾ : ಹಾರ್ಮುಜ್ ಜಲಸಂಧಿಯ ಸಮೀಪದಲ್ಲಿರುವ ಇರಾನ್‌ನ ಕ್ಷಿಪಣಿ ಉಡಾವಣಾ ವ್ಯವಸ್ಥೆಗಳು ಮತ್ತು ದೋಣಿಗಳನ್ನು ಗುರಿಯಾಗಿಸಿ ಸೋಮವಾರ ಅಮೆರಿಕ ಸೇನೆ ಭೀಕರ ದಾಳಿ ನಡೆಸಿದೆ. ಇರಾನ್‌ನ ಸೇನೆಯಿಂದ ಉಂಟಾಗುವ ಬೆದರಿಕೆಗಳಿಂದ ನಮ್ಮ ಸೈನಿಕರನ್ನು ರಕ್ಷಿಸಲು ಅಮೆರಿಕ ಸೇನಾಪಡೆಗಳು ದಕ್ಷಿಣ ಇರಾನ್‌ನಲ್ಲಿ ಈ 'ಸ್ವರಕ್ಷಣಾ ದಾಳಿ'ಗಳನ್ನು ಮಾಡಿವೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್‌ನ ವಕ್ತಾರ ತಿಮೋತಿ ಹಾಕಿ ತಿಳಿಸಿದ್ದಾರೆ. ಕದನ ವಿರಾಮ ಮಾತುಕತೆಗಳ ಸಮಯದಲ್ಲಿ ಯುಎಸ್ ಸೆಂಟ್ರಲ್ ಕಮಾಂಡ್ ಸಂಯಮದಿಂದ ತನ್ನ ಸೇನಾ ಪಡೆಗಳನ್ನು ರಕ್ಷಿಸುವುದನ್ನು ಮುಂದುವರೆಸಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕದ ಪ್ರಮುಖ ಗುರಿಗಳಲ್ಲಿ ಕ್ಷಿಪಣಿ ಉಡಾವಣಾ ತಾಣಗಳು ಮತ್ತು ಜಲಸಂಧಿಯಲ್ಲಿ ಸ್ಫೋಟಕ(Mines)ಗಳನ್ನಿಡಲು ಪ್ರಯತ್ನಿಸುತ್ತಿರುವ ಇರಾನ್‌ನ ದೋಣಿಗಳು ಸೇರಿದ್ದವು ಎನ್ನಲಾಗಿದೆ.

ಇರಾನ್‌ನ ಪುಷ್ಟೀಕರಿಸಿದ ಯುರೇನಿಯಂ ಅನ್ನು ಅಮೆರಿಕದತ್ತ ತಿರುಗಿಸಿ ನಾಶಪಡಿಸುವ ಅಥವಾ ಗೊತ್ತಾದ ಸ್ಥಳದಲ್ಲಿ ಅದನ್ನು ವಿಲೇವಾರಿ ಮಾಡುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿರುವುದು ತೀವ್ರ ಸಂಚಲನ ಸೃಷ್ಟಿಸಿದೆ. ಅಮೆರಿಕ ಮತ್ತು ಇರಾನ್‌ನ ಸೇನಾಪಡೆಗಳು ಈ ಹಿಂದೆ ಕದನ ವಿರಾಮದ ಅವಧಿಯಲ್ಲೇ ಪರಸ್ಪರ ಗುಂಡಿನ ದಾಳಿ ನಡೆಸಿದ್ದವು. ಮೇ ಆರಂಭದಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಅಮೆರಿಕದ ಯುದ್ಧನೌಕೆಗಳ ಮೇಲೆ ಇರಾನ್ ಕ್ಷಿಪಣಿ, ಡ್ರೋನ್ ಮತ್ತು ಸಣ್ಣ ದೋಣಿಗಳ ಮೂಲಕ ದಾಳಿ ನಡೆಸಿದ್ದಾಗಿ ಅಮೆರಿಕ ಆರೋಪಿಸಿತ್ತು. ಇದರ ಬೆನ್ನಲ್ಲೇ ಇರಾನ್‌ನ ಸೇನಾ ಸೌಲಭ್ಯಗಳ ಮೇಲೆ ಅಮೆರಿಕ ವಾಯು ದಾಳಿ ನಡೆಸಿ ಪ್ರತ್ಯುತ್ತರ ನೀಡಿತ್ತು.

ಪ್ರಾದೇಶಿಕ ಸಂಘರ್ಷ ನಿಲ್ಲಿಸುವ ಉದ್ದೇಶದಿಂದ ಅಮೆರಿಕ ನೇತೃತ್ವದ ಕದನ ವಿರಾಮ ಪ್ರಸ್ತಾಪದ ಭಾಗವಾಗಿ, ಇರಾನ್ ತಾನು ಹೆಚ್ಚು ಸಮೃದ್ಧೀಕರಿಸಿದ ಯುರೇನಿಯಂ ದಾಸ್ತಾನನ್ನು ತ್ಯಜಿಸಲು ತಾತ್ವಿಕವಾಗಿ ಒಪ್ಪಿಕೊಂಡಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಆದರೆ ಇನ್ನೊಂದೆಡೆ ಇರಾನ್ ಇದಕ್ಕೆ ಪ್ರತಿಕ್ರಿಯಿಸಿದ್ದು, ಹಲವು ವಿಚಾರಗಳಲ್ಲಿ ಉಭಯ ಪಕ್ಷಗಳು ಒಂದು ತೀರ್ಮಾನಕ್ಕೆ ಬಂದಿವೆ. ಆದರೆ ಅಮೆರಿಕ ಆಗಾಗ್ಗೆ ತನ್ನ ನಿಲುವು ಬದಲಿಸುತ್ತಿದ್ದು, ಇದು ಮಾತುಕತೆಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ ಎಂದು ದೂರಿದೆ.

ಇತ್ತೀಚಿಗೆ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಾಘೈ ಮಾತನಾಡುತ್ತಾ, ಅಮೆರಿಕದೊಂದಿಗೆ ಪ್ರಸ್ತುತ ನಡೆಯುತ್ತಿರುವ ಮಾತುಕತೆಗಳು ಸಂಘರ್ಷವನ್ನು ಕೊನೆಗೊಳಿಸುವತ್ತ ಮಾತ್ರ ಕೇಂದ್ರೀಕರಿಸಲಾಗಿದೆ ಮತ್ತು ಈ ಹಂತದಲ್ಲಿ ಪರಮಾಣು ವಲಯಕ್ಕೆ ಸಂಬಂಧಿಸಿದಂತೆ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ ಎಂದಿದ್ದರು. ಇದೇ ಸಂದರ್ಭದಲ್ಲಿ, ಇರಾನ್‌ನೊಂದಿಗೆ ಮಾಡಿಕೊಂಡ ಯಾವುದೇ ಒಪ್ಪಂದಕ್ಕೆ ಅಮೆರಿಕ ಭವಿಷ್ಯದಲ್ಲಿ ಬದ್ಧವಾಗಿರುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಮ್ಮ ಬಳಿ ಯಾವುದೇ ಗ್ಯಾರಂಟಿಗಳಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಎಲ್ಲಾ ರಾಜತಾಂತ್ರಿಕ ಬಿಕ್ಕಟ್ಟುಗಳ ನಡುವೆಯೇ ಅಮೆರಿಕ ನಡೆಸಿರುವ ಈ ವಾಯುದಾಳಿ ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.

Category
ಕರಾವಳಿ ತರಂಗಿಣಿ