ನ್ಯೂ ಯಾರ್ಕ್ : ಲೆಬನಾನ್‌ನಲ್ಲಿ ಪೂರ್ಣ ಪ್ರಮಾಣದ ಯುದ್ಧವನ್ನು ತಪ್ಪಿಸಿ, ಕೇವಲ ಗುರಿ ಆಧಾರಿತ 'ಸರ್ಜಿಕಲ್ ಮಿಲಿಟರಿ' ದಾಳಿಗಳನ್ನು ಮಾತ್ರ ನಡೆಸುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಕುರಿತು 'ಆಕ್ಸಿಯೋಸ್' ವರದಿ ಮಾಡಿದ್ದು, ಕಾರ್ಯಾಚರಣೆಯ ವೇಳೆ ಅತ್ಯಂತ ಎಚ್ಚರಿಕೆ ವಹಿಸಬೇಕು ಮತ್ತು ಯಾವುದೇ ಕಾರಣಕ್ಕೂ ನಾಗರಿಕ ಕಟ್ಟಡಗಳನ್ನು ನಾಶಪಡಿಸಬಾರದು ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಇಸ್ರೇಲ್ ನಡೆಸುತ್ತಿರುವ ವ್ಯಾಪಕ ದಾಳಿಗಳು ಭಯಾನಕವಾಗಿದ್ದು, ಇದು ಜಾಗತಿಕ ಮಟ್ಟದಲ್ಲಿ ಇಸ್ರೇಲ್‌ನ ವರ್ಚಸ್ಸಿಗೆ ಧಕ್ಕೆ ತರುತ್ತಿದೆ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಲೆಬನಾನ್ ದೇಶ ಮತ್ತು ಅಲ್ಲಿನ ನಾಯಕತ್ವವನ್ನು ಶ್ಲಾಘಿಸಿದ ಅವರು, ಇರಾನ್ ಹಾಗೂ ಅದರ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯು ಲೆಬನಾನ್ ಅನ್ನು ವಿನಾಶದತ್ತ ದೂಡಿದೆ ಎಂದು ದೂರಿದ್ದಾರೆ. ಆದಾಗ್ಯೂ, ಪ್ರಸ್ತುತ ಬಿಕ್ಕಟ್ಟಿನಿಂದ ಚೇತರಿಸಿಕೊಂಡು ಮತ್ತೆ ಪುಟಿದೇಳುವ ಸಾಮರ್ಥ್ಯ ಲೆಬನಾನ್ ದೇಶಕ್ಕಿದೆ ಎಂಬ ವಿಶ್ವಾಸವನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ.