ಜಕಾರ್ತಾ: ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದ ಸಮೀಪ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 14 ಜನರು ಸಾವನ್ನಪ್ಪಿದ್ದು, 84ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜಕಾರ್ತಾದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಬೆಕಾಸಿ ತಿಮೂರ್ ನಿಲ್ದಾಣದಲ್ಲಿ ಈ ದುರಂತ ಸಂಭವಿಸಿದ್ದು, ಮೃತರ ಸಂಖ್ಯೆ ಇನ್ನು ಹೆಚ್ಚಾಗುವ ಆತಂಕ ಎದುರಾಗಿದೆ. ಬೆಕಾಸಿ ತಿಮೂರ್ ನಿಲ್ದಾಣದ ಲೆವೆಲ್ ಕ್ರಾಸಿಂಗ್‌ನಲ್ಲಿ ಮೊದಲು ಟ್ಯಾಕ್ಸಿಯೊಂದು ಪ್ರಯಾಣಿಕರ ರೈಲಿಗೆ ಡಿಕ್ಕಿ ಹೊಡೆದಿದೆ. ಈ ಕಾರಣದಿಂದ ರೈಲು ಹಳಿಯ ಮೇಲೆ ಸ್ಥಗಿತಗೊಂಡಿತ್ತು. ಇದೇ ಸಮಯದಲ್ಲಿ ವೇಗವಾಗಿ ಬಂದ ಮತ್ತೊಂದು ದೂರದ ಊರಿನ ರೈಲು, ನಿಂತಿದ್ದ ರೈಲಿಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದೇ ಈ ಮಹಾ ದುರಂತಕ್ಕೆ ಕಾರಣವಾಗಿದೆ ಎಂದು ಸರ್ಕಾರಿ ಸ್ವಾಮ್ಯದ ರೈಲು ನಿರ್ವಾಹಕ ಕೆಎಐ (KAI) ವಕ್ತಾರ ಫ್ರಾನೋಟೊ ವಿಬೋವೊ ತಿಳಿಸಿದ್ದಾರೆ.
ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ (ಬಸರ್ನಾಸ್), ಮಿಲಿಟರಿ, ಅಗ್ನಿಶಾಮಕ ದಳ ಮತ್ತು ರೆಡ್‌ಕ್ರಾಸ್ ಸಿಬ್ಬಂದಿ ಸತತ 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೋಗಿಗಳ ಅಡಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ 84 ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಿಕ್ಕಿ ಹೊಡೆದ ರೈಲಿನಲ್ಲಿ ಕೇವಲ ಮಹಿಳಾ ಪ್ರಯಾಣಿಕರಿದ್ದರು ಎಂದು ಜಕಾರ್ತಾ ಪೊಲೀಸ್ ಮುಖ್ಯಸ್ಥ ಅಸೆಪ್ ಎಡಿ ಸುಹೇರಿ ಮಾಹಿತಿ ನೀಡಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಇಂಡೋನೇಷ್ಯಾ ಅಧ್ಯಕ್ಷರು ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ, ರೈಲ್ವೆ ಕ್ರಾಸಿಂಗ್‌ಗಳಲ್ಲಿ ಕಾವಲುಗಾರರ ಇಲ್ಲದಿರುವುದೇ ಇಂತಹ ಘಟನೆಗಳಿಗೆ ಪ್ರಮುಖ ಕಾರಣ ಎಂದು ಮನಗಂಡಿರುವ ಅವರು, ತಕ್ಷಣವೇ ಬೆಕಾಸಿಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಸೂಚಿಸಿದ್ದಾರೆ. ದೇಶಾದ್ಯಂತ ಇರುವ ಕಾವಲು ರಹಿತ ಕ್ರಾಸಿಂಗ್‌ಗಳಲ್ಲಿ ಗಾರ್ಡ್ ಪೋಸ್ಟ್‌ಗಳನ್ನು ನಿರ್ಮಿಸಲು ಅಥವಾ ಫ್ಲೈಓವರ್‌ಗಳನ್ನು ನಿರ್ಮಿಸುವ ಮೂಲಕ ಸುರಕ್ಷತೆ ಹೆಚ್ಚಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.