ವಾಷಿಂಗ್ಟನ್ : ಅಮೆರಿಕ ಮತ್ತು ಯಹೂದಿ ಸಮುದಾಯಗಳ ಮೇಲೆ ದಾಳಿಗಳನ್ನು ನಡೆಸಿದ ಆರೋಪದಡಿ ಬಂಧಿತನಾಗಿರುವ ಇರಾಕ್ ಪ್ರಜೆಯೋರ್ವ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಅವರ ಹತ್ಯೆಗೆ ಸಂಚು ರೂಪಿಸಿದ್ದ ಎಂಬ ಸ್ಫೋಟಕ ಮಾಹಿತಿಯೊಂದು ಇದೀಗ ಹೊರಬಿದ್ದಿದೆ. 2020 ರಲ್ಲಿ ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ನಡೆದ ಅಮೆರಿಕದ ಡ್ರೋನ್ ದಾಳಿಯಲ್ಲಿ, ಇರಾನ್‌ನ ಉನ್ನತ ಮಿಲಿಟರಿ ಕಮಾಂಡರ್ ಖಾಸೀಂ ಸುಲೈಮಾನಿ ಹತ್ಯೆಗೀಡಾಗಿದ್ದರು. ಖಾಸೀಂ ಸುಲೈಮಾನಿ ಹತ್ಯೆಗೆ ಪ್ರತೀಕಾರಕ್ಕಾಗಿ ಕಾಯುತ್ತಿರುವ ಇರಾನ್, ಅಮೆರಿಕ ಅಧ್ಯಕ್ಷರ ಪುತ್ರಿ ಇವಾಂಕಾ ಟ್ರಂಪ್ ಅವರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದಾಗಿ ಬಂಧಿತ 32 ವರ್ಷದ ಇರಾಕ್ ಮೂಲದ ವ್ಯಕ್ತಿ ಬಾಯ್ಬಿಟ್ಟಿದ್ದಾನೆ.
ಇವಾಂಕಾ ಟ್ರಂಪ್ ಅವರನ್ನು ಹತ್ಯೆ ಮಾಡಲೆಂದೇ ಇರಾಕ್‌ನಿಂದ ಅಮೆರಿಕಕ್ಕೆ ಬಂದಿದ್ದ ಮೊಹಮ್ಮದ್ ಬಕರ್ ಸಾದ್ ದಾವೂದ್ ಅಲ್-ಸಾದಿ, ಇರಾನ್‌ನ ಮಿಲಿಟರಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದ ಎಂದು ಆತನ ವಿಚಾರಣೆ ನಡೆಸುತ್ತಿರುವ ಪೊಲೀಸರು ಹೇಳಿದ್ದಾರೆ. ಈ ಕುರಿತು ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಟಿಸಿದ್ದು, ಇವಾಂಕಾ ಹತ್ಯೆಗೆ ದಾವೂದ್ ಯೋಜನೆಗಳು ಭಾರೀ ಘಾತಕವಾಗಿದ್ದವು ಎಂದು ಹೇಳಿದೆ. ಇವಾಂಕಾ ಟ್ರಂಪ್ ಅವರ ಫ್ಲೋರಿಡಾ ನಿವಾಸಕ್ಕೆ ಸಂಬಂಧಿಸಿದ ನೀಲನಕ್ಷೆಯನ್ನು ಅಲ್-ಸಾದಿ ಹೊಂದಿದ್ದ ಎಂಬುದು ತನಿಖೆಯಿಂದ ದೃಢಪಟ್ಟಿದೆ. ಅಷ್ಟೇ ಅಲ್ಲದೇ ಇವಾಂಕಾ ಪತಿ, ಡೊನಾಲ್ಡ್ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಅವರ ಮನೆಯ ಫೋಟೋಗಳನ್ನು ಆರೋಪಿ ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದ ಎಂದು ತಿಳಿದುಬಂದಿದೆ.
