ಪೆಶಾವರ : ಭಾರತದ ಪಾಲಿಗೆ ಮೋಸ್ಟ್ ವಾಂಟೆಡ್ ಉಗ್ರನಾಗಿರುವ ಹಫೀಜ್ ಸಯೀದ್‌ನ ಆಪ್ತ ಸಹಚರ ಹಾಗೂ ಲಷ್ಕರ್-ಎ-ತೈಬಾ (LeT) ಸಂಘಟನೆಯ ಹಿರಿಯ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿಯನ್ನು ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಗಡಿ ಪ್ರದೇಶದಲ್ಲಿ ಶೇಖ್ ಯೂಸುಫ್ ಅಫ್ರಿದಿಯನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದ ದಾಳಿಕೋರರು, ಆತ ಬರುತ್ತಿದ್ದಂತೆ ಹೊಂಚು ಹಾಕಿ ಸತತವಾಗಿ ಗುಂಡಿನ ಮಳೆಗರೆದಿದ್ದಾರೆ. ಈ ಭೀಕರ ದಾಳಿಯಲ್ಲಿ ಅಫ್ರಿದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಹತ್ಯೆಗೀಡಾದ ಅಫ್ರಿದಿ, ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ಗೆ ಅತ್ಯಂತ ನಿಕಟವರ್ತಿಯಾಗಿದ್ದಲ್ಲದೆ, ಲಷ್ಕರ್ ಸಂಘಟನೆಯ ಹಣಕಾಸು ವ್ಯವಹಾರ ಹಾಗೂ ಹೊಸ ಉಗ್ರರ ನೇಮಕಾತಿ ಪ್ರಕ್ರಿಯೆಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದ ಎನ್ನಲಾಗಿದೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ನಿರಂತರವಾಗಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ಮತ್ತು ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಲು ಈತ ಸಕ್ರಿಯನಾಗಿದ್ದ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ. ಪಾಕಿಸ್ತಾನದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಾರತ ವಿರೋಧಿ ಉಗ್ರಗಾಮಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಸರಣಿ ಹತ್ಯೆಗಳ ಭಾಗವಾಗಿಯೇ ಈ ದಾಳಿ ನಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.