ಇರಾನ್ : ಇರಾನ್ ಆಡಳಿತದಲ್ಲಿ ಆಂತರಿಕ ಸಂಘರ್ಷ ನಡೆಯುತ್ತಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ಅಧ್ಯಕ್ಷರು ತೀವ್ರವಾಗಿ ಖಂಡಿಸಿದ್ದು, ದೇಶದ ನಾಯಕತ್ವದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್‌ನ ರಾಜಕೀಯ ಮತ್ತು ಮಿಲಿಟರಿ ನಾಯಕತ್ವವು ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಮಾರ್ಗದರ್ಶನದಲ್ಲಿ ಸಂಪೂರ್ಣವಾಗಿ ಒಗ್ಗಟ್ಟಾಗಿದೆ ಮತ್ತು ನಾವೆಲ್ಲರೂ ಕ್ರಾಂತಿಯ ನಾಯಕನಿಗೆ ವಿಧೇಯರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಹಾರ್ಮುಜ್ ಜಲಸಂಧಿಯ ದಿಗ್ಬಂಧನ ಮತ್ತು ಇರಾನ್ ನಾಯಕರ ನಡುವಿನ ಕಿತ್ತಾಟದ ಕುರಿತು ಟ್ರಂಪ್ ಮಾಡಿದ್ದ ಲೇವಡಿಗೆ ಈ ಮೂಲಕ ಇರಾನ್ ಅಧಿಕೃತವಾಗಿ ತಿರುಗೇಟು ನೀಡಿದೆ. ಇರಾನ್‌ನಲ್ಲಿ ಆಂತರಿಕ ಸಂಘರ್ಷವಿದೆ ಎಂಬುದು ಟ್ರಂಪ್ ಅವರ ಭ್ರಮೆಯಾಗಿದ್ದು, ಇಂತಹ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ನಮ್ಮ ಮೇಲೆ ಒತ್ತಡ ಹೇರಲು ಅಮೆರಿಕ ಹವಣಿಸುತ್ತಿದೆ ಎಂದು ಅವರು ಕಿಡಿಹಾದಿದ್ದಾರೆ. ಅಮೆರಿಕವು ನಮ್ಮಲ್ಲಿ ಒಡಕು ಮೂಡಿಸಲು ಪ್ರಯತ್ನಿಸುತ್ತಿದ್ದರೂ ಅದು ಸಾಧ್ಯವಿಲ್ಲ ಎಂದು ಹೇಳಿರುವ ಅವರು, ಇರಾನ್ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಸಮರ್ಥವಾಗಿದೆ ಮತ್ತು ಯಾವುದೇ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇರಾನ್ ಜೊತೆ ಹೊಸ ಒಪ್ಪಂದ ಮಾಡಿಕೊಳ್ಳುವವರೆಗೆ ಹಡಗುಗಳ ಸಂಚಾರ ತಡೆಯುವುದಾಗಿ ಟ್ರಂಪ್ ನೀಡಿದ್ದ ಎಚ್ಚರಿಕೆಯು ಅಂತಾರಾಷ್ಟ್ರೀಯ ಕಾನೂನುಗಳ ನೇರ ಉಲ್ಲಂಘನೆಯಾಗಿದೆ ಎಂದು ಇರಾನ್ ಇದೇ ಸಂದರ್ಭದಲ್ಲಿ ಬಣ್ಣಿಸಿದೆ.