image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಟ್ರಂಪ್ ಆಫರ್ ತಿರಸ್ಕರಿಸಿದ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ: ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕಲು ಇಸ್ಲಾಮಿಕ್ ರಾಷ್ಟ್ರಗಳ ನಿರಾಕರಣೆ

ಟ್ರಂಪ್ ಆಫರ್ ತಿರಸ್ಕರಿಸಿದ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ: ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕಲು ಇಸ್ಲಾಮಿಕ್ ರಾಷ್ಟ್ರಗಳ ನಿರಾಕರಣೆ

ಮಧ್ಯಪ್ರಾಚ್ಯ : ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧದ ಪರಿಸ್ಥಿತಿಯನ್ನು ಶಮನಗೊಳಿಸಲು ಪ್ರಾದೇಶಿಕ ಗಲ್ಫ್ ರಾಷ್ಟ್ರಗಳು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಸಂಭಾಷಣೆಯ ಮೂಲಕ ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸುತ್ತಿವೆ. ಆದರೆ, ಈ ಶಾಂತಿ ಪ್ರಕ್ರಿಯೆಯ ನಡುವೆಯೇ ಇಸ್ಲಾಮಿಕ್ ರಾಷ್ಟ್ರಗಳು ಇಸ್ರೇಲ್‌ನೊಂದಿಗೆ ತಮ್ಮ ಸಂಬಂಧವನ್ನು ಸಾಮಾನ್ಯಗೊಳಿಸಿಕೊಳ್ಳುವಂತೆ ಈ ಹಿಂದೆ ಮಾಡಲಾಗಿದ್ದ ವಿವಾದಾತ್ಮಕ 'ಅಬ್ರಹಾಂ ಒಪ್ಪಂದ'ಕ್ಕೆ ಸಹಿ ಹಾಕಬೇಕು ಎಂಬ ಹೊಸ ರಾಜತಾಂತ್ರಿಕ ಒತ್ತಡವನ್ನು ಟ್ರಂಪ್ ಹೇರಿದ್ದಾರೆ. ಮಧ್ಯಪ್ರಾಚ್ಯ ಸೇರಿದಂತೆ ಜಾಗತಿಕವಾಗಿ ಇಸ್ಲಾಮಿಕ್ ರಾಷ್ಟ್ರಗಳು ಹಾಗೂ ಇಸ್ರೇಲ್ ನಡುವೆ ಐತಿಹಾಸಿಕವಾಗಿ ವಿವಾದಗಳು ಮುಂದುವರಿದುಕೊಂಡು ಬಂದಿದ್ದು, ಉಭಯರ ನಡುವಿನ ಸಂಬಂಧಗಳು ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ತೀವ್ರ ಕುತೂಹಲ ಮೂಡಿಸಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ತಮ್ಮ 'ಟ್ರುತ್ ಸೋಶಿಯಲ್' ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, "ಇರಾನ್ ದೇಶವು ಶಾಂತಿಯ ಪ್ರಸ್ತಾವನೆಯನ್ನು ವಿಸ್ತರಿಸಿದೆ. ಇದರ ಭಾಗವಾಗಿ ಅಮೆರಿಕಾದ ನೇತೃತ್ವದಲ್ಲಿ ಸೌದಿ ಅರೇಬಿಯಾ, ಪಾಕಿಸ್ತಾನ, ಟರ್ಕಿ ಮತ್ತು ಕತಾರ್ ದೇಶಗಳು ಅಬ್ರಹಾಂ ಒಪ್ಪಂದಕ್ಕೆ ಕಡ್ಡಾಯವಾಗಿ ಸಹಿ ಹಾಕಬೇಕು. ಈ ಮೂಲಕ ಇಸ್ರೇಲ್ ಅನ್ನು ಒಂದು ಸ್ವತಂತ್ರ ರಾಷ್ಟ್ರವನ್ನಾಗಿ ಅಧಿಕೃತವಾಗಿ ಗುರುತಿಸಿ, ಅದರೊಂದಿಗೆ ಆರ್ಥಿಕ ಹಾಗೂ ಕಾರ್ಯತಂತ್ರದ ಸಂಬಂಧಗಳನ್ನು ಪುನಶ್ಚೇತನಗೊಳಿಸಬೇಕು. ಇದರಿಂದ ಮಧ್ಯಪ್ರಾಚ್ಯ ಒಟ್ಟಾಗಿ ಆರ್ಥಿಕವಾಗಿ ಬಲಿಷ್ಠ ಪ್ರದೇಶವಾಗಲಿದೆ. ಇದಕ್ಕೆ ಬೇಕಾದ ಎಲ್ಲಾ ಪ್ರಕ್ರಿಯೆಗಳನ್ನು ನಡೆಸುವಂತೆ ನಾನು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದು, ಒಪ್ಪಂದಕ್ಕೆ ಎಲ್ಲರೂ ಸಹಿ ಹಾಕಲು ಸಿದ್ಧರಾಗಿರಬೇಕು. ಇರಾನ್ ಒಪ್ಪಂದದೊಂದಿಗೆ ಈಗಾಗಲೇ ಐತಿಹಾಸಿಕವಾಗಿರುವ ಈ ಅಬ್ರಹಾಂ ಒಪ್ಪಂದವೂ ಜಾರಿಯಾಗಬೇಕು" ಎಂದು ತಿಳಿಸಿದ್ದಾರೆ.

