image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಇರಾಕ್ ಮರುಭೂಮಿಯಲ್ಲಿ ಇಸ್ರೇಲ್‌ನ ರಹಸ್ಯ ಮಿಲಿಟರಿ ನೆಲೆ ಪತ್ತೆ: ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕದ ಬೆಂಬಲದೊಂದಿಗೆ ಸ್ಫೋಟಕ ಸಂಚು!

ಇರಾಕ್ ಮರುಭೂಮಿಯಲ್ಲಿ ಇಸ್ರೇಲ್‌ನ ರಹಸ್ಯ ಮಿಲಿಟರಿ ನೆಲೆ ಪತ್ತೆ: ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕದ ಬೆಂಬಲದೊಂದಿಗೆ ಸ್ಫೋಟಕ ಸಂಚು!

ಅಮೇರಿಕಾ : ​ಇರಾಕ್‌ನ ಪಶ್ಚಿಮ ಮರುಭೂಮಿಯ ಅಂತರಾಳದಲ್ಲಿ ಅಡಗಿದ್ದ ಇಸ್ರೇಲ್‌ನ ಬೃಹತ್ ರಹಸ್ಯ ಮಿಲಿಟರಿ ಕಾರ್ಯಾಚರಣೆಯೊಂದು ಈಗ ಜಗತ್ತಿನ ಮುಂದೆ ಬಯಲಾಗಿದೆ. ಇರಾನ್ ವಿರುದ್ಧದ ವಾಯುದಾಳಿಯನ್ನು ತೀವ್ರಗೊಳಿಸುವ ಉದ್ದೇಶದಿಂದ ಇರಾಕ್ ಸರ್ಕಾರಕ್ಕೂ ಸುಳಿವು ನೀಡದೆ ಇಸ್ರೇಲ್ ಅಲ್ಲಿ ತನ್ನ ಮಿಲಿಟರಿ ನೆಲೆಯನ್ನು ಸ್ಥಾಪಿಸಿತ್ತು ಎಂಬ ಬೆಚ್ಚಿಬೀಳಿಸುವ ಮಾಹಿತಿಯನ್ನು ಅಮೆರಿಕದ ಅಧಿಕಾರಿಗಳೇ ಖಚಿತಪಡಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಹೇಳಿದೆ. ಮರುಭೂಮಿಯಲ್ಲಿ ಕುರಿ ಮೇಯಿಸುತ್ತಿದ್ದ ಸ್ಥಳೀಯ ಕುರಿಗಾಹಿಯೊಬ್ಬನಿಗೆ ಹೆಲಿಕಾಪ್ಟರ್‌ಗಳ ನಿಗೂಢ ಹಾರಾಟ ಕಂಡುಬಂದಿದ್ದೇ ಈ ರಹಸ್ಯ ಬಯಲಾಗಲು ಕಾರಣವಾಯಿತು. ಆತ ನೀಡಿದ ಮಾಹಿತಿಯ ಮೇರೆಗೆ ಇರಾಕ್ ಮಿಲಿಟರಿ ತನಿಖೆ ನಡೆಸಿದಾಗ, ಅಲ್ಲಿ ಇಸ್ರೇಲ್‌ನ ವಿಶೇಷ ಪಡೆಗಳು ಬೀಡುಬಿಟ್ಟಿರುವುದು ಪತ್ತೆಯಾಗಿದೆ.

