ಇಸ್ಲಾಮಬಾದ್ : ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕಿಸ್ತಾನದಲ್ಲಿ ಈಗ ಇಂಧನ ಭದ್ರತೆಯ ಬಗ್ಗೆಯೂ ಗಂಭೀರ ಆತಂಕ ಎದುರಾಗಿದೆ. ದೇಶದಲ್ಲಿ ಕನಿಷ್ಠ ಒಂದು ದಿನದ ಅಗತ್ಯವನ್ನೂ ಪೂರೈಸಬಲ್ಲ 'ವ್ಯೂಹಾತ್ಮಕ ತೈಲ ಸಂಗ್ರಹಾಗಾರ' (Strategic Oil Reserve) ವ್ಯವಸ್ಥೆಯೇ ಇಲ್ಲ ಎಂದು ತಜ್ಞರಾದ ಅಲಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಸಮಾ ಟೀವಿಗೆ ನೀಡಿದ ಸಂದರ್ಶನದಲ್ಲಿ ದೇಶದ ತೈಲ ಬಿಕ್ಕಟ್ಟಿನ ವಾಸ್ತವದ ಬಗ್ಗೆ ಮಾತನಾಡಿರುವ ಅವರು, ನಮ್ಮ ದೇಶದಲ್ಲಿ ಪ್ರಸ್ತುತ ಕೇವಲ 5 ರಿಂದ 10 ದಿನಗಳ ಅಗತ್ಯ ಪೂರೈಸಬಹುದಾದ ವಾಣಿಜ್ಯ ಕಚ್ಚಾತೈಲ ಮಾತ್ರ ಲಭ್ಯವಿದೆ. ತೈಲ ಮಾರಾಟ ಕಂಪನಿಗಳ ಬಳಿ ಸುಮಾರು 20-21 ದಿನಗಳಿಗೆ ಆಗುವಷ್ಟು ದಾಸ್ತಾನು ಇದೆ. ಆದರೆ, ತುರ್ತು ಪರಿಸ್ಥಿತಿಯಲ್ಲಿ ದೇಶವನ್ನು ರಕ್ಷಿಸುವ ಕನಿಷ್ಠ ಒಂದು ದಿನದ ವ್ಯೂಹಾತ್ಮಕ ಸಂಗ್ರಹಾಗಾರವೂ ನಮ್ಮಲ್ಲಿಲ್ಲ ಎಂದು ವಿವರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಭಾರತದ ಬಲಿಷ್ಠ ತೈಲ ಸಂಗ್ರಹಣಾ ಸಾಮರ್ಥ್ಯದ ಬಗ್ಗೆ ಮಾತನಾಡಿರುವ ಅಲಿ, ಭಾರತವು ಸುಮಾರು 60 ರಿಂದ 70 ದಿನಗಳ ದೇಶದ ಬೇಡಿಕೆಯನ್ನು ಪೂರೈಸುವಷ್ಟು ಬೃಹತ್ ಪ್ರಮಾಣದ ಕಚ್ಚಾತೈಲವನ್ನು ಸಂಗ್ರಹಿಸಿಟ್ಟುಕೊಂಡಿದೆ. ತುರ್ತು ಸಂದರ್ಭದಲ್ಲಿ ಕೇವಲ ಒಂದು ಸಹಿ ಬಿದ್ದರೆ ಸಾಕು, ಅಷ್ಟೂ ತೈಲವು ಮಾರುಕಟ್ಟೆಗೆ ಬಿಡುಗಡೆಯಾಗಿ ಬಿಕ್ಕಟ್ಟನ್ನು ಶಮನಗೊಳಿಸುತ್ತದೆ ಎಂದು ಹೋಲಿಕೆ ಮಾಡಿದ್ದಾರೆ. ಜಾಗತಿಕ ಯುದ್ಧಗಳು ಅಥವಾ ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗ ದೇಶದ ದೈನಂದಿನ ಬೇಡಿಕೆಗೆ ತೊಂದರೆಯಾಗದಂತೆ ತಡೆಯಲು ಪ್ರತಿಯೊಂದು ರಾಷ್ಟ್ರವು ಭೂಗತವಾಗಿ ವ್ಯೂಹಾತ್ಮಕ ಸಂಗ್ರಹಾಗಾರಗಳನ್ನು ನಿರ್ಮಿಸಿಕೊಳ್ಳುತ್ತವೆ. ಭಾರತವು ಈಗಾಗಲೇ ಕರ್ನಾಟಕದ ಮಂಗಳೂರು, ಪಾದೂರು ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಇಂತಹ ಬೃಹತ್ ಭೂಗತ ಕೇಂದ್ರಗಳನ್ನು ಹೊಂದಿದೆ.
ಭಾರತದ ಈ ಕೇಂದ್ರಗಳ ಒಟ್ಟು ಸಂಗ್ರಹ ಸಾಮರ್ಥ್ಯ 53.3 ಲಕ್ಷ ಮೆಟ್ರಿಕ್ ಟನ್ ಅಂದರೆ ಸುಮಾರು 36.92 ದಶಲಕ್ಷ ಬ್ಯಾರೆಲ್ ನಷ್ಟಿದ್ದು, ಇದು ದೇಶದ 60 ರಿಂದ 70 ದಿನಗಳ ಬೇಡಿಕೆಯನ್ನು ಪೂರೈಸಬಲ್ಲದು. ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ಈ ಮುನ್ನೆಚ್ಚರಿಕಾ ಕ್ರಮವು ಅತ್ಯಂತ ಬಲಿಷ್ಠವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.