ಜೇರೆಡ್ ಕುಶ್ನರ್ ಮನೆಯ ಫೋಟೋಗಳನ್ನು ಹಂಚಿಕೊಂಡಿದ್ದ ಅಲ್-ಸಾದಿ, "ನಿಮ್ಮ ಅರಮನೆಗಳು ಅಥವಾ ರಹಸ್ಯ ಸೇವೆಗಳು ನಿಮ್ಮನ್ನು ರಕ್ಷಿಸುವುದಿಲ್ಲ. ಶೀಘ್ರದಲ್ಲೇ ಖಾಸೀಂ ಸುಲೈಮಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳಲಾಗುವುದು" ಎಂದು ಅರೇಬಿಕ್ ಭಾಷೆಯಲ್ಲಿ ಬೆದರಿಕೆ ಹಾಕಿದ್ದ. ವಾಷಿಂಗ್ಟನ್‌ನಲ್ಲಿರುವ ಇರಾಕಿ ರಾಯಭಾರ ಕಚೇರಿಯ ಮಾಜಿ ಉಪ ಮಿಲಿಟರಿ ನಾಯಕ ಎಂಟಿಫಾದ್ ಕಾನ್ಬರ್ ಕೂಡ ಅಲ್-ಸಾದಿ ಜೊತೆ ಸಂಪರ್ಕ ಹೊಂದಿದ್ದು, ಖಾಸೀ ಸುಲೈಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಆತನಿಗೆ ನೆರವು ನೀಡುತ್ತಿದ್ದ ಎಂಬುದು ಪೊಲೀಸ್ ವಿಚಾರಣೆಯಲ್ಲಿ ಗೊತ್ತಾಗಿದೆ. ಬಂಧಿತ ಅಲ್-ಸಾದಿ ಇವಾಂಕಾ ಟ್ರಂಪ್ ಅವರ ಮನೆಯನ್ನು ಸುಟ್ಟುಹಾಕಲು ರೂಪಿಸಿದ್ದ ಯೋಜನೆಗೆ, ಕಾನ್ಬರ್ ಸಾಥ್ ನೀಡಿದ್ದ ಎನ್ನಲಾಗಿದೆ.
ಅಮೆರಿಕದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ ಆರೋಪದ ಮೇಲೆ, ಕಳೆದ ಮೇ 15ರಂದು ಟರ್ಕಿಯಲ್ಲಿ ಅಲ್-ಸಾದಿಯನ್ನು ಬಂಧಿಸಲಾಗಿತ್ತು. ಟರ್ಕಿಯು ಆರೋಪಿಯನ್ನು ಅಮೆರಿಕಕ್ಕೆ ಹಸ್ತಾಂತರಿಸಿತ್ತು. ಅಮೆರಿಕದ ನ್ಯಾಯಾಂಗ ಇಲಾಖೆಯು ಆತನ ಮೇಲೆ ಯುರೋಪ್ ಮತ್ತು ಅಮೆರಿಕದಲ್ಲಿ ಒಟ್ಟು 18 ದಾಳಿಗಳನ್ನು ನಡೆಸಿದ ಆರೋಪ ಅಲ್-ಸಾದಿ ಮೇಲೆ ಹೊರಿಸಿದೆ. ಆಮ್ಸ್ಟರ್‌ಡ್ಯಾಮ್‌ನ ಬ್ಯಾಂಕ್ ಆಫ್ ನ್ಯೂಯಾರ್ಕ್ ಮೆಲನ್ ಕಟ್ಟಡದ ಮೇಲೆ ನಡೆದ ಬಾಂಬ್ ದಾಳಿ, ಟೊರೊಂಟೊದ ಅಮೆರಿಕ ಕಾನ್ಸುಲೇಟ್ ಬಳಿ ನಡೆದ ಗುಂಡಿನ ದಾಳಿ ಮತ್ತು ಈ ವರ್ಷದ ಆರಂಭದಲ್ಲಿ ಲಂಡನ್‌ನಲ್ಲಿ ಇಬ್ಬರು ಯಹೂದಿಗಳಿಗೆ ಚಾಕು ಇರಿತ ಸೇರಿದಂತೆ, ಹಲವಾರು ವಿಧ್ವಂಸಕ ಕೃತ್ಯಗಳಲ್ಲಿ ಆತನ ಪಾತ್ರವಿದೆ ಎಂದು ಫೆಡರಲ್ ಅಧಿಕಾರಿಗಳು ಆರೋಪಿಸಿದ್ದಾರೆ. ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿರುವ ಯಹೂದಿ ಸ್ಥಳಗಳ ಮೇಲೆ ದಾಳಿಗಳನ್ನು ಯೋಜಿಸಿದ ಆರೋಪ ಕೂಡ ಅಲ್-ಸಾದಿ ಮೇಲಿದೆ. ಅಲ್-ಸಾದಿ ಇರಾಕ್ ಮೂಲದ ಕಟೈಬ್ ಹಿಜ್‌ಬಲ್ಲಾ ಸಂಘಟನೆ ಮತ್ತು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 2024ರಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಖಾಸೀಂ ಸುಲೈಮಾನಿ ಹತ್ಯೆಗೆ ಪ್ರತೀಕಾರವಾಗಿ ಡೊನಾಲ್ಡ್ ಟ್ರಂಪ್ ಹತ್ಯೆ ಯೋಜನೆ ರೂಪಿಸಿದ್ದ ಪಾಕಿಸ್ತಾನಿ ಪ್ರಜೆ ಬಂಧನ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.