​ಈ ರಹಸ್ಯ ನೆಲೆಯು ಇಸ್ರೇಲ್ ವಾಯುಪಡೆಗೆ ಇಂಧನ ಮರುಪೂರಣ ಮತ್ತು ತಾಂತ್ರಿಕ ನೆರವು ನೀಡುವ ಲಜಿಸ್ಟಿಕಲ್ ಹಬ್ ಆಗಿ ಕಾರ್ಯನಿರ್ವಹಿಸುತ್ತಿತ್ತು. ಇಸ್ರೇಲ್‌ನಿಂದ ಇರಾನ್ ಸುಮಾರು 1,000 ಮೈಲಿ ದೂರವಿರುವುದರಿಂದ, ಸುದೀರ್ಘ ವಾಯು ಕಾರ್ಯಾಚರಣೆ ನಡೆಸಲು ಇರಾಕ್‌ನ ಈ ಮರುಭೂಮಿ ಇಸ್ರೇಲ್‌ಗೆ ವರದಾನವಾಗಿತ್ತು. ಒಂದು ವೇಳೆ ಇರಾನ್ ದಾಳಿಯ ಸಂದರ್ಭದಲ್ಲಿ ಇಸ್ರೇಲಿ ಪೈಲಟ್‌ಗಳು ಸಂಕಷ್ಟಕ್ಕೆ ಸಿಲುಕಿದರೆ, ಅವರನ್ನು ತಕ್ಷಣ ರಕ್ಷಿಸಲು ಸರ್ಚ್ ಆಂಡ್ ರೆಸ್ಕ್ಯೂ ತಂಡಗಳು ಇಲ್ಲಿ ಸನ್ನದ್ಧವಾಗಿದ್ದವು. ಈ ಸತ್ಯವನ್ನು ಮುಚ್ಚಿಡಲು ಇಸ್ರೇಲ್ ಮಾರ್ಚ್ ಆರಂಭದಲ್ಲಿ ಇರಾಕ್ ಸೈನಿಕರ ಮೇಲೆಯೇ ವಾಯುದಾಳಿ ನಡೆಸಿ ಒಬ್ಬ ಸೈನಿಕನನ್ನು ಕೊಂದಿತ್ತು. ಈ ಘಟನೆಯಿಂದ ಕೆರಳಿದ ಇರಾಕ್ ಸೈನ್ಯವು ತನಿಖೆಯನ್ನು ತೀವ್ರಗೊಳಿಸಿದಾಗ ವಿದೇಶಿ ಪಡೆಗಳ ಉಪಸ್ಥಿತಿಗೆ ಪಕ್ಕಾ ಸಾಕ್ಷ್ಯಗಳು ದೊರೆತಿವೆ. ಇರಾಕ್‌ನ ಜಂಟಿ ಕಾರ್ಯಾಚರಣೆ ಕಮಾಂಡ್‌ನ ಡೆಪ್ಯುಟಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೈಸ್ ಅಲ್-ಮುಹಮ್ಮದಾವಿ ಅವರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅನುಮತಿಯಿಲ್ಲದೆ ನಡೆದ ಈ ಕಾರ್ಯಾಚರಣೆಯನ್ನು ಖಂಡಿಸಿದ್ದಾರೆ. ಪ್ರಸ್ತುತ ಇರಾಕ್ ಈ ವಿಚಾರವಾಗಿ ವಿಶ್ವಸಂಸ್ಥೆಗೆ ದೂರು ನೀಡಿದ್ದು, ಅಮೆರಿಕವು ಈ ದಾಳಿಯಲ್ಲಿ ತನ್ನ ಪಾತ್ರವಿಲ್ಲವೆಂದು ಹೇಳುವ ಮೂಲಕ ಇಸ್ರೇಲ್ ಮೇಲೆ ಬೆರಳು ತೋರಿಸಿದೆ. ಅಚ್ಚರಿಯ ವಿಷಯವೆಂದರೆ, ಹಿಂದೆ ಸದ್ದಾಂ ಹುಸೇನ್ ವಿರುದ್ಧದ ಯುದ್ಧಕ್ಕೆ ಅಮೆರಿಕ ಬಳಸಿದ್ದ ಇದೇ ಮರುಭೂಮಿಯನ್ನು ಈಗ ಇಸ್ರೇಲ್ ತನ್ನ ರಹಸ್ಯ ಉದ್ದೇಶಕ್ಕೆ ಬಳಸಿಕೊಂಡಿದೆ.

Category
ಕರಾವಳಿ ತರಂಗಿಣಿ