image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಪಾಕಿಸ್ತಾನಕ್ಕೆ ಚೀನಾ ಶಾಕ್: ಗ್ವಾದರ್ ಬಂದರಿನಿಂದ ಹೊರನಡೆದ ಹ್ಯಾನ್ ಗೆಂಗ್ ಕಂಪನಿ, ಸಿಪಿಇಸಿ ಭವಿಷ್ಯ ಅತಂತ್ರ

ಪಾಕಿಸ್ತಾನಕ್ಕೆ ಚೀನಾ ಶಾಕ್: ಗ್ವಾದರ್ ಬಂದರಿನಿಂದ ಹೊರನಡೆದ ಹ್ಯಾನ್ ಗೆಂಗ್ ಕಂಪನಿ, ಸಿಪಿಇಸಿ ಭವಿಷ್ಯ ಅತಂತ್ರ

ಇಸ್ಲಾಮಾಬಾದ್ : ಪಾಕಿಸ್ತಾನದ ಆರ್ಥಿಕತೆಯ ಬೆನ್ನೆಲುಬೆಂದು ಬಿಂಬಿತವಾಗಿದ್ದ ಬಹುಕೋಟಿ ವೆಚ್ಚದ 'ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್' (CPEC) ಯೋಜನೆಗೆ ಈಗ ಚೇತರಿಸಿಕೊಳ್ಳಲಾಗದ ದೊಡ್ಡ ಆಘಾತ ಎದುರಾಗಿದೆ. ಗ್ವಾದರ್ ಬಂದರಿನಲ್ಲಿ ಪ್ರಮುಖ ಕಾರ್ಯಾಚರಣೆ ನಡೆಸುತ್ತಿದ್ದ ಚೀನಾದ ಖ್ಯಾತ ವ್ಯಾಪಾರ ಸಂಸ್ಥೆ 'ಹ್ಯಾನ್ ಗೆಂಗ್' (Han Geng), ಪಾಕಿಸ್ತಾನದ ಕೆಂಪು ಪಟ್ಟಿ ಆಡಳಿತ, ನಿರಂತರ ಭದ್ರತಾ ಭೀತಿ ಮತ್ತು ಅನಿಶ್ಚಿತ ನೀತಿಗಳಿಂದ ಬೇಸತ್ತು ತನ್ನ ವ್ಯವಹಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಪಾಕಿಸ್ತಾನ ಮತ್ತು ಚೀನಾ ನಡುವಿನ 'ಉಕ್ಕಿನಂತಹ ಸ್ನೇಹ'ದ ಬಗ್ಗೆ ಪಾಕಿಸ್ತಾನದ ನಾಯಕರು ಜಗತ್ತಿನಾದ್ಯಂತ ಸಾರುತ್ತಿದ್ದರೂ, ವಾಸ್ತವದಲ್ಲಿ ಚೀನಾದ ಹೂಡಿಕೆದಾರರಿಗೆ ಕನಿಷ್ಠ ಭದ್ರತೆ ಮತ್ತು ಪೂರಕ ವಾತಾವರಣ ಒದಗಿಸಲು ಪಾಕಿಸ್ತಾನ ವಿಫಲವಾಗಿರುವುದನ್ನು ಈ ಬೆಳವಣಿಗೆ ಸಾಬೀತುಪಡಿಸಿದೆ.