ಆದರೆ, ಟ್ರಂಪ್ ಅವರ ಈ ಪ್ರಸ್ತಾಪಕ್ಕೆ ಪ್ರಮುಖ ಇಸ್ಲಾಮಿಕ್ ರಾಷ್ಟ್ರಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಈಗಾಗಲೇ ಪಾಕಿಸ್ತಾನ ಹಾಗೂ ಸೌದಿ ಅರೇಬಿಯಾ ರಾಷ್ಟ್ರಗಳು ಅಮೆರಿಕಾದ ಈ ಆಫರ್ ಅನ್ನು ಸ್ಪಷ್ಟವಾಗಿ ತಿರಸ್ಕರಿಸಿವೆ. ಈ ಕುರಿತು ಸ್ಥಳೀಯ ಮಾಧ್ಯಮ 'ಸಮಾ ನ್ಯೂಸ್'ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜ ಆಸೀಫ್, "ನಮ್ಮ ಮೂಲಭೂತ ಸಿದ್ಧಾಂತಗಳಿಗೆ ವಿರುದ್ಧವಾದ ಯಾವುದೇ ಒಪ್ಪಂದಕ್ಕೆ ನಾವು ಸೇರಬಾರದು ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಅಲ್ಲದೆ, ನಮ್ಮ ದೇಶದ ಪಾಸ್‌ಪೋರ್ಟ್‌ಗಳಲ್ಲಿ ಇಸ್ರೇಲ್ ಹೆಸರನ್ನು ಒಳಗೊಂಡಿರದ ಏಕೈಕ ದೇಶ ನಮ್ಮದಾಗಿದೆ. ಹಾಗಾಗಿ ಇಸ್ರೇಲ್ ಅನ್ನು ಗುರುತಿಸುವ ಪ್ರಶ್ನೆಯೇ ಇಲ್ಲ ಮತ್ತು ಈ ಒಪ್ಪಂದ ನಮಗೆ ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂಬ ಸ್ಪಷ್ಟ ನಿಲುವನ್ನು ನಾವು ಹೊಂದಿದ್ದೇವೆ" ಎಂದು ಕಡಾಖಂಡಿತವಾಗಿ ಹೇಳಿದ್ದಾರೆ. ಇರಾನ್ ಜೊತೆಗಿನ ಶಾಂತಿ ಮಾತುಕತೆಯ ನೆಪದಲ್ಲಿ ಇಸ್ರೇಲ್ ಜೊತೆ ಬಲವಂತದ ಮೈತ್ರಿಗೆ ಮುಂದಾಗಿರುವ ಅಮೆರಿಕಾದ ನಡೆಗೆ ಗಲ್ಫ್ ವಲಯದಲ್ಲಿ ಈಗ ಭಾರಿ ರಾಜತಾಂತ್ರಿಕ ಸಂಘರ್ಷ ಉಂಟಾಗಿದೆ.

Category
ಕರಾವಳಿ ತರಂಗಿಣಿ