ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಪ್ರಸ್ತುತ ಯುದ್ಧದ ಪರಿಸ್ಥಿತಿಯ ಕುರಿತು ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ. ವಾಷಿಂಗ್ಟನ್ ಬಳಿಯ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಇಸ್ರೇಲ್‌ನಲ್ಲಿ ತಮಗೆ ಶೇಕಡಾ 99 ರಷ್ಟು ಸಾರ್ವಜನಿಕ ಬೆಂಬಲವಿದ್ದು, ತಾವು ಅಲ್ಲಿ ಪ್ರಧಾನಿ ಹುದ್ದೆಗೂ ಸ್ಪರ್ಧಿಸಬಹುದು ಎಂದು ತಮಾಷೆಯಾಗಿ ನುಡಿದಿದ್ದಾರೆ.
ಮಾಧ್ಯಮಗಳು ಇರಾನ್ ಯುದ್ಧದ ಕುರಿತು ಇಸ್ರೇಲ್‌ಗೆ ಅಮೆರಿಕಾ ನೀಡಿದ ಸಂದೇಶದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಟ್ರಂಪ್, "ಇಸ್ರೇಲ್ ಪ್ರಧಾನಿ ನೆತನ್ಯಾಹು ನಾನು ಏನು ಹೇಳುತ್ತೇನೋ ಅದನ್ನು ಮಾಡುತ್ತಾರೆ. ಅವರು ತುಂಬಾ ಒಳ್ಳೆಯ ಮನುಷ್ಯ. ನಾನು ಏನನ್ನು ಬಯಸುತ್ತೇನೋ, ಅದನ್ನೇ ಅವರು ಮಾಡುತ್ತಾರೆ. ಆದರೆ ಪ್ರಸ್ತುತ ಇಸ್ರೇಲ್‌ನಲ್ಲಿ ನೆತನ್ಯಾಹು ಅವರಿಗೆ ವಿರೋಧ ವ್ಯಕ್ತವಾಗುತ್ತಿದೆ. ಅವರು ಯುದ್ಧದ ಸಮಯದ ಪ್ರಧಾನಿಯಾಗಿದ್ದಾರೆ, ಆದಾಗ್ಯೂ ಅಲ್ಲಿ ಅವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಇಸ್ರೇಲಿ ಜನರಿಂದ ತಮಗಿರುವ ಬೆಂಬಲದ ಬಗ್ಗೆ ಮಾತನಾಡುತ್ತಾ, "ನಾನು ಈಗ ಇಸ್ರೇಲ್‌ನಲ್ಲಿ ಶೇ. 99ರಷ್ಟು ಅನುಮೋದನೆ ಹೊಂದಿದ್ದೇನೆ. ನಾನು ಅಲ್ಲಿ ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ಸಾಧ್ಯವಿದೆ. ಹಾಗಾಗಿ ಇಲ್ಲಿನ (ಯುಎಸ್ ಅಧ್ಯಕ್ಷರ) ಜವಾಬ್ದಾರಿ ಮುಗಿದ ಬಳಿಕ ನಾನು ಇಸ್ರೇಲ್‌ಗೆ ಹೋಗಿ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ" ಎಂದು ಲಘು ದಾಟಿಯಲ್ಲಿ ಹೇಳಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಭೀಕರ ಯುದ್ಧದ ವಾತಾವರಣ ಇರುವ ಈ ಸಂದರ್ಭದಲ್ಲಿ ಟ್ರಂಪ್ ಅವರ ಈ ಮಾತುಗಳು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.
ಇದೇ ಸಂದರ್ಭದಲ್ಲಿ ಇರಾನ್ ಮೇಲಿನ ಅಮೆರಿಕಾದ ಸಂಭಾವ್ಯ ದಾಳಿ ಮತ್ತು ಶಾಂತಿ ಒಪ್ಪಂದದ ಸಾಧ್ಯತೆಗಳ ಕುರಿತು ಟ್ರಂಪ್ ಮಹತ್ವದ ಮಾಹಿತಿ ನೀಡಿದ್ದಾರೆ. ಇರಾನ್ ಜೊತೆಗಿನ ಮಾತುಕತೆಗಳು ಸದ್ಯ ಅಂತಿಮ ಹಂತದ ಗಡಿಯಲ್ಲಿದ್ದು, ಅತ್ಯಂತ ಶೀಘ್ರದಲ್ಲಿ ಅಥವಾ ಕೆಲವೇ ದಿನಗಳಲ್ಲಿ ಒಪ್ಪಂದವನ್ನು ಅಂತಿಮಗೊಳಿಸಬಹುದು ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ. ಆದರೆ, "ಈ ಒಪ್ಪಂದ ಸಾಧ್ಯವಾಗಬೇಕಾದರೆ ಟೆಹ್ರಾನ್ (ಇರಾನ್ ಸರ್ಕಾರ) ನಮಗೆ ಶೇ. 100 ರಷ್ಟು ಸೂಕ್ತ ಮತ್ತು ಉತ್ತಮ ಉತ್ತರಗಳನ್ನು ನೀಡಬೇಕಾಗುತ್ತದೆ. ನಾವೇನೂ ಆತುರದಲ್ಲಿಲ್ಲ. ಜಾಗತಿಕ ತೈಲ ಸಾಗಣೆಗೆ ಪ್ರಮುಖವಾಗಿರುವ ಹೊರ್ಮುಜ್ ಜಲಸಂಧಿಯನ್ನು ಮುಕ್ತವಾಗಿ ತೆರೆಯುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ನಾವು ಇರಾನ್‌ಗೆ ಒಂದು ಕೊನೆಯ ಅವಕಾಶವನ್ನು ನೀಡುತ್ತಿದ್ದೇವೆ. ಒಂದು ವೇಳೆ ಅವರಿಂದ ಸರಿಯಾದ ಉತ್ತರ ಬರದಿದ್ದರೆ, ದಾಳಿಗಳನ್ನು ಪುನರಾರಂಭಿಸಲು ನಾವು ಸಂಪೂರ್ಣ ಸಿದ್ಧರಾಗಿದ್ದೇವೆ" ಎಂದು ಟ್ರಂಪ್ ಎಚ್ಚರಿಸಿದ್ದಾರೆ.