image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಅಮೆರಿಕದ ಜನ್ಮಸಿದ್ಧ ಪೌರತ್ವ ಕಾಯ್ದೆಯ ವಿರುದ್ಧ ಸಮರ ಸಾರಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್!

ಅಮೆರಿಕದ ಜನ್ಮಸಿದ್ಧ ಪೌರತ್ವ ಕಾಯ್ದೆಯ ವಿರುದ್ಧ ಸಮರ ಸಾರಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್!

ವಾಷಿಂಗ್ಟನ್​ : ಅಮೆರಿಕದ ಜನ್ಮಸಿದ್ಧ ಪೌರತ್ವ ಕಾಯ್ದೆಯ ವಿರುದ್ಧ ಸಮರ ಸಾರಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ರಾಜಕೀಯ ವಿಶ್ಲೇಷಕ ಮೈಕೆಲ್ ಸ್ಯಾವೇಜ್​​ರ ವಿವಾದಾತ್ಮಕ ಹಾಗೂ ಜನಾಂಗೀಯ ನಿಂದನೆಯಿಂದ ಕೂಡಿದ ಪಾಡ್‌ಕ್ಯಾಸ್ಟ್ ಅನ್ನು ರೀ ಪೋಸ್ಟ್ ಮಾಡುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ. ಮೈಕೆಲ್ ಸ್ಯಾವೇಜ್ ತಮ್ಮ ಸ್ಯಾವೇಜ್ ನೇಷನ್ ಪಾಡ್‌ಕ್ಯಾಸ್ಟ್‌ನಲ್ಲಿ ಭಾರತ ಮತ್ತು ಚೀನಾದ ವಲಸಿಗರನ್ನು ಲ್ಯಾಪ್‌ಟಾಪ್‌ಗಳನ್ನು ಹೊಂದಿರುವ ದರೋಡೆಕೋರರು ಎಂದು ಕರೆದಿದ್ದಾರೆ. ಇವರು ಅಮೆರಿಕದ ಧ್ವಜದ ಮೇಲೆ ಕಾಲಿಟ್ಟಿದ್ದಾರೆ. ಎಲ್ಲಾ ಮಾಫಿಯಾ ಕುಟುಂಬಗಳು ಒಟ್ಟಾಗಿ ಮಾಡಿದ ಹಾನಿಗಿಂತ ಹೆಚ್ಚಿನ ಹಾನಿಯನ್ನು ಈ ವಲಸಿಗರು ಅಮೆರಿಕಕ್ಕೆ ಮಾಡಿದ್ದಾರೆ. ಅವರು ನಮ್ಮನ್ನು ಕುರುಡರನ್ನಾಗಿ ದೋಚಿದ್ದಾರೆ ಮತ್ತು ನಮ್ಮನ್ನೇ ದ್ವಿತೀಯ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಸ್ಯಾವೇಜ್ ಗಂಭೀರವಾಗಿ ಆರೋಪಿಸಿದ್ದಾರೆ.

ಅಮೆರಿಕದಲ್ಲಿ ನಾಗರಿಕರಲ್ಲದವರಿಗೆ ಜನಿಸುವ ಮಕ್ಕಳಿಗೆ ಸ್ವಯಂಚಾಲಿತವಾಗಿ ಪೌರತ್ವ ನೀಡುವ ಕಾನೂನನ್ನು ಸ್ಯಾವೇಜ್ ಕಟುವಾಗಿ ಟೀಕಿಸಿದ್ದಾರೆ. ವಲಸಿಗರು ಗರ್ಭಧಾರಣೆಯ ಒಂಬತ್ತನೇ ತಿಂಗಳಲ್ಲಿ ಮಗುವನ್ನು ಇಲ್ಲಿ ಬಿಡಲು ಬರುತ್ತಾರೆ. ಮಗು ನಾಗರಿಕನಾದ ತಕ್ಷಣ ಅವರು ತಮ್ಮ ಇಡೀ ಕುಟುಂಬವನ್ನು ಚೀನಾ, ಭಾರತ ಅಥವಾ ಭೂಮಿಯ ಮೇಲಿನ ಯಾವುದೇ ನರಕದಿಂದ ಇಲ್ಲಿಗೆ ಕರೆತರುತ್ತಾರೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ವಿಮಾನ ಪ್ರಯಾಣ, ಇಂಟರ್ನೆಟ್ ಇಲ್ಲದ ಕಾಲದಲ್ಲಿ ಬರೆಯಲಾದ ಅಮೆರಿಕದ ಸಂವಿಧಾನವು ಇಂದಿನ ಆಧುನಿಕ ವಲಸೆಯ ಸಂದರ್ಭದಲ್ಲಿ ಹಳೆಯದಾಗಿದೆ ಎಂದು ವಾದಿಸಿದ್ದಾರೆ.

ಕ್ಯಾಲಿಫೋರ್ನಿಯಾದ ಹೈಟೆಕ್ ಕಂಪನಿಗಳಲ್ಲಿನ ನೇಮಕಾತಿ ಪ್ರಕ್ರಿಯೆಯನ್ನು ಟೀಕಿಸಿದ ಸ್ಯಾವೇಜ್, ಅಲ್ಲಿ ಶ್ವೇತವರ್ಣೀಯ ಪುರುಷರು ಕೆಲಸ ಪಡೆಯುವ ಸಾಧ್ಯತೆಯೇ ಕಡಿಮೆಯಾಗಿದ್ದು, ಕಂಪನಿಗಳ ಎಲ್ಲಾ ಆಂತರಿಕ ಕಾರ್ಯವಿಧಾನಗಳನ್ನು ಭಾರತೀಯರು ಮತ್ತು ಚೀನಿಯರೇ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ವಿಶ್ವದ ಯಾವುದೇ ದೇಶ ಜನ್ಮಸಿದ್ಧ ಪೌರತ್ವ ನೀಡುವುದಿಲ್ಲ, ಅಮೆರಿಕ ಮಾತ್ರ ನೀಡುತ್ತಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ವಾಸ್ತವದಲ್ಲಿ ಕೆನಡಾ, ಮೆಕ್ಸಿಕೊ ಸೇರಿದಂತೆ ಸುಮಾರು 36 ದೇಶಗಳಲ್ಲಿ ಈ ಕಾನೂನು ಜಾರಿಯಲ್ಲಿದೆ. 2025ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಟ್ರಂಪ್ ಜನ್ಮಸಿದ್ಧ ಪೌರತ್ವ ನಿಲ್ಲಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದರು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಟ್ರಂಪ್ ವರ್ಸಸ್ ಬಾರ್ಬರಾ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್, ಒಂದು ವೇಳೆ ಸುಪ್ರೀಂ ಕೋರ್ಟ್ ನನ್ನ ಆದೇಶದ ವಿರುದ್ಧ ತೀರ್ಪು ನೀಡಿದರೆ, ಅದು ಅಮೆರಿಕದ ಘನತೆಗೆ ಧಕ್ಕೆ ತರುತ್ತದೆ ಮತ್ತು ಭಾರಿ ಆರ್ಥಿಕ ನಷ್ಟ ಉಂಟುಮಾಡುತ್ತದೆ ಎಂದು ಹೇಳಿದ್ದಾರೆ

Category
ಕರಾವಳಿ ತರಂಗಿಣಿ