ಬೀಜಿಂಗ್ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಸುಮಾರು 16ಕ್ಕೂ ಹೆಚ್ಚು ಉದ್ಯಮಿಗಳು ಹಾಗೂ ಯುಎಸ್ ಅಧಿಕಾರಿಗಳ ನಿಯೋಗ ಇತ್ತೀಚೆಗೆ ಚೀನಾ ಪ್ರವಾಸ ಕೈಗೊಂಡಿತ್ತು. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಹಾಗೂ ಆರ್ಥಿಕ ಸಂಬಂಧವನ್ನು ವೃದ್ದಿಗೊಳಿಸುವ ಉದ್ದೇಶದಿಂದ ನಡೆದ ಈ ಭೇಟಿಯಲ್ಲಿ ಹಲವು ಪ್ರಮುಖ ಮಾತುಕತೆಗಳು ಮತ್ತು ಒಪ್ಪಂದಗಳು ನಡೆದಿದ್ದವು. ಪ್ರವಾಸದ ಉದ್ದಕ್ಕೂ ಯುಎಸ್ ಮತ್ತು ಚೀನಾ ಪ್ರತಿಸ್ಪರ್ಧಿಗಳಾಗಿರದೆ ಪರಸ್ಪರ ಪಾಲುದಾರರಾಗಬೇಕು ಎಂದು ಟ್ರಂಪ್ ಪ್ರತಿಪಾದಿಸಿದ್ದರು. ಅಲ್ಲದೆ, ಎರಡೂ ದೇಶಗಳ ನಡುವೆ ಬೆಟ್ಟದಷ್ಟು ನಂಬಿಕೆಯಿದೆ ಎಂದು ಜಗತ್ತಿನ ಎದುರು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಆದರೆ, ವಾಸ್ತವದಲ್ಲಿ ಉಭಯ ದೇಶಗಳ ನಡುವಿನ ಅಪನಂಬಿಕೆ ಎಳ್ಳಷ್ಟು ಕಡಿಮೆಯಾಗಿಲ್ಲ ಎಂಬುದು ಇದೀಗ ಮತ್ತೊಮ್ಮೆ ಬಹಿರಂಗವಾಗಿ ಸಾಬೀತಾಗಿದೆ. ಚೀನಾ ಪ್ರವಾಸ ಮುಗಿಸಿ ಅಮೆರಿಕಾಗೆ ಹಿಂದಿರುಗುವ ಸಂದರ್ಭದಲ್ಲಿ ಟೀಂ ಟ್ರಂಪ್ ಕೈಗೊಂಡ ಹಠಾತ್ ನಿರ್ಧಾರವೊಂದು ಇಡೀ ವಿಶ್ವವೇ ಹುಬ್ಬೇರಿಸುವಂತೆ ಮಾಡಿದೆ.
ಚೀನಾ ಪ್ರವಾಸ ಮುಗಿಸಿ ಅಮೆರಿಕಾಗೆ ಮರಳಲು ಸಜ್ಜಾಗುತ್ತಿದ್ದ ಟ್ರಂಪ್ ನಿಯೋಗ, ತಮಗೆ ಚೀನಾದಲ್ಲಿ ಸಿಕ್ಕ ಎಲ್ಲಾ ಅಧಿಕೃತ ಉಡುಗೊರೆಗಳು ಮತ್ತು ಸಾಮಗ್ರಿಗಳನ್ನು ಏರ್ ಫೋರ್ಸ್ ವಿಮಾನ ಹತ್ತುವ ಮೊದಲೇ ವಿಮಾನ ನಿಲ್ದಾಣದ ಕಸದ ಬುಟ್ಟಿಗೆ ಎಸೆದಿದೆ. ಅಮೆರಿಕಾಗೆ ಹಿಂದಿರುಗುವಾಗ ಏರ್ ಫೊರ್ಸ್ ವಿಮಾನದಲ್ಲಿ ಚೀನಾದಿಂದ ಬಂದ ಯಾವುದೇ ವಸ್ತುಗಳಿಗೆ ಅವಕಾಶವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಟ್ರಂಪ್ ನಿಯೋಗ ಹಾಗೂ ಅವರ ಜೊತೆಯಲ್ಲಿದ್ದ ಮಾಧ್ಯಮ ಸಿಬ್ಬಂದಿಗಳಿಗೆ ಕಟ್ಟುನಿಟ್ಟಾಗಿ ರವಾನಿಸಲಾಗಿತ್ತು. ಈ ಆದೇಶದ ಬೆನ್ನಲ್ಲೇ ವಿಮಾನದ ಕೆಳಭಾಗದಲ್ಲೇ ಇದ್ದ ಕಸದ ಬುಟ್ಟಿಯಲ್ಲಿ ಚೀನಾ ಸರ್ಕಾರ ನೀಡಿದ್ದ ಪ್ರೆಸ್ ಪಾಸ್‌ಗಳಿಂದ ಹಿಡಿದು, ಭದ್ರತೆಯ ದೃಷ್ಟಿಯಿಂದ ನೀಡಲಾಗಿದ್ದ ಬರ್ನರ್ ಫೋನ್‌ಗಳವರೆಗೆ ಚೀನಾ ಮೂಲದ ಎಲ್ಲಾ ಸಾಮಗ್ರಿಗಳನ್ನು ಎಸೆಯಲಾಯಿತು. ಟ್ರಂಪ್ ಅವರೊಂದಿಗೆ ಈ ಪ್ರವಾಸದಲ್ಲಿ ಭಾಗಿಯಾಗಿದ್ದ ನ್ಯೂಯಾರ್ಕ್ ಪೋಸ್ಟ್ ಸಂಸ್ಥೆಯ ವೈಟ್ ಹೌಸ್ ವರದಿಗಾರ್ತಿ ಎಮಿಲಿ ಗುಡಿನ್ ಅವರು ಈ ಆಘಾತಕಾರಿ ದೃಶ್ಯವನ್ನು ಖಚಿತಪಡಿಸಿದ್ದು, ತಮ್ಮ ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಚೀನಾದ ಕಣ್ಗಾವಲು ಮತ್ತು ಗೂಢಚರ್ಯೆಯ ಭೀತಿಯಿಂದಲೇ ಅಮೆರಿಕಾ ಈ ಕಠಿಣ ಕ್ರಮ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಈ ಘಟನೆ ಜಾಗತಿಕ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.