image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಇರಾನ್-ಅಮೆರಿಕ ಸಂಘರ್ಷ: ಟ್ರಂಪ್ ಶಾಂತಿ ಯತ್ನಕ್ಕೆ ಅಡ್ಡಗಾಲಾದರೇ ನೆತನ್ಯಾಹು? ತೆರೆಮರೆಯ ಆಟದ ಸ್ಫೋಟಕ ವರದಿ!

ಇರಾನ್-ಅಮೆರಿಕ ಸಂಘರ್ಷ: ಟ್ರಂಪ್ ಶಾಂತಿ ಯತ್ನಕ್ಕೆ ಅಡ್ಡಗಾಲಾದರೇ ನೆತನ್ಯಾಹು? ತೆರೆಮರೆಯ ಆಟದ ಸ್ಫೋಟಕ ವರದಿ!

ವಾಷಿಂಗ್ಟನ್: ಇಸ್ರೇಲ್ ಒತ್ತಡಕ್ಕೆ ಮಣಿದು ಇರಾನ್ ವಿರುದ್ಧ ಸಮರ ಸಾರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಈಗ ಆ ಯುದ್ಧವೇ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇಡೀ ವಿಶ್ವದ ಶಾಂತಿಗೆ ಭಂಗ ತಂದಿರುವ ಈ ಸಂಘರ್ಷವನ್ನು ಹೇಗಾದರೂ ಮಾಡಿ ಕೊನೆಗಾಣಿಸಲು ಟ್ರಂಪ್ ಸಾಹಸಪಡುತ್ತಿದ್ದಾರೆ. ಇದರ ಭಾಗವಾಗಿಯೇ ಇತ್ತೀಚೆಗೆ ಏಪ್ರಿಲ್ 9 ಮತ್ತು 10 ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ಶಾಂತಿ ಮಾತುಕತೆಗಳು ಅಂದುಕೊಂಡ ಯಶಸ್ಸು ಕಾಣದೆ ವಿಫಲವಾಗಿವೆ. ಆದರೂ ಸೋಲೊಪ್ಪದ ಟ್ರಂಪ್ ಕದನ ವಿರಾಮವನ್ನು ವಿಸ್ತರಿಸುವ ಮೂಲಕ ಇರಾನ್ ಅನ್ನು ಸಮಾಧಾನಪಡಿಸಲು ಮುಂದಾಗಿದ್ದಾರಾದರೂ, ಅವರ ಪ್ರಯತ್ನಗಳಿಗೆ ನಿರೀಕ್ಷಿತ ಫಲ ಸಿಗುತ್ತಿಲ್ಲ.

​ಈ ರಾಜತಾಂತ್ರಿಕ ವಿಫಲತೆಯ ಹಿಂದೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಚಾಣಾಕ್ಷ ನಡೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇಸ್ರೇಲ್ ಸದ್ಯಕ್ಕೆ ಇರಾನ್ ಮೇಲಿನ ನೇರ ದಾಳಿಗಳನ್ನು ಸ್ಥಗಿತಗೊಳಿಸಿದ್ದರೂ, ಅಮೆರಿಕವು ಇರಾನ್ ಜೊತೆ ಮೃದು ಧೋರಣೆ ತಳೆಯುವುದನ್ನು ನೆತನ್ಯಾಹು ಸಹಿಸುತ್ತಿಲ್ಲ. ಅಚ್ಚರಿಯ ವಿಷಯವೆಂದರೆ, ಶಾಂತಿ ಮಾತುಕತೆಯ ಯಾವುದೇ ಹಂತದಲ್ಲೂ ನೆತನ್ಯಾಹು ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿಲ್ಲ. ಆದರೆ, ಅವರು ತೆರೆಮರೆಯಲ್ಲೇ ನಿಂತು ಅಮೆರಿಕದ ನಿರ್ಧಾರಗಳನ್ನು ನಿಯಂತ್ರಿಸುತ್ತಿದ್ದಾರೆ ಮತ್ತು ಟ್ರಂಪ್ ಅವರ ನಡೆಗಳನ್ನು ತಮ್ಮ ಇಚ್ಛೆಯಂತೆ ಆಟ ಆಡಿಸುತ್ತಿದ್ದಾರೆ ಎಂಬ ಮಾತುಗಳು ಅಂತರರಾಷ್ಟ್ರೀಯ ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ.

​ಇತ್ತ ಇರಾನ್ ಕೂಡ ತನ್ನ ಹಠ ಬಿಡುತ್ತಿಲ್ಲ. ತನ್ನಲ್ಲಿರುವ ಪುಷ್ಠಿಕರಿಸಿದ ಯುರೇನಿಯಂ ಅನ್ನು ಹಸ್ತಾಂತರಿಸಲು ನಿರಾಕರಿಸಿರುವ ಇರಾನ್, ಯುದ್ಧದಿಂದಾದ ನಷ್ಟಕ್ಕೆ ಇಸ್ರೇಲ್ ಭಾರಿ ಪ್ರಮಾಣದ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದಿದೆ. ಆದರೆ ಅತ್ತ ನೆತನ್ಯಾಹು, ಇರಾನ್ ಯುರೇನಿಯಂ ಬಿಟ್ಟುಕೊಡಲೇಬೇಕು ಮತ್ತು ಯಾವುದೇ ಕಾರಣಕ್ಕೂ ಯುದ್ಧ ಪರಿಹಾರ ನೀಡುವುದಿಲ್ಲ ಎಂದು ಪರೋಕ್ಷವಾಗಿ ಅಮೆರಿಕದ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಸಂಘರ್ಷದ ಮಾತುಕತೆಗಳಿಂದ ನೆತನ್ಯಾಹು ದೂರ ಉಳಿಯುವ ಮೂಲಕ, ಇಸ್ರೇಲ್ ಮಧ್ಯಪ್ರಾಚ್ಯದ ಯಾವುದೇ ರಾಷ್ಟ್ರಕ್ಕೂ ತಲೆಬಾಗುವುದಿಲ್ಲ ಮತ್ತು ಸದಾ ಯುದ್ಧಕ್ಕೆ ಸಿದ್ಧ ಎಂಬ ಬಲಿಷ್ಠ ಸಂದೇಶವನ್ನು ಜಗತ್ತಿಗೆ ರವಾನಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಿಕ್ಕಟ್ಟು ಸದ್ಯಕ್ಕೆ ತಿಳಿಯಾಗುವ ಲಕ್ಷಣಗಳು ಕಾಣುತ್ತಿಲ್ಲ.

Category
ಕರಾವಳಿ ತರಂಗಿಣಿ