ಟೆಹರಾನ್ : ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿಯನ್ನು ಸಂಪರ್ಕಿಸುವ ಆಯಕಟ್ಟಿನ ಪ್ರದೇಶವಾದ ಹಾರ್ಮುಜ್ ಜಲಸಂಧಿಯ ಬಳಿ ಸಂಭವಿಸಿದ ಭೀಕರ ಹಡಗು ಅಪಘಾತದಲ್ಲಿ ಓರ್ವ ಭಾರತೀಯ ನಾವಿಕ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಮೂಲಗಳು ಖಚಿತಪಡಿಸಿವೆ. ಸಾಮಾನ್ಯ ಸರಕುಗಳನ್ನು ಸಾಗಿಸುತ್ತಿದ್ದ ಈ ಹಡಗಿನಲ್ಲಿದ್ದ ಮರದ ದೋಣಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಬಳಿಕ ಹಡಗು ಮಗುಚಿ ಬಿದ್ದಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಶುಕ್ರವಾರ ನಡೆದ ಈ ಘಟನೆಯ ಸಂದರ್ಭದಲ್ಲಿ ಹಡಗಿನಲ್ಲಿ ಒಟ್ಟು 18 ಭಾರತೀಯ ಸಿಬ್ಬಂದಿಗಳಿದ್ದರು. ಈ ಪೈಕಿ 17 ಜನರನ್ನು ಆ ಮಾರ್ಗವಾಗಿ ಸಾಗುತ್ತಿದ್ದ ಮತ್ತೊಂದು ಹಡಗಿನ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ರಕ್ಷಿಸಿದ್ದಾರೆ. ಘಟನೆಯಲ್ಲಿ ನಾಲ್ವರು ನಾವಿಕರು ತೀವ್ರವಾಗಿ ಸುಟ್ಟ ಗಾಯಗಳಿಗೆ ಒಳಗಾಗಿದ್ದು, ಪ್ರಸ್ತುತ ಅವರಿಗೆ ದುಬೈನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ರಕ್ಷಿಸಲ್ಪಟ್ಟ ನಾವಿಕರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ಕಾನೂನು ಮತ್ತು ವೈದ್ಯಕೀಯ ನೆರವು ನೀಡುವುದಾಗಿ ರಾಯಭಾರಿ ಕಚೇರಿ ಭರವಸೆ ನೀಡಿದೆ. ಜಾಗತಿಕ ತೈಲ ಪೂರೈಕೆಯ ಪ್ರಮುಖ ಕೇಂದ್ರವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಈ ಅಪಘಾತ ಸಂಭವಿಸಿದೆ. ಬೆಂಕಿ ಅವಘಡಕ್ಕೆ ನಿಖರವಾದ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತೇ ಅಥವಾ ತಾಂತ್ರಿಕ ದೋಷವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.