​ಬಲೂಚಿಸ್ತಾನ ಪ್ರಾಂತ್ಯದ ಗ್ವಾದರ್‌ನಲ್ಲಿ ತನ್ನ ಬೃಹತ್ ಘಟಕವನ್ನು ಹೊಂದಿದ್ದ ಹ್ಯಾನ್ ಗೆಂಗ್ ಗ್ರೂಪ್, ಮೇ 1 ರಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, "ಮಾರುಕಟ್ಟೆ ರಹಿತ ಅಂಶಗಳು ಮತ್ತು ಕಾರ್ಯಾಚರಣೆಯ ಅಡೆತಡೆಗಳಿಂದಾಗಿ ಇನ್ನು ಮುಂದೆ ಕೆಲಸ ಮುಂದುವರಿಸಲು ಸಾಧ್ಯವಿಲ್ಲ" ಎಂದು ಕಟುವಾಗಿ ಹೇಳಿದೆ. ಕಂಪನಿಯು ಅಂತರಾಷ್ಟ್ರೀಯ ಆಹಾರ ಸುರಕ್ಷತಾ ಗುಣಮಟ್ಟವನ್ನು ಹೊಂದಿದ್ದರೂ ಸಹ, ಪಾಕಿಸ್ತಾನದ ಆಡಳಿತ ಮಂಡಳಿಗಳು ಅದರ ರಫ್ತು ಪ್ರಕ್ರಿಯೆಗೆ ಅನಗತ್ಯ ಅಡೆತಡೆಗಳನ್ನು ಒಡ್ಡಿದ್ದವು ಎನ್ನಲಾಗಿದೆ. ಕಳೆದ ಮೂರು ತಿಂಗಳಿನಿಂದ ಕೇವಲ ಅನುಮತಿಗಾಗಿ ಕಾಯುತ್ತಿದ್ದ ಕಂಪನಿಯು ನೌಕರರ ಸಂಬಳ, ದಂಡ ಮತ್ತು ಇತರ ಶುಲ್ಕಗಳಿಂದಾಗಿ ಭಾರಿ ಆರ್ಥಿಕ ನಷ್ಟ ಅನುಭವಿಸಿದೆ. ಯಾವುದೇ ಉದ್ಯಮವು ಸ್ವಂತವಾಗಿ ಬಗೆಹರಿಸಿಕೊಳ್ಳಲಾಗದ ಮಟ್ಟಕ್ಕೆ ಇಲ್ಲಿನ ಸಮಸ್ಯೆಗಳು ಬೆಳೆದಿವೆ ಎಂದು ಕಂಪನಿ ಅಸಮಾಧಾನ ವ್ಯಕ್ತಪಡಿಸಿದೆ.

​ಈ ಬೆಳವಣಿಗೆಯು ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಭಾರಿ ಮುಜುಗರ ಉಂಟುಮಾಡಿದೆ. ಏಕೆಂದರೆ, ಇದೇ ತಿಂಗಳ ಕೊನೆಯಲ್ಲಿ ಅವರು ಹೂಡಿಕೆದಾರರ ಸಮ್ಮೇಳನದಲ್ಲಿ ಭಾಗವಹಿಸಲು ಚೀನಾಕ್ಕೆ ಭೇಟಿ ನೀಡಲಿದ್ದಾರೆ. ಆದರೆ, ಅದಕ್ಕೂ ಮುನ್ನವೇ ಹ್ಯಾನ್ ಗೆಂಗ್ ಕಂಪನಿಯು ಪಾಕಿಸ್ತಾನದಲ್ಲಿ ಹೂಡಿಕೆ ಮಾಡಲು ಇಚ್ಛಿಸುವ ಇತರ ಚೀನಾ ಕಂಪನಿಗಳಿಗೆ "ಎಚ್ಚರಿಕೆಯಿಂದ ಇರಿ" ಎಂಬ ನೇರ ಸಂದೇಶ ರವಾನಿಸಿರುವುದು ಹೂಡಿಕೆದಾರರ ವಿಶ್ವಾಸಕ್ಕೆ ಧಕ್ಕೆ ತಂದಿದೆ. ಬಲೂಚಿಸ್ತಾನದಲ್ಲಿ ಚೀನಾ ನಾಗರಿಕರ ಮೇಲೆ ನಡೆಯುತ್ತಿರುವ ನಿರಂತರ ಸಶಸ್ತ್ರ ದಾಳಿಗಳು ಮತ್ತು ಬಲೂಚ್ ಲಿಬರೇಶನ್ ಆರ್ಮಿ (BLA) ಅಂತಹ ಸಂಘಟನೆಗಳ ತೀವ್ರ ಪ್ರತಿರೋಧವೂ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ. ಅಮೆರಿಕ ಮತ್ತು ಚೀನಾ ಎಂಬ ಎರಡು ದೋಣಿಗಳ ಮೇಲೆ ಕಾಲಿಟ್ಟಿರುವ ಪಾಕಿಸ್ತಾನದ ಸೇನಾ ನಾಯಕತ್ವದ ಗೊಂದಲಕಾರಿ ನೀತಿಗಳಿಂದಾಗಿ ಚೀನಾಕ್ಕೆ ಪಾಕಿಸ್ತಾನದ ಮೇಲೆ ನಂಬಿಕೆ ಕುಸಿಯುತ್ತಿದ್ದು, ಗ್ವಾದರ್ ಬಂದರನ್ನು ಏಷ್ಯಾದ ವ್ಯಾಪಾರ ಕೇಂದ್ರವನ್ನಾಗಿ ಮಾಡುವ ಪಾಕಿಸ್ತಾನದ ಕನಸು ಸದ್ಯಕ್ಕೆ ಕಮರಿಹೋದಂತೆ ಕಾಣುತ್ತಿದೆ.

Category
ಕರಾವಳಿ ತರಂಗಿಣಿ